ಗ್ರಾಮೀಣರ ವಲಸೆ ತಡೆಗೆ ನರೇಗಾ ಸಹಕಾರಿ

KannadaprabhaNewsNetwork |  
Published : Apr 21, 2025, 12:48 AM IST
ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಣಿಗಿ ಗ್ರಾಮದಲ್ಲಿ ಮನರೇಗಾ ಯೋಜನೆಯ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ಮಾಡಿದರು. | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ಅವಲಂಬಿಸಿರುವ ವಲಸೆ ಪ್ರವೃತ್ತಿಯನ್ನು ತಡೆಯಲು ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಜನರಿಗೆ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ವಲಸೆ ಹೋಗುವುದು ಬಿಟ್ಟು ಇದ್ದರಲ್ಲೇ ಕೆಲಸ ಮಾಡುವ ಮೂಲಕ ಕೆಲಸದ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಜೀವನ ನಿರ್ವಹಣೆಗಾಗಿ ಅವಲಂಬಿಸಿರುವ ವಲಸೆ ಪ್ರವೃತ್ತಿಯನ್ನು ತಡೆಯಲು ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಜನರಿಗೆ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ವಲಸೆ ಹೋಗುವುದು ಬಿಟ್ಟು ಇದ್ದರಲ್ಲೇ ಕೆಲಸ ಮಾಡುವ ಮೂಲಕ ಕೆಲಸದ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ತಿಳಿಸಿದರು.

ತಾಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಚಟ್ನಳ್ಳಿ ಹಾಗೂ ಕರಣಗಿ ಗ್ರಾಮದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಗತಿಯಲ್ಲಿದ್ದ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ವೀಕ್ಷಿಸಿ, ಕೂಲಿಕಾರರ ಹಾಜರಾತಿ ಪರಿಶೀಲಿಸುವ ಮೂಲಕ ಕೂಲಿಕಾರರ ಸಮಸ್ಯೆ ಆಲಿಸಿ, ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಬೇಸಿಗೆ ಬಿಸಿಲು ಹಾಗೂ ಝಳ ಹೆಚ್ಚಿದ್ದು, ಗ್ರಾಮೀಣ ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ನರೇಗಾ ಕೂಲಿಕಾರರು ಮಾಡುವ ಕೆಲಸದ ಅವಧಿ ಬದಲಾಯಿಸಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಪಡಿಸಿದೆ. ಕೂಲಿಕಾರರು ಮಾಡುವ ಕೆಲಸದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಿದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಪೂಜಾರ, ಗ್ರಾಮ ಪಂಚಾಯಿತಿ ಸದಸ್ಯರಾದ ಹುಚ್ಚಪ್ಪ, ಮಹಾತ್ಮಾಗಾಂಧಿ ನರೇಗಾ ಯೋಜನೆಯ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಸಂಯೋಜಕ ಬಸಪ್ಪ, ಗ್ರಾಮ ಕಾಯಕ ಮಿತ್ರ ಮೋನಮ್ಮ, ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಎಂಬಿಕೆ ಶ್ರೀದೇವಿ, ಪಶುಸಖಿ ಕಾವೇರಿ, ಕಾಯಕ ಬಂದುಗಳು ಹಾಗೂ ಕೂಲಿಕಾರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ