ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ₹5.50 ಕೋಟಿ ವೆಚ್ಚದಲ್ಲಿ ‘ಜಿಯೋ ಟೆಕ್ನಿಕಲ್‌ ಸರ್ವೆ

KannadaprabhaNewsNetwork | Updated : Aug 08 2024, 09:54 AM IST

ಸಾರಾಂಶ

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಸುಮಾರು ₹5.50 ಕೋಟಿ ವೆಚ್ಚದಲ್ಲಿ ‘ಜಿಯೋ ಟೆಕ್ನಿಕಲ್‌ ಸರ್ವೆ’ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದ್ದು, ಶೀಘ್ರ ಸರ್ವೆ ಆರಂಭವಾಗಲಿದೆ.

 ಬೆಂಗಳೂರು :  ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಸುಮಾರು ₹5.50 ಕೋಟಿ ವೆಚ್ಚದಲ್ಲಿ ‘ಜಿಯೋ ಟೆಕ್ನಿಕಲ್‌ ಸರ್ವೆ’ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದ್ದು, ಶೀಘ್ರ ಸರ್ವೆ ಆರಂಭವಾಗಲಿದೆ.

ಕಿತ್ತಳೆ ಬಣ್ಣದ ಮಾರ್ಗ ಇದಾಗಿದ್ದು, ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ (32.15 ಕಿ.ಮೀ.) ಸಂಪರ್ಕಿಸಲಿದೆ. ಹೊರ ವರ್ತುಲ ರಸ್ತೆಯಲ್ಲಿ ಹಾದು ಹೋಗಲಿರುವ ಈ ಮಾರ್ಗದಲ್ಲಿ 22 ನಿಲ್ದಾಣಗಳು ತಲೆ ಎತ್ತಲಿವೆ. ಮುಂದುವರಿದು ಹೊಸಹಳ್ಳಿ ಸ್ಟೇಷನ್‌ನಿಂದ ಸುಂಕದಕಟ್ಟೆ ಡಿಪೋವರೆಗೆ (12.5 ಕಿ.ಮೀ.) ಸಂಪರ್ಕಿಸಲಿದ್ದು, 9 ನಿಲ್ದಾಣಗಳು ನಿರ್ಮಾಣ ಆಗಲಿದೆ.

3ನೇ ಹಂತದ ಯೋಜನೆ ಕಾಮಗಾರಿ ಆರಂಭದ ಪೂರ್ವ ಸಿದ್ಧತೆಗಳನ್ನು ನಿಗಮ ಆರಂಭಿಸಿದ್ದು, ಈಗಾಗಲೇ ಭೂಸ್ವಾಧೀನ ಸೇರಿ ಇತರೆ ಪ್ರಕ್ರಿಯೆ ನಡೆಸಿದೆ. ಇದೀಗ ಎತ್ತರಿಸಿದ ಮಾರ್ಗ, ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕಾಗಿ ಸರ್ವೆ ನಡೆಸಲಿದೆ. ಮೂರು ಕಂಪನಿಗಳು ಸರ್ವೆ ನಡೆಸಲಿದ್ದು, ಮುಂದಿನ ಐದು ತಿಂಗಳಲ್ಲಿ ವರದಿ ನೀಡುವಂತೆ ಮೆಟ್ರೋ ನಿಗಮ ಸೂಚಿಸಿದೆ.

‘ಜಿಯೋ ಟೆಕ್ನಿಕಲ್‌ ಸರ್ವೆ’ ಅಂದರೆ ಪಿಲ್ಲರ್‌ಗಳನ್ನು ಎಲ್ಲೆಲ್ಲಿ ನಿರ್ಮಿಸಬೇಕು, ಸ್ಟೇಷನ್‌ ಯಾವ ಸ್ವರೂಪದಲ್ಲಿ ಇರಬೇಕು, ಮಣ್ಣಿನ ಪರೀಕ್ಷೆ, ತಳಪಾಯದ ಆಳ ಎಷ್ಟಿರಬೇಕು ಎಂಬ ಬಗ್ಗೆ ಸರ್ವೆ ನಡೆಯಲಿದೆ. ಜೊತೆಗೆ ನಿರ್ಮಾಣ ಹಂತದ ತಂತ್ರಜ್ಞಾನ ಬಳಕೆ, ಸಿವಿಲ್‌ ಕಾಮಗಾರಿ ವೆಚ್ಚದ ಸ್ವರೂಪಗಳ ಬಗ್ಗೆಯೂ ವರದಿಯಲ್ಲಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ನಾಲ್ಕು ಹಂತದಲ್ಲಿ ಸರ್ವೆ: ಮೊದಲ ಹಂತದಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಮೈಸೂರು ರೋಡ್‌ ಸ್ಟೇಷನ್‌ವರೆಗೆ ಹೈದ್ರಾಬಾದ್‌ನ ಮಂಗಲಮ್‌ ಕನ್ಸಲ್ಟನ್ಸಿ ಸರ್ವೀಸ್‌ (₹1.32 ಕೋಟಿ ವೆಚ್ಚ), ಎರಡನೇ ಹಂತವಾಗಿ ಮೈಸೂರು ರೋಡ್‌ ಸ್ಟೇಷನ್‌ನಿಂದ ಕಂಠೀರವ ಸ್ಟುಡಿಯೋ ಸ್ಟೇಷನ್‌ವರೆಗೆ ಸೆಕಾನ್‌ ಪ್ರೈ. ಲಿ. (₹1.31 ಕೋಟಿ), ಮೂರನೇ ಹಂತ ಕಂಠೀರವ ಸ್ಟುಡಿಯೋದಿಂದ ಕೆಂಪಾಪುರ ಸ್ಟೇಷನ್‌ವರೆಗೆ ಮೈರ್ಟಲ್‌ ಪ್ರಾಜೆಕ್ಟ್‌ ಕಂಪನಿ (₹1.32 ಕೋಟಿ) ಹಾಗೂ ನಾಲ್ಕನೇ ಹಂತ ಹೊಸಹಳ್ಳಿ ಸ್ಟೇಷನ್‌ನಿಂದ ಸುಂಕದಕಟ್ಟೆ ಡಿಪೋವರೆಗೆ ಸೆಕಾನ್‌ ಪ್ರೈ. ಲಿ. ಕಂಪನಿ (₹1.54 ಕೋಟಿ) ಸರ್ವೆ ನಡೆಸಲಿದೆ.

8.26 ಲಕ್ಷ ಜನ ಸಂಚಾರ: ದಾಖಲೆ

ನಮ್ಮ ಮೆಟ್ರೋ ರೈಲಿನಲ್ಲಿ ಮಂಗಳವಾರ ಒಂದೇ ದಿನ 8.26 ಲಕ್ಷ (8,26,883) ಜನ ಸಂಚಾರ ನಡೆಸಿದ್ದು, ಹೊಸ ದಾಖಲೆ ನಿರ್ಮಾಣಗೊಂಡಿದೆ.

ಜೂನ್ ತಿಂಗಳಲ್ಲಿ ಬಿಎಂಆರ್​​ಸಿಎಲ್​ಗೆ ₹58.23 ಕೋಟಿ ಆದಾಯ ಹರಿದು ಬಂದಿತ್ತು. ಮೆಟ್ರೋ ನೇರಳ ಮಾರ್ಗ ವಿಸ್ತರಣೆಯದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. 2022ರ ಆಗಸ್ಟ್‌ 15ರಂದು 8.25 ಲಕ್ಷ ಜನ ಸಂಚರಿಸಿದ್ದು ಈವರೆಗಿನ ದಾಖಲೆ ಆಗಿದೆ. ಈ ವರ್ಷದ ಜೂನ್ 19ರಂದು ಒಂದೇ ದಿನ 8.08 ಲಕ್ಷ ಜನರು ಪ್ರಯಾಣಿಸಿದ್ದು ಕೂಡ ದಾಖಲೆ ಆಗಿತ್ತು.

ಬೆಂಗಳೂರು ಸಂತೆ-ಎನ್‌ಎಲ್‌ಎಂಜೊತೆ ಬಿಎಂಆರ್‌ಸಿಎಲ್‌ ಒಪ್ಪಂದ

ಪಾಳುಬಿದ್ದ ಸ್ಥಿತಿಗೆ ತಲುಪಿದ್ದ ‘ಬೆಂಗಳೂರು ಸಂತೆ’ ಮಳಿಗೆಗಳನ್ನು ಒಂದು ವರ್ಷದ ಅವಧಿಗೆ ಪ್ರಾಯೋಗಿಕವಾಗಿ ರಾಷ್ಟ್ರೀಯ ಜೀವನೋಪಾಯ ಮಿಷನ್‌ಗೆ (ಎನ್‌ಎಲ್‌ಎಂ) ಬಾಡಿಗೆಗೆ ನೀಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಬುಧವಾರ ಒಪ್ಪಂದ ಮಾಡಿಕೊಂಡಿದೆ.

ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಲ್ಲಿ 2013ರಲ್ಲಿ ಸ್ಥಾಪಿಸಿದ್ದ ‘ಬೆಂಗಳೂರು ಸಂತೆ’ಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳಾ ಉದ್ಯಮಿ, ಸ್ವ-ಸಹಾಯ ಗುಂಪುಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಪ್ರದರ್ಶಿಸಲು ಅವಕಾಶವಿತ್ತು. 67 ಮಳಿಗೆಗಳನ್ನು ಕರ್ನಾಟಕದ ಜಾನಪದ ವಾಸ್ತು ಶಿಲ್ಪದ ಮಾದರಿಯಲ್ಲಿ ನಿರ್ಮಿಸಲಾಗಿತ್ತು.

ಇಲ್ಲಿ ಖಾದಿ ಉಡುಗೆ, ಕಲೆ ಮತ್ತು ಕರಕುಶಲ ವಸ್ತುಗಳು, ಗ್ರಾಮೀಣ ಉತ್ಪನ್ನಗಳು ಮಾರಾಟ ಆಗುತ್ತಿದ್ದವು. ದೆಹಲಿಯ ‘ದಿಲ್ಲಿ ಹಾತ್‌’ ಮಾದರಿಯಲ್ಲಿ ರೂಪಿಸಿದ್ದ ಬೆಂಗಳೂರು ಸಂತೆಯ ಮಳಿಗೆಗಳು ಕೋವಿಡ್ ಬಳಿಕ ಕಳೆಗುಂದಿದ್ದವು. ಸದ್ಯ ಮೂರು ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಯುತ್ತಿತ್ತು. ಇದೀಗ ಬಿಎಂಆರ್‌ಸಿಎಲ್‌ ಈ ಗ್ರಾಮೀಣ ಕಲಾ ಕೇಂದ್ರಕ್ಕೆ ಮರುಜೀವ ಕೊಡುತ್ತಿದೆ.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್, ಎನ್‌ಎಲ್‌ಎಂ ನಿರ್ದೇಶಕಿ ಪಿ.ಐ.ಶ್ರೀವಿದ್ಯಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

Share this article