)
ಉಮಾಶಂಕರ ಕಾರ್ಯ
ಬಿಎಂಆರ್‌ಸಿಎಲ್ ಸಂಸ್ಥೆಯಿಂದ ಒಂದನೇ ಹಂತದಲ್ಲಿ ತೆರವುಗೊಳಿಸಿದ 2,106 ಮರಗಳಿಗೆ ಪರಿಹಾರವಾಗಿ ಬೆಳೆಸಬೇಕಾದ 21,604 ಗಿಡಗಳ ಬಗ್ಗೆ ಸಂಸ್ಥೆಯಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಮೆಟ್ರೋ ತಿಳಿಸಿದ್ದು, ಇದರಿಂದಾಗಿ 20 ವರ್ಷದ ಹಿಂದೆ ತೆರವುಗೊಳಿಸಿದ 2106 ಮರಗಳ ಬದಲಿಗೆ ಪರ್ಯಾಯ ಪರಿಹಾರ ಕಲ್ಪಿಸದೆ ಮೆಟ್ರೋ ನಿರ್ಲಕ್ಷಿಸಿದೆ.
ನಗರದಲ್ಲಿ 2006ರಲ್ಲಿ ಆರಂಭಗೊಂಡ ಮೆಟ್ರೋ ಕಾಮಗಾರಿಗಳಿಗೆ ಅಡ್ಡಿಯಾಗಿದ್ದ 2,106 ಮರಗಳನ್ನು ತೆರವುಗೊಳಿಸಲು ಬಿಎಂಆರ್ ಸಿಎಲ್ ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿತ್ತು. ಅರಣ್ಯ ಕಾಯ್ದೆಯಂತೆ ಪರಿಹಾರವಾಗಿ ತೆರವುಗೊಳಿಸಿದ ಅಥವಾ ಸ್ಥಳಾಂತರಿಸಿದ ಪ್ರತಿ 1 ಮರಕ್ಕೆ ಬದಲಾಗಿ 10 ಎತ್ತರದ ಮತ್ತು ಆರೋಗ್ಯಕರ ಸಸಿಗಳನ್ನು ನೆಡುವುದು ಹಾಗೂ ಅವುಗಳನ್ನು 3 ವರ್ಷಗಳ ಅವಧಿಗೆ ಸೂಕ್ತ ಹಾಗೂ ಪರಿಣಾಮಕಾರಿ ಆರೈಕೆ ಹಾಗೂ ನಿರ್ವಹಣೆ ಬಿಎಂಆರ್ ಸಿಎಲ್ ಜವಾಬ್ದಾರಿಯಾಗಿತ್ತು.ಈ ಕುರಿತು ಮೆಟ್ರೋ ಯೋಜನೆ ಆರಂಭಿಸುವ ಆರಂಭದಲ್ಲಿ ಅರಣ್ಯ ಇಲಾಖೆ ಜೊತೆ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಮೊದಲ ಹಂತದಲ್ಲಿ ಬಿಎಂಆರ್ ಸಿಎಲ್ ಅಂದಿನ ಬಿಬಿಎಂಪಿ, ಬಿಡಿಎ ಎನ್‌ಜಿಒಗಳು ಹಾಗೂ ಇತರ ಇಲಾಖೆಗಳ ಮೂಲಕ 21,604 ಮರಗಳನ್ನು ನೆಡುವ ಪರಿಹಾರ ಕ್ರಮ ಕೈಗೊಂಡಿತ್ತು.
ಸಂಸ್ಥೆಯಲ್ಲಿದ್ದ ಅಂದಿನ ಅಧಿಕಾರಿಗಳು ನಿರ್ವಹಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಯಾವುದೇ ದಾಖಲೆ ಇಲ್ಲ ಎಂಬುದನ್ನು ಬಿಎಂಆರ್ ಸಿಎಲ್ ಒಪ್ಪಿಕೊಂಡಿದೆ ಎಂದು ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧನಾ(ಸಿಎಜಿ) ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಎಂಆರ್‌ಸಿಎಲ್, ಫೆ.2024ರಿಂದ ಮುಕ್ತ ಟೆಂಡರ್ ಕರೆಯುವ ಮೂಲಕ ಕಂಪನಿಯು ಸಸಿ ನೆಡುವ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಅತ್ಯಂತ ಕಡಿಮೆ ದರ ನಮೂದಿಸಿದ ಅರ್ಹ ಗುತ್ತಿಗೆದಾರರಿಗೆ ಈ ಕೆಲಸವನ್ನು ವಹಿಸಲಾಗುತ್ತಿದೆ ಎಂದಿದೆ.