ಮನೆ ಬಾಗಿಲಿಗೆ ಮಹಾನಗರ ಪಾಲಿಕೆ

KannadaprabhaNewsNetwork | Published : Aug 1, 2024 12:26 AM

ಸಾರಾಂಶ

ನಾಗರಿಕರ ಮನೆ ಬಾಗಿಲಿಗೆ ಮಹಾನಗರ ಪಾಲಿಕೆಯನ್ನು ಒಯ್ಯಲಾಗುವುದು ಎಂದ ಅವರು, ಪಾಲಿಕೆಯ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರತಿ 3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ಮೇಯರ್‌ ಹೇಳಿದ್ದಾರೆ.

ಹುಬ್ಬಳ್ಳಿ:

ಮನೆ ಬಾಗಿಲಿಗೆ ಮಹಾನಗರ ಪಾಲಿಕೆಯ ಸೇವೆಗಳನ್ನು ಕೊಂಡೊಯ್ಯುವ ಗುರಿಯೊಂದಿಗೆ ಮೇಯರ್‌ ಪದವಿ ಅಲಂಕರಿಸಿದ್ದೇನೆ. ನಿಗದಿತ ಕಾಲಾವಧಿಯಲ್ಲಿ ತ್ವರಿತವಾಗಿ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಮಹಾನಗರದ ಜನತೆಯ ಮನೆ ಬಾಗಿಲಿಗೆ ತಲುಪಿಸುವುದು ನನ್ನ ಗುರಿ ಎಂದು ಮೇಯರ್‌ ರಾಮಪ್ಪ ಬಡಿಗೇರ ತಿಳಿಸಿದ್ದಾರೆ.

ಮೇಯರ್‌ ಆಗಿ ಆಯ್ಕೆಯಾದ ಬಳಿಕ ಮೊದಲ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಅವರು, ವಿವಿಧ ಅಭಿವೃದ್ಧಿ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತ ಸಾಮಾನ್ಯ ಸಭೆಯಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಕುಳಿತುಕೊಳ್ಳುವ ಸದಸ್ಯರಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.

ನಾಗರಿಕರ ಮನೆ ಬಾಗಿಲಿಗೆ ಮಹಾನಗರ ಪಾಲಿಕೆಯನ್ನು ಒಯ್ಯಲಾಗುವುದು ಎಂದ ಅವರು, ಪಾಲಿಕೆಯ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರತಿ 3 ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು. ನೀರಿನ ಕರದ ಮೇಲಿನ ದಂಡದ ಮೊತ್ತವನ್ನು ಸಂಪೂರ್ಣ ಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಎಲ್ಲ ಸದಸ್ಯರ ಸಹಕಾರ ಬಯಸುತ್ತೇನೆ. ಮಹಾನಗರದ ಎಲ್ಲ ವಾರ್ಡ್ ಗಳಲ್ಲಿ ಒಳಚರಂಡಿ ಜಾಲ ರೂಪಿಸಲು ವಿಸ್ತೃತ ಯೋಜನಾ ವರದಿ ತಯಾರಿಸಿ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದ್ದೇನೆ. ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಇನ್ನಷ್ಟು ಪ್ರಭಾವಶಾಲಿಯಾಗಿ ರೂಪಿಸಲಾಗುವುದು ಎಂದರು.

ಖಾತಾ ಬದಲಾವಣೆ ಹಾಗೂ ಇ-ಸ್ವತ್ತು ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ವಿಳಂಬ ನೀತಿಗೆ ಕಡಿವಾಣ ಹಾಕಲು ಪಾಲಿಕೆಯ ವಲಯವಾರು ಕಚೇರಿಯಲ್ಲಿ ನಿಯಮಿತವಾಗಿ ಸಭೆ ನಡೆಸಲಾಗುವುದು. ಪ್ರತಿ ವಾರ್ಡ್‌ಗಳಲ್ಲಿ ನಾಗರಿಕರನ್ನೊ ಒಳಗೊಂಡ ವಾರ್ಡ್ ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದರು.

ಪೌರಕಾರ್ಮಿಕರನ್ನು ನೇರ ವೇತನದಡಿ ನೇಮಿಸಿಕೊಳ್ಳಲು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು ಎಂದರು.

ನಂತರ ಮೇಯರ್‌ ಭಾಷಣದ ಮೇಲೆ ನಡೆದ ಚರ್ಚೆಯಲ್ಲಿ ಕೇಳಿ ಬಂದ ಸಲಹೆಗಳನ್ನು ಸ್ವೀಕರಿಸುವುದಾಗಿ ತಿಳಿಸಿದರು.

ಗೌನ್ ಧರಿಸಿದ ಮೇಯರ್‌ಗೆ ಹೂಗುಚ್ಛ:

ಈ ಹಿಂದೆ ಈರೇಶ ಅಂಚಟಗೇರಿ ಹಾಗೂ ವೀಣಾ ಬರದ್ವಾಡ ಮೇಯರ್‌ ಗೌನ್‌ ಧರಿಸಿರಲಿಲ್ಲ. ಆದರೆ ಅದು ಪೀಠಕ್ಕೆ ನೀಡುವ ಗೌರವ ಎಂದು ಮೇಯರ್‌ ಆಗುತ್ತಿದ್ದಂತೆ ತಿಳಿಸಿದ್ದ ರಾಮಪ್ಪ ಬಡಿಗೇರ, ತಮ್ಮ ಮೊದಲ ಸಭೆಯಲ್ಲೇ ಗೌನ್‌ ಧರಿಸಿ ಪಾಲ್ಗೊಂಡಿದ್ದು ವಿಶೇಷ. ಇದರಿಂದಾಗಿ ಎರಡು ವರ್ಷದ ಬಳಿಕ ಸಾಮಾನ್ಯಸಭೆಯಲ್ಲಿ ಗೌನ್‌ ಕಾಣುವಂತಾಯಿತು.

ಹೀಗಾಗಿ ವಿರೋಧ ಪಕ್ಷದ ಸದಸ್ಯರೆಲ್ಲರೂ ಹೂಗುಚ್ಛ ನೀಡಿ ಅಭಿನಂದಿಸಲು ಮುಂದಾದರು. ಇದನ್ನು ನಯವಾಗಿಯೇ ತಿರಸ್ಕರಿಸಿದ ಬಡಿಗೇರ, ಮೇಯರ್‌ ಸ್ಥಾನಕ್ಕೆ ಗೌರವವಿದೆ. ಈ ಸ್ಥಾನಕ್ಕೆ ಗೌರವ ಕೊಡುವ ಉದ್ದೇಶದಿಂದ ಗೌನ್‌ ಧರಿಸಿದ್ದೇನೆ. ವಿರೋಧ ಪಕ್ಷದವರು ಅಭಿನಂದಿಸುವ ಅಗತ್ಯವಿಲ್ಲ. ಪ್ರೀತಿ ಪೂರ್ವಕವಾಗಿ ನೀವು ನೀಡಿದ ಹೂಗುಚ್ಛ ಸ್ವೀಕರಿದ್ದೇನೆ ಎಂದು ಗೌನ್ ಚರ್ಚೆಗೆ ತಿಲಾಂಜಲಿ ಇಟ್ಟರು.

ಜನರಿಗೆ ತಟ್ಟಲಿದೆ ತೆರಿಗೆ ಬಿಸಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜನರಿಗೆ ಶಾಕ್‌ ನೀಡಿದೆ. ಇನ್ಮುಂದೆ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವರ್ಷ ತೆರಿಗೆ ಹೆಚ್ಚಿಸಲು ಸಾಮಾನ್ಯಸಭೆ ಹಸಿರು ನಿಶಾನೆ ತೋರಿಸಿದೆ. ಜತೆಗೆ ಈ ವರ್ಷ 2022-23, 2023-24ರ ಸಾಲಿನ ಕರ ಪಾವತಿಸಿದವರಿಂದಲೂ ಅರಿಯರ್ಸ್‌ ಪಡೆಯಲು ಕೂಡ ಒಪ್ಪಿಗೆ ಸೂಚಿಸಿದೆ.

ನಗರದ ಪಾಲಿಕೆ ಸಭಾಭವನದಲ್ಲಿ ಬುಧವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ವಿಸ್ತೃತ ಚರ್ಚೆ ಬಳಿಕ ತೆರಿಗೆ ಹೆಚ್ಚಳಕ್ಕೆ ಅನುಮೋದನೆ ನೀಡಿತು.

ಪಾಲಿಕೆ ವ್ಯಾಪ್ತಿಯಲ್ಲಿರುವ ರೈತರಿಗೆ ವಿನಾಯಿತಿ ನೀಡುವ ಕುರಿತು ಚರ್ಚಿಸಲಾಯಿತಾದರೂ ಅಂತಿಮ ನಿರ್ಣಯ ಪ್ರಕಟವಾಗಲಿಲ್ಲ. ಕೇಂದ್ರ ಸರ್ಕಾರದ ನಿರ್ದೇಶನ ಹಿನ್ನೆಲೆಯಲ್ಲಿ ಆಸ್ತಿಕರ ಶೇ. 3 ಹಾಗೂ ವಾಣಿಜ್ಯ ಮಳಿಗೆಗಳಿಗೆ ಶೇ 5ರಷ್ಟುಆಸ್ತಿ ತೆರಿಗೆ ಹೆಚ್ಚಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ಸದಸ್ಯರಿಗೆ ಮನವರಿಕೆ ಮಾಡಿದರು. ಜತೆಗೆ ಗ್ರಾಮೀಣ ಪ್ರದೇಶಕ್ಕೆ ಸ್ಲ್ಯಾಬ್‌ನ್ನು ಕಡಿಮೆ ಮಾಡಲು ನಿರ್ಧರಿಸಲಾಯಿತು. ಆದರೆ ಎಷ್ಟು ಕಡಿಮೆ ಎನ್ನುವುದು ಮಾತ್ರ ಸಭೆಯಲ್ಲಿ ನಿರ್ಧರಿಸಲಿಲ್ಲ.

ಈ ನಡುವೆ ಸರ್ಕಾರ 2022-23 ಹಾಗೂ 2023-24ರಿಂದಲೇ ಆಸ್ತಿಕರ ಹೆಚ್ಚಿಸುವ ಕುರಿತು ಸುತ್ತೋಲೆ ಹೊರಡಿಸಿತ್ತು. ಅದು ಪಾಲಿಕೆಗೆ ಈಗಷ್ಟೇ ಬಂದಿದೆ. ಹೀಗಾಗಿ ಹಿಂದಿನ ಎರಡು ವರ್ಷದ ಆಸ್ತಿಕರವನ್ನು ಈ ಸಲ ಬಾಕಿ ಲೆಕ್ಕ ಹಾಕಿ ವಸೂಲಿ ಮಾಡಲು ಸಾಮಾನ್ಯಸಭೆ ನಿರ್ಧರಿಸಿದೆ. ಇದಕ್ಕೂ ಪೂರ್ವದಲ್ಲಿ ಟ್ರೇಡ್‌ ಲೈಸೆನ್ಸ್‌ ನೀಡುವ ವಿಚಾರ ಸಭೆಯಲ್ಲಿ ಕೋಲಾಹಲ ಎಬ್ಬಿಸಿತು. ಬಳಿಕ ಹಿಂದಿನ ಠರಾವು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುವ ಜತೆಗೆ ಸೂಕ್ತ ದಾಖಲಾತಿ ಪರಿಶೀಲನೆಯೊಂದಿಗೆ ಟ್ರೇಡ್‌ ಲೈಸೆನ್ಸ್‌ ನೀಡಬೇಕೆಂದು ಮೇಯರ್‌ ಸೂಚಿಸಿದರು.

ಹರಾಜು ಹಾಕಿ:

ಪಾಲಿಕೆ ಒಡೆತನ 1545 ವಾಣಿಜ್ಯ ಮಳಿಗೆಗಳಿಗೆ ಮಾರುಕಟ್ಟೆ ದರದ ಆಧಾರದ ಮೇಲೆ ಬಾಡಿಗೆ ನಿಗದಿಪಡಿಸಲು ಅನುವು ಮಾಡಿಕೊಡುವ ಪ್ರಸ್ತಾವನೆಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಾಡಿಗೆ ನಿಗದಿಗೆ ಹರಾಜು ಪ್ರಕ್ರಿಯೆ ಮಾಡಲು ನಿರ್ಧರಿಸಲಾಯಿತು.

ಸ್ಪರ್ಧಾತ್ಮಕವಾಗಿ ಹರಾಜು ಮಾಡಬೇಕು. ಇದರಿಂದ ಕನಿಷ್ಠ ₹ 40ರಿಂದ ₹ 50 ಕೋಟಿ ಬರುತ್ತದೆ. ಹರಾಜಿನ ಮೂಲಕವೇ ಬಾಡಿಗೆ ನಿರ್ಧರ ಮಾಡಬೇಕು. ಹಾಗಾಗಿ ಲಿಲಾವು ಮಾಡಬೇಕೆಂದು ಸದಸ್ಯರು ಪಕ್ಷಬೇಧ ಮರೆತು ಒತ್ತಾಯಿಸಿದರು.

Share this article