ಕನ್ನಡಪ್ರಭ ವಾರ್ತೆ ಉಡುಪಿ
ಶೋಭಾಯಾತ್ರೆಯು ಚೆಂಡೆ ತಂಡ, ಯಕ್ಷಗಾನ ತಂಡ, ಹುಲಿ ವೇಷ ನೃತ್ಯಗಾರರು ಮತ್ತು ನಾಸಿಕ್ ಬ್ಯಾಂಡ್ ಸೇರಿದಂತೆ ಸಾಂಪ್ರದಾಯಿಕ ಕಲಾ ಪ್ರಕಾರಗಳ ಜೊತೆಗೆ ಟಿಎಂಎ ಪೈ ಜೀವನದ ಟ್ಯಾಬ್ಲೋವನ್ನು ಕೂಡಾ ಒಳಗೊಂಡಿತ್ತು. ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡು ಮೆರವಣಿಗೆಗೆ ರಂಗೇರಿಸಿದರು.
ನಂತರ ಕಾಲೇಜಿಗೆ ಆಗಮಿಸಿದ ಜ್ಯೋತಿಯನ್ನು ಹಿಡಿದು ಗಣ್ಯರು ದೀಪ ಬೆಳಗಿಸುವುದರೊಂದಿಗೆ ಎರಡನೇ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು.ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ.ಎಂ.ಎಲ್. ಸಾಮಗ ಹಳೆಯ ನೆನಪುಗಳನ್ನು ಹಂಚಿಕೊಂಡರು. ಕಾಲೇಜು ಶೈಕ್ಷಣಿಕ ಶ್ರೇಷ್ಠತೆಯ ಕೇಂದ್ರ ಮಾತ್ರವಲ್ಲದೆ ಸಾಂಸ್ಕೃತಿಕ ಕೇಂದ್ರವಾಗಿದೆ. ಇದು ಹಲವಾರು ವಿದ್ವಾಂಸರನ್ನು ಬೆಳೆಸಿದೆ ಮತ್ತು ಉಳಿಸಿದೆ. ಸಂಸ್ಥೆಯ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ ಕೀರ್ತಿ ಮಾಜಿ ಪ್ರಾಂಶುಪಾಲ ಕು.ಶಿ. ಹರಿದಾಸ್ ಭಟ್ ಅವರಿಗೆ ಸಲ್ಲುತ್ತದೆ ಎಂದರು.
ಹಳೆವಿದ್ಯಾರ್ಥಿ ಸಿಎ ಗುಜ್ಜಾಡಿ ಪ್ರಭಾಕರ ನಾಯಕ್ ಅವರು, ಈ ಕಾಲೇಜು ನನಗೆ ಅಮೂಲ್ಯವಾದ ಜೀವನ ಪಾಠಗಳನ್ನು ಕಲಿಸಿತು. ಇಲ್ಲಿನ ಶಿಕ್ಷಣವು ತುಂಬಾ ಗಂಭೀರವಾಗಿತ್ತು, ಸಿಎ ಇಂಟರ್‌ಮೀಡಿಯೆಟ್ ಪರೀಕ್ಷೆಯನ್ನು ನನ್ನ ಶಿಕ್ಷಕರು ನೀಡಿದ ಟಿಪ್ಪಣಿಗಳಲ್ಲಿ ತೇರ್ಗಡೆ ಮಾಡಿದ್ದೆ ಎಂದು ಹೇಳಿದರು.ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿ, ಎಂಜಿಎಂ ಕಾಲೇಜು 50,000 ಹಳೆ ವಿದ್ಯಾರ್ಥಿಗಳನ್ನು ಹೊಂದಿದೆ. ಇಂದಿನ ಮೆರವಣಿಗೆಯಲ್ಲಿ ಸುಮಾರು 2000 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದು ಕಾಲೇಜಿನ ಮೇಲಿರುವ ಅಭಿಮಾನಕ್ಕೆ ಸಾಕ್ಷಿ ಎಂದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಟಿಎಂಪಿಎಸ್‌ಡಿಐ ನಿರ್ದೇಶಕ ಟಿ. ರಂಗ ಪೈ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಎಂಜಿಎಂ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಸ್ವಾಗತಿಸಿದರು.ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ವನಿತಾ ಮಯ್ಯ ವಂದಿಸಿದರು. ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸ್ಫೂರ್ತಿ ಕೆ. ನಿರೂಪಿಸಿದರು.