ಗುಂಡಳ್ಳಿ ಮನರೇಗಾ ಯೋಜನೆಯ ಕಾಮಗಾರಿ ವೀಕ್ಷಿಸಿ ಸಿಇಒ ಗರಿಮಾ ಪನ್ವಾರ್ ಕನ್ನಡಪ್ರಭ ವಾರ್ತೆ ಶಹಾಪುರ ಕ್ಷೀಣಿಸುತ್ತಿರುವ ಅಂತರ್ಜಲಮಟ್ಟ ಸುಧಾರಣೆಗೆ, ಪೋಲಾಗುತ್ತಿರುವ ಮಳೆ ನೀರನ್ನು ತಡೆದು ಭೂಮಿಯಲ್ಲಿ ಇಂಗುವಂತೆ ಮಾಡಲು ಮನರೇಗಾ ಯೋಜನೆಯಡಿ ಕೈಗೊಳ್ಳುವ ಜಲಶಕ್ತಿ ಸಂರಕ್ಷಣಾ ಕಾಮಗಾರಿಗಳು ಭೂಮಿಯ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಪೂರಕವಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ್ ಹೇಳಿದರು. ತಾಲೂಕಿನ ಖಾನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗುಂಡಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆ ಜಲಶಕ್ತಿ ಅಭಿಯಾನದಡಿ ಪ್ರಗತಿಯಲ್ಲಿದ್ದ ಕೆರೆ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಬಂಜರು ಭೂಮಿ ಇದ್ದರೆ, ನರೇಗಾ ಯೋಜನೆಯಡಿ (ಬಂಜರು) ಗೋಮಾಳ ಅಭಿವೃದ್ಧಿ ಪಡಿಸಲು ನಾನಾ ಕಾಮಗಾರಿಗಳನ್ನು ಕೈಗೊಳ್ಳಬಹುದು. ಇದರಿಂದ ಗ್ರಾಮೀಣ ಪ್ರದೇಶದ ಪಶು-ಪಕ್ಷಿಗಳಿಗೆ ದನ-ಕರು, ಕುರಿ-ಮರಿಗಳಿಗೆ ಮೇಯಲು ಗೋಮಾಳದಲ್ಲಿ ಹುಲ್ಲು ಬೆಳೆಸುವುದರಿಂದ ಆಶ್ರಯ ಸಿಗುತ್ತದೆ ಹಾಗೂ ಗ್ರಾಮದ ದುಡಿಯುವ ಕೈಗಳಿಗೆ ಕೂಲಿ ಕೆಲಸ ನೀಡಿದಂತಾಗಿ, ಅವರ ಜೀವನ ನಿರ್ವಹಣೆಗೆ ಸಹಾಯವಾಗುತ್ತದೆ ಎಂದು ತಿಳಿಸಿದರು. ಎಲ್ಲ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ನೋಂದಾಯಿತ ಅಕುಶಲ ಕೃಷಿ ಕೂಲಿಕಾರರಿಗೆ ವರ್ಷದಲ್ಲಿ ಪ್ರತಿ ಕುಟುಂಬಕ್ಕೂ ನೂರು ದಿನ ಕೂಲಿ ಕೆಲಸ ನೀಡಿ, ಕಳೆದ ವರ್ಷ ನೂರು ದಿನ ಕೂಲಿ ಕೆಲಸ ನಿರ್ವಹಿಸಿದ ಕುಟುಂಬದ ಸದಸ್ಯರಿಗೆ ಅವರ ಆಸಕ್ತ ಸ್ವಯಂ ಉದ್ಯೋಗ ಕೈಗೊಳ್ಳಲು ಪೂರಕವಾಗಿ ಉನ್ನತಿಯಡಿ ಕೌಶಲ ತರಬೇತಿ ನೀಡಲು ಅಗತ್ಯ ಕ್ರಮವಹಿಸಿ ಎಂದು ಪಿಡಿಒಗೆ ಸೂಚಿಸಿದರು. ನರೇಗಾ ಯೋಜನೆಯ ನಿಯಮದಂತೆ ಹೆಚ್ಚು ಜನ ನರೇಗಾ ಕೂಲಿಕಾರರು ಕೆಲಸ ಮಾಡುವ ಕಾಮಗಾರಿ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ನೆರಳಿನ ವ್ಯವಸ್ಥೆ, ಕುಡಿಯುವ ನೀರು, ತಾಯಂದಿರ ಮಕ್ಕಳ ಹಾರೈಕೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕೂಲಿಕಾರರಿಗೆ ಒದಗಿಸಬೇಕು ಎಂದು ಸೂಚಿಸಿದರು. ಶಹಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್, ಸಹಾಯಕ ನಿರ್ದೇಶಕರಾದ ಭೀಮರಾಯ ಬಿರಾದಾರ್, ಖಾನಪೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರು, ನರೇಗಾ ಯೋಜನೆ ತಾಂತ್ರಿಕ ಸಂಯೋಜಕ ಮುಜಾಮಿಲ್, ತಾಂತ್ರಿಕ ಸಹಾಯಕ ರಾಜುರೆಡ್ಡಿ, ಡಿಇಒ ರವಿ, ಬಿಎಫ್‌ಟಿ ಶರಣು ಸೇರಿದಂತೆ ಇತರರಿದ್ದರು. - - - - 18ವೈಡಿಆರ್17: ಶಹಾಪುರ ತಾಲೂಕಿನ ಖಾನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗುಂಡಳ್ಳಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಕೆರೆ ಹೂಳೆತ್ತುವ ಕಾಮಗಾರಿಯನ್ನು ಜಿ.ಪಂ. ಸಿಇಒ ಗರೀಮಾ ಪನ್ವಾರ್ ವೀಕ್ಷಿಸಿದರು. - - - -