ಮೈಕ್ರೋ ಫೈನಾನ್ಸ್ ಗಳು ಸಾಲಗಾರರಿಗೆ ಕಿರುಕುಳ ನೀಡುವಂತಿಲ್ಲ : ಜಿಲ್ಲಾಧಿಕಾರಿ ಎ.ಬಿ ಬಸವರಾಜು

KannadaprabhaNewsNetwork |  
Published : Feb 11, 2025, 12:47 AM ISTUpdated : Feb 11, 2025, 12:44 PM IST
ಬೆಂ.ಗ್ರಾ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳು ಸಭೆ ನಡೆಯಿತು. | Kannada Prabha

ಸಾರಾಂಶ

ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು, ಮರು ಪಾವತಿಸಲು ವಿಳಂಬ ಮಾಡುವ ಸಾಲಗಾರರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮೈಕ್ರೋ ಫೈನಾನ್ಸ್ ಅಧಿಕಾರಿಗಳಿಗೆ ಸೂಚಿಸಿದರು.

  ದೊಡ್ಡಬಳ್ಳಾಪುರ : ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು, ಮರು ಪಾವತಿಸಲು ವಿಳಂಬ ಮಾಡುವ ಸಾಲಗಾರರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮೈಕ್ರೋ ಫೈನಾನ್ಸ್ ಅಧಿಕಾರಿಗಳಿಗೆ ಸೂಚಿಸಿದರು.

ಬೆಂ.ಗ್ರಾ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೈಕ್ರೋ ಫೈನಾನ್ಸ್, ಲೇವಾದೇವಿ, ಗಿರವಿ ಹಣಕಾಸು ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚೆಗೆ ರಾಜ್ಯದಲ್ಲಿ ಸುದ್ದಿ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿಗೆ ಸಂಬಂಧಿಸಿದಂತೆ ಸುಖಾಸುಮ್ಮನೆ ಸಾಲಗಾರರ ಮೇಲೆ ಆಪಾದನೆ, ಕಿರುಕುಳ, ದೌರ್ಜನ್ಯ, ಬೈಗುಳ, ಬೆದರಿಕೆ, ಮನೆ ಸೀಜ್ ಮಾಡುವುದು, ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಕಾನೂನು ಚೌಕಟ್ಟಿನಲ್ಲಿ ಮೈಕ್ರೋ ಫೈನಾನ್ಸ್‌ಗಳು ಕೆಲಸ ಮಾಡಬೇಕು ಎಂದರು.

ಸಾಮಾನ್ಯವಾಗಿ ಮಧ್ಯಮ ಹಾಗೂ ಕೆಳ ವರ್ಗದವರು ವೈದ್ಯಕೀಯ ಚಿಕಿತ್ಸೆ, ಮದುವೆ ಇನ್ನಿತರ ಕೆಲಸಗಳಿಗೆ ಸಾಲ ಪಡೆದಿರುತ್ತಾರೆ. ಬಹುತೇಕರು ಪಡೆದ ಸಾಲವನ್ನು ವಾಪಸ್ಸು ನೀಡುತ್ತಾರೆ. ಕೆಲವೆಡೆ ಇದು ಕಿರುಕುಳವಾಗಿ ಬೆಳೆಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಆಗದಿರಲಿ ಎಂದರು.

ಜಿಲ್ಲೆಯಲ್ಲಿ 348 ಲೇವಾದೇವಿ, ಗಿರವಿ ಸಂಸ್ಥೆಗಳು:

2025 ರ ಜನವರಿ ಅಂತ್ಯಕ್ಕೆ 348 ಸಂಸ್ಥೆಗಳು ನೋಂದಣಿಯಾಗಿದ್ದು. ಅದರಲ್ಲಿ 105 ಲೇವಾದೇವಿದಾರರು, 243 ಗಿರವೀದಾರರು ವ್ಯವಹಾರ ನಡೆಸುತ್ತಿದ್ದಾರೆ. ನೆಲಮಂಗಲ ತಾಲೂಕಿನಲ್ಲಿ 27 ಲೇವಾದೇವಿ, 45 ಗಿರವಿ ಸಂಸ್ಥೆಗಳು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 45 ಲೇವಾದೇವಿ, 47 ಗಿರವಿ ಸಂಸ್ಥೆಗಳು, ದೇವನಹಳ್ಳಿ ತಾಲೂಕಿನಲ್ಲಿ 16 ಲೇವಾದೇವಿ, 75 ಗಿರವಿ ಸಂಸ್ಥೆಗಳು, ಹೊಸಕೋಟೆಯಲ್ಲಿ 17 ಲೇವಾದೇವಿ ಹಾಗೂ 76 ಗಿರವಿ ಸಂಸ್ಥೆಗಳು ವ್ಯವಹಾರ ನಡೆಸುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 184 ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಅದರ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ನಿಯಮಾವಳಿ ಪಾಲನೆ ಕಡ್ಡಾಯ:

ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯಿದೆ- 2004 ಪ್ರಕಾರ ಭದ್ರತಾ ಸಾಲಗಳಿಗೆ ವರ್ಷಕ್ಕೆ ಶೇ.14 ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವರ್ಷಕ್ಕೆ ಗರಿಷ್ಠ ಶೇ.16 ಗರಿಷ್ಠ ಬಡ್ಡಿ ದರವನ್ನು ಲೇವಾದೇವಿದಾರರಿಗೆ ನಿಗದಿಪಡಿಸಲಾಗಿದೆ. ಸಾಲಗಾರರು ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಾಲ ಪಡೆಯುವ ಮುನ್ನ ಲೇವಾದೇವಿ ಸಂಸ್ಥೆಗಳ ಅಧಿಕೃತ ನೋಂದಣಿ ಪತ್ರ, ಬಡ್ಡಿದರ, ವಸೂಲಿ ಪ್ರಕ್ರಿಯೆ ಇತ್ಯಾದಿಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಗಳಿಂದ ಸಾಲ ಮರುಪಾವತಿ ಸಂದರ್ಭದಲ್ಲಿನ ಕಿರುಕುಳ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು:

ಸಾಲ ಪಡೆಯಲು ಅರ್ಜಿ ಸಲ್ಲಿಸುವವರ ಆದಾಯದ ಸಾಮರ್ಥ್ಯ ಪರಿಶೀಲಿಸಬೇಕು. ಅವರ ಪ್ರತಿ ತಿಂಗಳು ಹಣ ಕಟ್ಟುವ ಸಾಮರ್ಥ್ಯ ಮೀರಿ ಸಾಲ ವಿತರಣೆ ಮಾಡಬಾರದು. ಸಾಲ ಕೊಡುವಾಗ ಅವರ ಮಾಸಿಕ ವೇತನ ಹಾಗೂ ಆದಾಯದ ಮೂಲ ಆಧರಿಸಿ ನೀಡಬೇಕು. ಅತಿ ಹೆಚ್ಚು ಇಎಂಐ ಪಾವತಿಸಲು ಸೂಚಿಸಬಾರದು. ಮಾಸಿಕ ಆದಾಯ ಅಥವಾ ವೇತನದ ಶೇಕಡ 50ಕ್ಕಿಂತ ಹೆಚ್ಚು ಇರಬಾರದು. ಸಂಜೆ 06 ರಿಂದ ಬೆಳಗ್ಗೆ 09 ರವರೆಗೆ ಸಾಲ ಹಿಂಪಡೆಯುವ ಯಾವುದೇ ಪ್ರಕ್ರಿಯೆಗಳನ್ನು ಮಾಡಬಾರದು. ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಮಾತ್ರ ಕರೆ ಮಾಡಬೇಕು. ಕರೆ ಮಾಡುವಾಗ ಬೆದರಿಕೆ ಹಾಕಬಾರದು. ಕೆಟ್ಟ ಪದಗಳನ್ನು ಬಳಸಿ ನಿಂದಿಸಬಾರದು. ಸಾಲ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದವರ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳ ಮೂಲಕ ಸಾಲ ವಾಪಸ್ ಗೆ ಕಿರುಕುಳ ಕೊಡುವಂತಿಲ್ಲ. ಸಾಲ ಪಡೆದ ವಿವರವನ್ನು ಗೌಪ್ಯವಾಗಿಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಬಹಿರಂಗವಾಗಿ ಪ್ರಚಾರ ಆಗುವಂತೆ ಸಾಲ ತೀರಿಸಲು ಕೇಳಬಾರದು, ಅವರ ಕುಟುಂಬಕ್ಕೆ, ಆಸ್ತಿಗೆ ಹಾನಿ ಮಾಡಬಾರದು, ರೌಡಿಗಳನ್ನು ಗೂಂಡಗಳನ್ನು ಸಾಲ ವಸೂಲಾತಿಗೆ ಕಳುಹಿಸಬಾರದು ಎಂಬ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಮೈಕ್ರೋ ಫೈನಾನ್ಸ್ ಗಳು ಮೇಲಿನ ಸರ್ಕಾರದ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಮರೇಶ್ ಎಚ್., ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗ ಶ್ರೀ., ಡಿವೈಎಸ್ಪಿ ರವಿ, ಸಹಕಾರ ಸಂಘಗಳ ಡೆಪ್ಯುಟಿ ರಿಜಿಸ್ಟ್ರಾರ್ ಚಂದ್ರಶೇಖರ್, ಸಹಾಯಕ ಡೆಪ್ಯುಟಿ ರಿಜಿಸ್ಟ್ರಾರ್ ರಾಮಾಂಜನೇಯ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಧುಕರ್ ಸೇರಿದಂತೆ ಜಿಲ್ಲೆಯ ಲೇವಾದೇವಿ, ಗಿರವಿ ಸಂಸ್ಥೆಗಳ ಮುಖ್ಯಸ್ಥರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!