ಧಾರವಾಡ: ಶರಣರನ್ನು ನಾವು ನೋಡಿಲ್ಲ, ಆದರೆ ಅವರ ಜಯಂತಿಯಲ್ಲಿ ಭಾಗವಹಿಸುವುದೇ ನಮ್ಮ ಪುಣ್ಯ. ಇಂತಹ ಮಹಾನ್ ಪುಣ್ಯವಂತರ ಶರಣರ ಸಂದೇಶಗಳನ್ನು ಮುಂದಿನ ಕಾಲಕ್ಕೂ ಸಾರಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಮಾತನಾಡಿ, ಪರಿಪೂರ್ಣವಾಗಿ ಶರಣರ ಅಧ್ಯಯನವನ್ನು ಮಾಡಬೇಕು ಹಾಗೂ ಅರ್ಥ ಮಾಡಿಕೊಂಡು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪುಸ್ತಕದ ಜೊತೆ ಗೆಳೆತನ ಮಾಡಬೇಕು. ನಾವೆಲ್ಲ ಒಂದೇ ಎಂದು ತಿಳಿದು ಬದುಕಬೇಕು. ಶಿವಶರಣರು ಬರೆದ ಪ್ರತಿಯೊಂದು ವಚನಗಳು ಅರ್ಥಗರ್ಭಿತವಾಗಿವೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರು ಎಲ್ಲರೂ ತಮ್ಮ ಕಾಯಕಗಳ ಮುಖಾಂತರ ಶರಣರ ಸಂಸ್ಕೃತಿಗೆ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಮಾನ್ಯ ಮನುಷ್ಯರಿಗೂ ಅರ್ಥ ಆಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಪದ ಬಳಕೆ ಮಾಡಿ ವಚನಗಳನ್ನು ರಚಿಸಿದ್ದಾರೆ. ಆ ವಚನಗಳ ಮುಖಾಂತರ ನಮಗೆಲ್ಲ ಸಂಸ್ಕೃತಿಯ ಕೊಡುಗೆಯನ್ನು ನೀಡಿದ್ದಾರೆ ಎಂದರು.ಮಾದಾರ ಚನ್ನಯ್ಯ ಹಾಗೂ ಮಾದಾರ ಧೂಳಯ್ಯ ಕುರಿತು ಕರ್ನಾಟಕ ಕಲಾ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮಹದೇವಪ್ಪ ದಳಪತಿ, ಡೋಹರ ಕಕ್ಕಯ್ಯ ಕುರಿತು ಡಾ. ಮಾರ್ಕಂಡೇಯ ದೊಡಮನಿ, ಸಮಗಾರ ಹರಳಯ್ಯ ಕುರಿತು ಪ್ರೊ. ರಾಜೇಶ ಹೊಂಗಲ್ ಹಾಗೂ ಉರಿಲಿಂಗ ಪೆದ್ದಿ ಕುರಿತು ಗಿರೀಶ ಕಾಂಬಳೆ ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಕಾಮಣಿ ನಿರೂಪಿಸಿದರು. ಸಮಾಜದ ಮುಖಂಡ ಡಾ. ನೀಲಕಂಠ ಮಿಶ್ರಿಕೋಟಿ, ಲಕ್ಷ್ಮಣ ಬಕ್ಕಾಯಿ, ಮಹೇಶ ಹುಲಣ್ಣವರ, ಅಣ್ಣಪ್ಪ ಕರಾಠೆ, ಯಲ್ಲಪ್ಪ ಸವಣೂರ ಇದ್ದರು.