ಕೊಪ್ಪಳ:
ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ತಮಗೆ ಇರುವ ನಿಯಮಗಳ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು. ಅದನ್ನು ಬಿಟ್ಟು ಜನರಿಗೆ ಕಿರುಕುಳ ನೀಡುವ ಪ್ರಕರಣ ಕಂಡುಬಂದರೆ ಅಂಥಹ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲೆಯ ಮೈಕ್ರೋಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನರಿಗೆ ಸಾಲ ನೀಡುವಾಗ ತಮ್ಮ ನಿಬಂಧನೆಗಳ ಕುರಿತು ಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು ಮತ್ತು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ನೀಡಬೇಕು. ಅದನ್ನು ಬಿಟ್ಟು ಅವರಿಗೆ ಮಾಹಿತಿ ನೀಡದೆ ಸಾಲ ನೀಡುವ ಜತೆಗೆ ಕಿರುಕುಳ ನೀಡಿದರೆ ಕಾನೂನಿನ ಉಲ್ಲಂಘನೆಯಾಗುತ್ತದೆ. ತಾವು ಸಾಲ ಕೊಟ್ಟಾಗ, ಜನರಿಂದ ಕಾನೂನು ರೀತಿಯಲ್ಲಿ ಹಣ ಮರಳಿ ಪಡೆಯಬೇಕು ಎಂದರು.ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ಪ್ರಕರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶವನ್ನು ರಾಜ್ಯ ಸರ್ಕಾರ ಫೆ. 12ರಂದು ಜಾರಿಗೆ ತಂದಿದೆ. ಇದರ ಹೊರತಾಗಿ ಫೈನಾನ್ಸ್ ಸಂಸ್ಥೆಗಳ ಕುರಿತು ಆರ್‌ಬಿಐ ಸ್ಪಷ್ಟವಾದ ಗೈಡ್‌ಲೈನ್ಸ್ ಇದೆ. ಆದರೆ, ಅದನ್ನು ನೀವು ಪಾಲಿಸುತ್ತಿಲ್ಲ ಎಂದು ಹೇಳಿದರು.
ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, ಸಾಲಗಾರರ ಮನೆಗೆ ಹೋಗಿ ಅವರ ಕುಟುಂಬದ ಸದಸ್ಯರಿಗೆ ಮತ್ತು ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ತೊಂದರೆ ಕೊಡಬಾರದು. ಕಾನೂನು ರೀತಿಯಲ್ಲಿ ಹಣ ವಸೂಲಿ ಮಾಡಬೇಕು. ಅದನ್ನು ಬಿಟ್ಟು ನಾಲ್ಕು ಜನರನ್ನು ಅವರ ಮನೆಗೆ ಕಳಿಸಿ ಕುಟುಂಬದ ಸದಸ್ಯರಿಗೆ ತೊಂದರೆ ನೀಡುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ನಿಮ್ಮ ತೊಂದರೆಯಿಂದ ಯಾರಾದರೂ ಮೃತರಾದರೆ ಸಮಸ್ಯೆಯಾಗುತ್ತದೆ ಎಂದು ಎಚ್ಚರಿಸಿದರು.ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ-2025 ಕಾನೂನಿನ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಾಗಾರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ, ಲೀಡ್ ಬ್ಯಾಂಕ್ ಮ್ಯಾನೇಜರ್ ವೀರೇಂದ್ರಕುಮಾರ, ತಹಸೀಲ್ದಾರ್‌ರು, ಲೇವಾದೇವಿ ಹಾಗೂ ಗಿರವಿದಾರರು. ಫೈನಾನ್ಸ್ ಹಾಗೂ ಫೈನಾನ್ಸ್ ಕಾರ್ಪೊರೇಷನ್ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.