ಡಂಬಳ: ರಾಜ್ಯದಲ್ಲಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ಮುಂಚೆಯೇ 2026ರಲ್ಲಿ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ಡಂಬಳ ಮಂಡಳದ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ಪಕ್ಷ ನಿಮ್ಮ ಮೇಲೆ ನಂಬಿಕೆ ಇಟ್ಟಿದೆ. ಬೂತ್ ಮಟ್ಟದಲ್ಲಿ ಸಂಘಟಿಸಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುತ್ತೀರಿ ಎನ್ನುವ ವಿಶ್ವಾಸ ಇದೆ. ರಾಜಕಾರಣ ವೇಗವಾಗಿ ಬದಲಾಗುತ್ತಿದೆ. ಕೇವಲ ಎರಡು ವರ್ಷದಲ್ಲಿ ಕಾಂಗ್ರೆಸ್ ವಿರುದ್ಧ ಜನರ ಬಂಡಾಯ ಎದ್ದಿದೆ. ರಾಜ್ಯದ ಜನತೆಗೆ ಈ ಸರ್ಕಾರದ ಮೇಲೆ ಭ್ರಾಂತಿಯಾಗಿದೆ. ನಮ್ಮ ಸರ್ಕಾರ ಇದ್ದಾಗ ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೆವು. ಅದನ್ನು ನಿಲ್ಲಿಸಿದರು. ರೈತರಿಗೆ ಡೀಸೆಲ್ ಸಬ್ಸಿಡಿ ನೀಡುತ್ತಿದ್ದೆವು ಅದನ್ನು ನಿಲ್ಲಿಸಿದರು. ರೈತರಿಗೆ ಸಬ್ಸಿಡಿಯಲ್ಲಿ ಪೈಪು, ಪಂಪುಗಳನ್ನು ನೀಡುತ್ತಿದ್ದೆವು. ರೈತರಿಗೆ ಒಳ್ಳೆಯ ಬೀಜ, ಗೊಬ್ಬರ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ. ರಾಜ್ಯದಲ್ಲಿ ಬಡವರ ವಿರೋಧಿ ಸರ್ಕಾರ ಇದೆ. ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿದೆ. ಪ್ರತಿಯೊಂದು ಕಾಗದ ಪಡೆಯಲು, ಮನೆ ಕಟ್ಡಿಸಲು ಭ್ರಷ್ಟಾಚಾರ, ಪಡಿತರ ಚೀಟಿ ಪಡೆಯಲು ಭ್ರಷ್ಟಾಚಾರ ತುಂಬಿದೆ ಎಂದು ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆ ಬರೆರಾಜ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಹೆಚ್ಚಳ, ಪೆಟ್ರೊಲ್ ಬೆಲೆ ಹೆಚ್ಚಳ, ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದರು. ಹಾಲಿನ ದರ ಹೆಚ್ಚಳ, ಸುಮಾರು ಅರವತ್ತು ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಜನರಿಂದ ಪಡೆಯುತ್ತಿದ್ದಾರೆ. ಎರಡು ವರ್ಷದಲ್ಲಿ ಮೂರು ಲಕ್ಷ ಕೋಟಿ ಹೆಚ್ಚು ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಒಂದು ಲಕ್ಷ ಕೋಟಿ ಸಾಲ ಹೊರಿಸಿದ್ದಾರೆ. ಮುಂದೆ ಬರುವ ಸರ್ಕಾರ ಇವರು ಮಾಡಿರುವ ಸಾಲ ತೀರಿಸಬೇಕು. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಇದರ ವಿರುದ್ಧ ನಾವು ಮಂಡಲ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು ಕಾರ್ಯಕರ್ತರ ಪಡೆಯನ್ನು ಬಿಜೆಪಿ ಹೊಂದಿದೆ. ರಾಜಕಾರಣಿಗಳು ಆದರ್ಶ ಸಮಾಜ ಸೇವಕರಾಗಿ ಕಾರ್ಯ ನಿರ್ವಹಿಸಬೇಕು, ಇನ್ನೂ ರಾಜ್ಯದಲ್ಲಿ 3 ವರ್ಷದವರಿಗೆ ಅಭಿವೃದ್ಧಿ ಕಾರ್ಯ ನಡೆಯಲ್ಲ, ಸ್ವಪಕ್ಷದ ಶಾಸಕರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ನಿರ್ಮಿಸಲು ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ ಎಂದರು.