ಚಿತ್ರದುರ್ಗ: ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವತಿಯಿಂದ ಜ.28ರಂದು ಪುರಭವನದಲ್ಲಿ ರಾಜ್ಯ ಮಟ್ಟದ ಅಲೇಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ ನಡೆಯಲಿದೆ ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜೋಗಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಟಿ.ಎ.ಶರವಣ, ಅರುಣ್ ಡಿ.ಎಸ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ ಸೇರಿದಂತೆ ಇತರರು ಭಾಗವಹಿಸಲಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ 46 ಜಾತಿಗಳ ಜನಾಂಗದವರು ಭಾಗವಹಿಸಲಿದ್ದು, ಈ ಜಾತಿಗಳ ಕುಲಶಾಸ್ತ್ರ ಅಧ್ಯಯನ ಮತ್ತು ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಲಾಗುವುದು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರ ಸಮೀಕ್ಷೆ ಆಗಬೇಕು. ಸರ್ಕಾರಿ ಜಾಗದಲ್ಲಿ 10 ವರ್ಷ ಮೇಲ್ಪಟ್ಟು ಗುಡಿಸಲು, ಟೆಂಟ್ ಹಾಕಿ ಜೀವನ ನಡೆಸುತ್ತಿರುವವರಿಗೆ ಅದೇ ಜಾಗವನ್ನು ಅವರ ಹೆಸರಿಗೆ ನೀಡಬೇಕು ಹಾಗೂ ನಮ್ಮ ಜನಾಂಗದ ಕುಲಕಸುಬನ್ನು ಮಾಡುತ್ತಿರುವವರಿಗೆ ಸರಿಯಾದ ಸಾಲ ಸೌಲಭ್ಯ ಕಲ್ಪಿಸುವ ಹಕ್ಕೊತ್ತಾಯ ಮಂಡಿಸಲಾಗುವುದು.ಕಲೋತ್ಸವದಲ್ಲಿ ಹಿಂದುಳಿದ ಮಠಾಧೀಶರ ಒಕ್ಕೂಟದ ರಾಜ್ಯಾಧ್ಯಕ್ಷ ಬಸವನಾಗಿ ದೇವ ಶ್ರೀಗಳನ್ನು ಗೌರವಿಸಲಾಗುವುದು, ಇದರೊಂದಿಗೆ ಪ್ರತಿಭಾ ಪುರಸ್ಕಾರ ಸಾಧಕರಿಗೆ ಸನ್ಮಾನ, ವಿಚಾರ ಸಂಕೀರಣ, ಜನಾಂಗ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯವನ್ನು ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪ್ರತಾಪ್ ಜೋಗಿ ತಿಳಿಸಿದರು.
ಸಂಘಟನೆಯ ಗೌರವಾಧ್ಯಕ್ಷ ರಾಮು ಗೋಸಾಯಿ, ಕಾರ್ಯದರ್ಶಿ ಇಂದಿರಾ ದಾಸರ್, ಜ್ಯೋತಿ ದಾಸರ್, ಚಿಕ್ಕಣ್ಣ ಯಾದವ್, ಮಧು ಜೋಗಿ, ಚಂದು ಯಾದವ್ ಉಪಸ್ಥಿತರಿದ್ದರು.