- ಕಳೆದ ವರ್ಷ ಬರೋಬ್ಬರಿ 17,138 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತನೆ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಅರ್ಧದಷ್ಟು ಮುಂಗಾರು ಮಳೆ ಅವಧಿ ಮುಕ್ತಾಯಕ್ಕೆ ಬಂದರೂ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈವರೆಗೆ ಶೇ.6 ರಷ್ಟು ಮಾತ್ರ ಬಿತ್ತನೆ ಒಂದು ಕಡೆಯಾದರೆ, ಮತ್ತೊಂದು ಕಡೆ ಅಲ್ಪಸ್ವಲ್ಪ ಬಿತ್ತಿದ ಬೆಳೆಯೂ ಮಳೆ ಇಲ್ಲದೇ ಒಣಗುತ್ತಿದೆ. ಇಡೀ ರೈತ ಸಮೂಹ ಆತಂಕದಲ್ಲಿ ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

- ಕಳೆದ ವರ್ಷ ಇದೇ ಅವಧಿಗೆ ಬರೋಬ್ಬರಿ 17,138 ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತನೆ ಕಾರ್ಯ ಪೂರ್ಣ ಗೊಂಡಿತ್ತು. ಆದರೆ, ಈ ಬಾರಿ ಕೇವಲ 5,647 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.


ಈ ಬಾರಿ ಮುಂಗಾರು ಆರಂಭದಿಂದಲೂ ಉತ್ತಮ ಮಳೆಯಾಗಿಲ್ಲ. ಜೂನ್‌ ಮೊದಲ ಮೂರು ದಿನ ಬಿಟ್ಟರೆ, ಜೂನ್‌ ಕೊನೆ ಮತ್ತು ಜುಲೈ ಮೊದಲ ವಾರದಲ್ಲಿ ಮಾತ್ರ ಒಂದಿಷ್ಟು ಮಳೆಯಾಗಿದ್ದು ಬಿಟ್ಟರೆ, ಇಡೀ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ಆಗಿಲ್ಲ. ಹೀಗಾಗಿ, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಸಂಪೂರ್ಣವಾಗಿ ಮಂಕಾಗಿದೆ.

ಶೇ.70 ರಷ್ಟು ಬಿತ್ತನೆ ಕುಂಠಿತ

ಜಿಲ್ಲೆಯಲ್ಲಿ ಒಟ್ಟು 97045 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಆದರೆ, ಮಳೆ ಕೊರತೆ ಯಿಂದ ನಿಗದಿತ ಪ್ರಮಾಣದ ಬಿತ್ತನೆ ಆಗಿಲ್ಲ. ಕಳೆದ 2025ರಲ್ಲಿ ಜುಲೈ 22ಕ್ಕೆ 17,138 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿತ್ತು. ಆದರೆ, ಈ ಬಾರಿ ಮಳೆ ಕಡಿಮೆಯಾಗಿದ್ದರಿಂದ ಕೇವಲ 5,647 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ಮೂಲಕ ಕಳೆದ 2025ರ ಮುಂಗಾರಿನ ಈ ಅವಧಿಗೆ ಹೋಲಿಕೆ ಮಾಡಿದರೆ ಶೇ.30 ರಷ್ಟು ಮಾತ್ರ ಬಿತ್ತನೆ ಆಗಿದೆ. ಶೇ.70 ರಷ್ಟು ಬಿತ್ತನೆ ಕುಂಠಿತವಾಗಿದೆ ಎಂದು ಚಿಕ್ಕಮಗಳೂರು ಕೃಷಿ ಜಂಟಿ ನಿರ್ದೇಶಕ ತಿರುಮಲೇಶ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ತೇವಾಂಶ ಕೊರತೆಗೆ ಒಣಗುತ್ತಿದೆ ಬೆಳೆಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ಬಯಲುಸೇಮೆಯ ತಾಲೂಕುಗಳಲ್ಲಿ ಮಳೆ ಕೊರತೆ ಹೆಚ್ಚಾಗಿದೆ. ಅಲ್ಪಸ್ವಲ್ಪ ಬಿದ್ದ ಮಳೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಇದೀಗ ಮಳೆ ಕೊರತೆಯಿಂದ ಒಣಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬಿತ್ತನೆ ಮಾಡಿದ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

-- ಬಾಕ್ಸ್‌--

ಶೇ.43 ರಷ್ಟು ಮುಂಗಾರು ಮಳೆ ಕೊರತೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಜೂನ್‌ ನಲ್ಲಿ ವಾಡಿಕೆ ಪ್ರಕಾರ 327 ಮಿ.ಮೀ ನಷ್ಟು ಮಳೆಯಾಗ ಬೇಕು. ಆದರೆ, ಕೇವಲ 132 ಮಿ.ಮೀ ಮಳೆಯಾಗಿದೆ. 195.1 ಮಿ.ಮೀ (ಶೇ.59 ರಷ್ಟು) ಮಳೆ ಕೊರತೆ ಉಂಟಾಗಿದೆ. ಇನ್ನೂ ಜುಲೈ ಈವರೆಗೆ ಒಟ್ಟು 394 ಮಿ.ಮೀ ವಾಡಿಕೆ ಆಗಬೇಕು. ಆದರೆ, ಕೇವಲ 279 ಮಿ.ಮೀ ಮಳೆಯಾಗಿದೆ. 114 ಮಿ.ಮೀ (ಶೇ.29ರಷ್ಟು) ಮಳೆ ಕೊರತೆಯಾಗಿದೆ. ಒಟ್ಟಾರೆ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಶೇ.43 ರಷ್ಟು ಮಳೆ ಕೊರತೆ ಉಂಟಾಗಿದೆ.

-- ಬಾಕ್ಸ್‌ --

ಚಿಕ್ಕಮಗಳೂರು ತಾಲೂಕಿನಲ್ಲಿ ಮಾತ್ರ ಉತ್ತಮ ಮಳೆಇಡೀ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಚಿಕ್ಕಮಗಳೂರು ತಾಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಉತ್ತಮ ಮಳೆಯಾದ ವರದಿಯಾಗಿದೆ. ಆದರೆ, ಈ ಮಳೆ ಕೃಷಿ ಚಟುವಟಿಕೆಗೆ ಉಪಯುಕ್ತವಾದಂತೆ ಕಂಡು ಬಂದಿಲ್ಲ. ತಾಲೂಕಿನಲ್ಲಿ ಜೂನ್‌ ಮತ್ತು ಜುಲೈ ಈ ಅವಧಿಯಲ್ಲಿ ಒಟ್ಟು 198 ಮಿ.ಮೀ ವಾಡಿಕೆ ಮಳೆಯಾಗಿದೆ. ಆದರೆ, ಈ ಬಾರಿ 264 ಮಿ,.ಮೀ ಮಳೆಯಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ ಶೇ.33ರಷ್ಟು ಅಧಿಕ ಮಳೆಯಾಗಿರುವುದು ವಿಪರ್ಯಾಸ.

---ಬಾಕ್ಸ್‌---

ತಾಲೂಕುವಾರು ಬಿತ್ತನೆ ಮತ್ತು ಮಳೆ ಕೊರತೆ ವಿವರತಾಲೂಕುಬಿತ್ತನೆ ಪ್ರಮಾಣ (ಹೆಕ್ಟೇರ್‌) ಮಳೆ ಕೊರತೆ ಶೇ.ಚಿಕ್ಕಮಗಳೂರು1261+33.5 (ಅಧಿಕ)ಕಡೂರು2558-26.8ಕೊಪ್ಪ10-36.8ಮೂಡಿಗೆರೆ0-27.6ಎನ್‌.ಆರ್‌.ಪುರ133-32.6ಶೃಂಗೇರಿ1027.8

ತರೀಕೆರೆ36030.2

ಅಜ್ಜಂಪುರ1,315-44.3ಕಳಸ0-40.4ಒಟ್ಟ5,647-42.9-- ಕೋಟ್‌ --

ಜಿಲ್ಲೆಯಲ್ಲಿ ಈ ಬಾರಿ ಭಾರೀ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ಅದರಲ್ಲೂ ಬಯಲು ಸೀಮೆ ತಾಲೂಕುಗಳಲ್ಲಿ ಅಲ್ಪಸ್ವಲ್ಪ ಬಿತ್ತನೆ ಮಾಡಿದ ಬೆಳೆ ಸಹ ಒಣಗುತ್ತಿದೆ. ಬಿದ್ದ ಮಳೆ ಸಹ ಅಸಮತೋಲನವಾಗಿದೆ. ಹೀಗಾಗಿ ಬಿತ್ತನೆ ಪ್ರಮಾಣ ಕುಂಠಿತವಾಗಿದೆ.

ಡಾ.ಎಂ.ತಿರುಮಲೇಶ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಿಕ್ಕಮಗಳೂರು

--ಫೋಟೋ

ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಒಣಗುತ್ತಿರುವ ಬೆಳೆಯನ್ನು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಡಾ.ಎಂ.ತಿರುಮಲೇಶ್‌ ಪರಿಶೀಲಿಸುತ್ತಿರುವುದು.