ಕನ್ನಡಪ್ರಭ ವಾರ್ತೆ ಉಡುಪಿ
ವರ್ಷದಿಂದ ವರ್ಷಕ್ಕೆ ಉಡುಪಿಯ ದ್ವೈವಾರ್ಷಿಕ ಪರ್ಯಾಯೋತ್ಸವ ಪ್ರಸಿದ್ಧಿ ಪಡೆಯುತ್ತಿದೆ. ಈ ಬಾರಿಯಂತೂ ಪುತ್ತಿಗೆ ಶ್ರೀಗಳ ವಿಶ್ವ ಗೀತಾ ಪರ್ಯಾಯ, ವಿಶ್ವವೇ ಈ ಪರ್ಯಾಯದಲ್ಲಿ ಭಾಗಿಯಾಗುತ್ತಿದೆ.ಇದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವ ಎನ್ನುವುದು ಒಂದು ಕಾರಣವಾದರೇ, ವಿಶ್ವದಾದ್ಯಂತ ಭಕ್ತಾಭಿಮಾನಿಗಳನ್ನು ಪಡೆದಿರುವ ಶ್ರೀಗಳ ಪರ್ಯಾಯ ಎನ್ನುವುದು ವಿಶ್ವಪ್ರಸಿದ್ಧಿಗೆ ಇನ್ನೊಂದು ಕಾರಣವಾಗಿದೆ.ಪುತ್ತಿಗೆ ಮಠದ ಈ ಹಿಂದಿನ ಪರ್ಯಾಯೋತ್ಸವಗಳೂ ವಿಭಿನ್ನ ವೈಶಿಷ್ಟ್ಯಮಯವಾಗಿದ್ದವು. ಈ ಬಾರಿ ಶ್ರೀಗಳು ಒಂದು ಕೋಟಿ ಕೃಷ್ಣ ಭಕ್ತರಿಂದ ಗೀತೆಯನ್ನು ಬರೆಯಿಸಿ ಅದನ್ನು ಕೃಷ್ಣನಿಗೆ ಅರ್ಪಿಸುವ, ಆ ಮೂಲಕ ವಿಶ್ವಶಾಂತಿಯನ್ನು ಪ್ರಾರ್ಥಿಸುವ ಅತ್ಯಂತ ಅಪೂರ್ವ ಮತ್ತು ಈ ಕಾಲಕ್ಕೆ ಅಗತ್ಯವಾಗಿರುವ ಸಂಕಲ್ಪವನ್ನು ಕೈಗೊಂಡಿದ್ದಾರೆ.
ಭಗವದ್ಗೀತೆ ಆಸ್ತಿಕರ ಪಾಲಿಗೆ ನಿತ್ಯ ಪೂಜನೀಯವೂ, ಫಲದಾಯಕವೂ ಆಗಿರುವಂತಹದ್ದು, ಅಂತಹ ಗೀತೆಯನ್ನು ಬರೆಯುವುದು ಎಂದರೆ ಅದೂ ಪೂಜೆಯೇ ಆಗಿದೆ. ಒಂದು ಕೋಟಿಗೂ ಹೆಚ್ಚು ಭಕ್ತರು ನಿತ್ಯವೂ ವ್ರತದಂತೆ ಗೀತೆಯನ್ನು ಬರೆಯುತ್ತಾರೆ ಎಂದರೆ ಆ ಮೂಲಕ ಕೋಟಿ ಮನೆಗಳಲ್ಲಿ ನಿತ್ಯವೂ ಗೀತೆಯ ಮೂಲಕ ಕೃಷ್ಣನ ಪೂಜೆಯಾಗುತ್ತದೆ. ಅದರ ಫಲ ಕೋಟಿಕೋಟಿ ಮನ - ಮನೆಗಳಲ್ಲಿ ನೆಮ್ಮದಿಗೆ, ಆ ಮೂಲಕ ವಿಶ್ವದ ಶಾಂತಿಗೆ ಕಾರಣವಾಗುತ್ತದೆ ಎನ್ನುವುದು ಶ್ರೀಗಳ ಈ ಮಹತ್ಪಪೂರ್ಣ ಸಂಕಲ್ಪದ ಆಶಯವಾಗಿದೆ.ಈಗಾಗಲೇ ಶ್ರೀಗಳು ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಗೀತಾಯಜ್ಞದಲ್ಲಿ ಭಾಗವಹಿಸುವ ಲಕ್ಷಾಂತರ ಭಕ್ತರಿಗೆ ದೀಕ್ಷೆಯನ್ನು ನೀಡಿದ್ದಾರೆ ಮತ್ತು ಲೇಖನಯಜ್ಞಕ್ಕೆ ಪುಸ್ತಕಗಳನ್ನು ವಿತರಿಸಿದ್ದಾರೆ.
ಮುಂದಿನ 2 ವರ್ಷಗಳ ಕಾಲ ಇತ್ತ ಗೀತಾಪುರುಷ ಶ್ರೀಕೃಷ್ಣನನ್ನು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪೂಜಿಸಿದರೆ, ಅತ್ತ ಕೋಟಿ ಮನೆಗಳಲ್ಲಿ ಗೀತಾಯಜ್ಞ ನಡೆಯಲಿದೆ. ಆದ್ದರಿಂದ ಉಡುಪಿಯ ಇತಿಹಾಸದಲ್ಲಿ ಈ ಬಾರಿಯ, ಪುತ್ತಿಗೆ ಮಠದ ಪರ್ಯಾಯೋತ್ಸವವು ವಿಶಿಷ್ಟ ಮೈಲುಗಲ್ಲಾಗಲಿದೆ.