ಕುಶಾಲನಗರ: ಸೈನಿಕ ಶಾಲೆಗಳು ಮಕ್ಕಳಿಗೆ ಉತ್ತಮ ಕೌಶಲ್ಯ, ತರಬೇತಿ, ಶಿಸ್ತು ಜೊತೆಗೆ ದೇಶ ರಕ್ಷಣೆ ಮಾಡುವ ಪ್ರಜೆಯನ್ನಾಗಿ ರೂಪಿಸುವ ಮಹತ್ತರ ಪಾತ್ರ ವಹಿಸುತ್ತವೆ ಎಂದು ಕೇರಳಂ ಮತ್ತು ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೆಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗು-ಮೈಸೂರು ಸಂಸತ್ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದೇಶಭಕ್ತಿ ಹಾಗೂ ನಾಯಕತ್ವ ರೂಪಿಸುವಲ್ಲಿ ಸೈನಿಕ ಶಾಲೆಯ ಪಾತ್ರ ಮಹತ್ತರವಾದುದು ಎಂದರು. ಯುವ ಪೀಳಿಗೆಯಲ್ಲಿ ಶಿಸ್ತು ಹಾಗೂ ವ್ಯಕ್ತಿತ್ವ ನಿರ್ಮಾಣ ಸೈನಿಕ ಶಾಲೆಗಳ ಮೂಲಕ ಸೃಷ್ಟಿಯಾಗುತ್ತವೆ ಎಂದರು. ಸೈನಿಕ ಶಾಲೆಯ ಆವರಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ರಾಜ್ಯಪಾಲರಿಗೆ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ಗೌರವ ವಂದನೆ ಸಲ್ಲಿಸಿದರು.ಕೊಡಗು ಸೈನಿಕ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ಜಿತ್ ಸಿಂಗ್ ಅವರು ರಾಜ್ಯಪಾಲರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಸಮಾರೋಪ ಕಾರ್ಯಕ್ರಮದಲ್ಲಿ ಫ್ಲ್ಯಾಗ್ ರಿಟ್ರೀಟ್ ಪಥ ಸಂಚಲನ ಮೂಲಕ ಕ್ರೀಡಾಕೂಟ ಸಮಾರೋಪಗೊಂಡಿತು. ನಂತರ ರಾಜ್ಯಪಾಲರು ಸೈನಿಕ ಶಾಲೆ ಆವರಣದಲ್ಲಿ ನಿರ್ಮಿಸಲಾದ ಶಾಲಾ ಜಿಮ್ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು.ನಂತರ ಕೆಡೆಟ್ ಗಳು ಗಣ್ಯರು ಭಾಗವಹಿಸಿದ ತಂಡಗಳೊಂದಿಗೆ ಆಯೋಜಿಸಲಾದ ವಿಶೇಷ ಭೋಜನ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದರು. ಸೈನಿಕ ಶಾಲೆ, ಕೊಡಗು ಪ್ರಾಂಶುಪಾಲರಾದ ಕರ್ನಲ್ ಅಮರ್ಜಿತ್ ಸಿಂಗ್ ಅವರು ಸ್ವಾಗತಿಸಿದರು. ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮಹಮ್ಮದ್ ಶಾಜಿ ವಂದಿಸಿದರು.ಚಂದ್ರಾಪುರ ಸೈನಿಕ ಶಾಲೆ ರನ್ನರ್ಸ್: ಪಂದ್ಯದಲ್ಲಿ ಅಂಡರ್ 15 ಬಾಲಕರ ವಿಭಾಗದಲ್ಲಿ ಚಂದ್ರಾಪುರ ಸೈನಿಕ ಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಂಪಾಲ್ ಸೈನಿಕ ಶಾಲೆ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು. ಅಂಡರ್ 17 ಬಾಲಕಿಯರ ವಿಭಾಗದಲ್ಲಿ ಸುಜನ್ ಫೋರ್ ತಿರಾ ಸೈನಿಕ ಶಾಲೆ ಚಾಂಪಿಯನ್ ಆದರೆ ಚಂದ್ರಪುರ ಸೈನಿಕ ಶಾಲೆ ರನ್ನರ್ ಸ್ಥಾನ ಗಳಿಸಿತು. ಅಂಡರ್ 17 ಬಾಲಕರ ವಿಭಾಗದಲ್ಲಿ ಇಂಪಾಲ್ ಸೈನಿಕ ಶಾಲೆ ಚಾಂಪಿಯನ್, ಆತಿಥೇಯ ಕೊಡಗು ಸೈನಿಕ ಶಾಲೆ ರನ್ನರ್ ಸ್ಥಾನ ಪಡೆದಿದೆ. ಅತ್ಯುತ್ತಮ ಆಟಗಾರ ಅತ್ಯುತ್ತಮ ಗೋಲ್ ಕೀಪರ್ ಮತ್ತು ಗರಿಷ್ಠ ಗೋಲು ಗಳಿಸಿದ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು.