ಚನ್ನಮ್ಮನ ಸಮಾಧಿಗೆ ಹಾಲುತುಪ್ಪ ಕಾರ್ಯ

KannadaprabhaNewsNetwork |  
Published : Jul 23, 2026, 01:45 AM IST
22ಎಚ್ಎಸ್ಎನ್5ಎ : ಎಚ್‌.ಡಿ.ಕುಮಾರಸ್ವಾಮಿ ಕುಟುಂಬದಿಂದ ಹಾಲುತುಪ್ಪ ಸಮರ್ಪಣೆ. | Kannada Prabha

ಸಾರಾಂಶ

ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಕ್ಯಾತನಹಳ್ಳಿ ಸಮೀಪ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಎಚ್.ಡಿ.ದೇವೇಗೌಡರು, ಪುತ್ರರಾದ ಎಚ್.ಡಿ.ರೇವಣ್ಣ, ಎಚ್. ಡಿ. ಕುಮಾರಸ್ವಾಮಿ, ಅನುಸೂಯ, ಶೈಲಜಾ ಹಾಗೂ ಸೊಸೆಯಂದಿರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಕವಿತಾ, ಸೌಮ್ಯ ಹಾಗೂ ಕುಟುಂಬ ಸದಸ್ಯರು ಅಂತ್ಯಸಂಸ್ಕಾರದ ಮೂರನೇ ದಿನದ ಹಾಲು ತುಪ್ಪ ಕಾರ್ಯದ ಅಂಗವಾಗಿ ಸಮಾಧಿಗೆ ಹಾಲು, ತುಪ್ಪ ಬಿಟ್ಟು ಸದ್ಗತಿ ಸಿಗಲಿ ಎಂದು ಪಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಕ್ಯಾತನಹಳ್ಳಿ ಸಮೀಪ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಎಚ್.ಡಿ.ದೇವೇಗೌಡರು, ಪುತ್ರರಾದ ಎಚ್.ಡಿ.ರೇವಣ್ಣ, ಎಚ್. ಡಿ. ಕುಮಾರಸ್ವಾಮಿ, ಅನುಸೂಯ, ಶೈಲಜಾ ಹಾಗೂ ಸೊಸೆಯಂದಿರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಕವಿತಾ, ಸೌಮ್ಯ ಹಾಗೂ ಕುಟುಂಬ ಸದಸ್ಯರು ಅಂತ್ಯಸಂಸ್ಕಾರದ ಮೂರನೇ ದಿನದ ಹಾಲು ತುಪ್ಪ ಕಾರ್ಯದ ಅಂಗವಾಗಿ ಸಮಾಧಿಗೆ ಹಾಲು, ತುಪ್ಪ ಬಿಟ್ಟು ಸದ್ಗತಿ ಸಿಗಲಿ ಎಂದು ಪಾರ್ಥಿಸಿದರು.

ಅಮ್ಮನಿಗೆ ಚಕ್ಕುಲಿ, ಮೈಸೂರು ಪಾಕ್ ಇಷ್ಟ:

ಪುತ್ರಿ ಅನುಸೂಯಾ ಮಂಜುನಾಥ್ ಮಾತನಾಡಿ, ಒಕ್ಕಲಿಗ ಸಂಪ್ರದಾಯದಂತೆ ನಾವು ಮಣ್ಣಲ್ಲಿ ಇಟ್ಟ ಮೇಲೆ ಮೂರು ದಿನದ ಹಾಲು ತುಪ್ಪ ಕಾರ್ಯ ಮಾಡುತ್ತೇವೆ. ಅಮ್ಮನಿಗೆ ಚಕ್ಕುಲಿ, ಮೈಸೂರು ಪಾಕ್ ಇಷ್ಟವಾದ ಸಿಹಿ. ಆದ್ದರಿಂದ ಮನೆಯಲ್ಲಿ ವಿಶೇಷವಾಗಿ ತಯಾರಿಸಿ ತಂದು ಸಮರ್ಪಣೆ ಮಾಡಿದ್ದೇವೆ. ಶ್ರದ್ಧಾಭಕ್ತಿಯಿಂದ ಹಾಲು, ತುಪ್ಪ ಬಿಟ್ಟು ಸದ್ಗತಿ ಸಿಗಲಿ ಎಂದು ನಮ್ಮ ಕುಟುಂಬದವರು, ಎಲ್ಲರೂ ಪ್ರಾರ್ಥನೆ ಮಾಡಿದ್ದಾರೆ. ವಿಷ್ಣು ಸಹಸ್ರನಾಮ, ರುದ್ರ ಚಮಕ ಹೇಳಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹನ್ನೊಂದು ದಿನ ಪಾರಾಯಣ ಮಾಡಬೇಕೆಂದು ಅಪ್ಪ( ದೇವೇಗೌಡರು) ಸಂಕಲ್ಪ ಮಾಡಿಸಿದ್ದಾರೆ. ಆದ್ದರಿಂದ ನಿರಂತರವಾಗಿ ಹನ್ನೊಂದು ದಿನ ಪಾರಾಯಣ ನಡೆಯುತ್ತದೆ. ಇವತ್ತು ಆ ಪಾರಾಯಣ ಆದ ಮೇಲೆ ಧೂಪ, ದೀಪಗಳನ್ನು ಮಾಡಿ ಹಾಲು, ತುಪ್ಪ ಬಿಟ್ಟು ನಮ್ಮ ಕಾರ್ಯಕ್ರಮವನ್ನ ಪ್ರಶಾಂತವಾಗಿ, ಸುಸೂತ್ರವಾಗಿ ಮಾಡಿದ್ದೇವೆ ಎಂದು ಕಂಬನಿ ಮಿಡಿಯುತ್ತಾ ನುಡಿದರು.ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ :

ನನ್ನ ತಂದೆ ತಾಯಿ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಅವರು ಸಂತೋಷಕ್ಕಿಂತ ಹೆಚ್ಚು ನೋವನ್ನು ಅನುಭವಿಸಿದ್ದಾರೆ. ಎಲ್ಲರ ಬಗ್ಗೆ ಚಿಂತನೆ ಮಾಡಿಕೊಂಡು ಬಂದಂತವರು, ನನ್ನ ತಾಯಿಗೆ ಆರೋಗ್ಯದ ಸಮಸ್ಯೆ ಇದ್ದಾಗಲೂ ನಮ್ಮ ತಂದೆಯವರು ಮಗುವಿಗಿಂತ ಹೆಚ್ಚಾಗಿ ಅವರನ್ನು ನೋಡಿಕೊಂಡಿದ್ದರು. ಹರದನಹಳ್ಳಿಯ ಶಿವನ ದೇವಸ್ಥಾನದಲ್ಲಿ ಆಸಿಡ್ ಪ್ರಕರಣ ನಡೆದ ನಂತರ ಅವರು ಬದುಕಿದ್ದೇ ಒಂದು ಪವಾಡ. ಆ ಘಟನೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡಿ ಮರುಜೀವ ಪಡೆದಿದ್ದರು. ಘಟನೆ ನಡೆದು ೨೬ ವರ್ಷಗಳು ಆಗಿದೆ. ಅವರು ದೈಹಿಕವಾಗಿ ಎಷ್ಟು ಹಿಂಸೆ ಪಟ್ಟಿದ್ದಾರೆ ಎಂಬುದನ್ನು ನಾವು ಕಂಡಿದ್ದೇವೆ. ಆ ದಾಳಿಯ ನಂತರ ನಮ್ಮ ತಂದೆಯವರು ರಾಜಕೀಯದಲ್ಲಿ ಬಿಡುವಿಲ್ಲದಿದ್ದರೂ, ಅವರನ್ನು ಯಾವ ರೀತಿ ನೋಡಿಕೊಂಡಿದ್ದಾರೆ ಮತ್ತು ಅವರಿಗೆ ಮಾನಸಿಕವಾಗಿ ಯಾವ ರೀತಿ ಧೈರ್ಯ ತುಂಬಿದ್ದಾರೆ ಅದೆಲ್ಲ ಒಂದು ದೊಡ್ಡ ಇತಿಹಾಸ ಎಂದು ಘಟನೆಯನ್ನು ನೆನೆದು ಮರುಗಿದರು. ನೆನಪಿನ ಶಕ್ತಿ ಕಡಿಮೆಯಾಗಿತ್ತು:

ಇವತ್ತು ನಮ್ಮ ತಾಯಿ ನಮ್ಮನ್ನು ಅಗಲುವುದಕ್ಕೆ ಒಂದೂವರೆ ವರ್ಷದ ಹಿಂದಿನ ಘಟನೆ(ಪ್ರಜ್ವಲ್‌ ಪ್ರಕರಣ) ಕಾರಣ. ಅವರು ಅಂದಿನಿಂದಲೇ ಹಾಸಿಗೆ ಹಿಡಿದಿದ್ದು, ಅಲ್ಲಿಂದ ಇಲ್ಲಿವರೆಗೂ ಅವರು ಸಾಕಷ್ಟು ಹಿಂಸೆ ಪಟ್ಟಿದ್ದಾರೆ. ಹಂತಹಂತವಾಗಿ ಅವರ ನೆನಪಿನ ಶಕ್ತಿಯು ಕೂಡ ಕಡಿಮೆ ಆಯಿತು. ಅವರ ನೆನಪಿನ ಶಕ್ತಿ ಕಡಿಮೆಯಾದರೂ ಯಾರಾದರೂ ಮನೆಗೆ ಬಂದರೆ ಊಟ ಮಾಡಿ ಎಂದು ಹೇಳುತ್ತಿದ್ದರು. ನನ್ನನ್ನ ಮತ್ತೆ ನನ್ನ ಇಬ್ಬರು ತಂಗಿಯರನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದರು. ನಾನು ಮನೆಗೆ ಹೋದಾಗ ನನ್ನ ಬಗ್ಗೆ ವಿಚಾರಿಸುತ್ತಿದ್ದರು. ಜನರಿಗೆ ಒಳ್ಳೆ ಕೆಲಸ ಮಾಡಪ್ಪ ಎಂದು ಹೇಳುತ್ತಿದ್ದರು. ಆದರೆ ಎರಡು ಮೂರು ಬಾರಿ ಕುಟುಂಬದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಜ್ವಲ್‌ನನ್ನು ಯಾವಾಗ ಕರೆದುಕೊಂಡು ಬರ್ತೀಯ ಎಂದು ಕೇಳಿದ್ದರು. ಇವತ್ತು ನನಗೆ ಅದರ ಬಗ್ಗೆ ನೋವಿದೆ. ಅಂತಹ ಸನ್ನಿವೇಶಗಳನ್ನು ತಾಳಲಾರದೆ ಇಂಥ ದಿನಗಳನ್ನು ನಾವು ಕಾಣಬೇಕಾಯಿತು. ಇನ್ನೂ ಮೂರ್ನಾಲ್ಕು ವರ್ಷಗಳು ಈ ದಿನ ಈ ದಿನವನ್ನು ನಾವು ನೋಡಲಿಕ್ಕೆ ಸಾಧ್ಯ ಇರಲಿಲ್ಲ. ಆ ದೇವರು ತೀರ್ಮಾನಕ್ಕೆ ನಾವೆಲ್ಲರೂ ತಲೆಬಾಗಬೇಕು ಎಂದರು. ನಮ್ಮ ತಂದೆಯವರು ಇನ್ನೂ ಏಳೆಂಟು ವರ್ಷ ಇರ್ತಾರೆ ಅಂದುಕೊಂಡಿದ್ದೇವೆ. ಆದರೆ ನಮಗೆ ಭಯ ಇರುವುದು ನಮ್ಮ ತಾಯಿಯ ಅವರು ಜೊತೆ ಆತ್ಮೀಯ ಭಾವನೆ ಇಟ್ಟುಕೊಂಡಿದ್ದರು. ಆ ಕೊರಗಿನಲ್ಲಿ ಏನಾದರೂ ಸಣ್ಣಪುಟ್ಟ ಸಮಸ್ಯೆಗಳು ಆಗಬಹುದು ಎನ್ನುವ ಭಯವೂ ಇದೆ ನಮಗೆ. ಆದ್ದರಿಂದ ಅವರ ಜೊತೆ ಯಾರಾದರೂ ಒಬ್ಬರು ಮಾನಸಿಕವಾಗಿ ಧೈರ್ಯ ತುಂಬಲು ಕುಟುಂಬದವರು ಇರಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದರು.

ಧಾರ್ಮಿಕ ಕ್ಷೇತ್ರವಾಗಿ ಮಾಡುತ್ತೇವೆ:ಇದು ನಾಡಿನ ಜನತೆಗೆ ಸಮರ್ಪಣೆ ಮಾಡುವ ಜಾಗ, ನಮ್ಮ ಕುಟುಂಬದವರು, ನಮ್ಮ ತಂದೆಯವರ ಜೊತೆ ಚರ್ಚೆ ಮಾಡಿ ಈ ಸ್ಥಳವನ್ನು ಧಾರ್ಮಿಕ ಕ್ಷೇತ್ರವಾಗಿ ನಿರ್ಮಾಣ ಮಾಡುತ್ತೇವೆ. ನಮ್ಮ ಹಳೆಯ ಸಂಸ್ಕೃತಿ ಯಾವ ರೀತಿ ಉಳಿಸಬೇಕು, ವಿಶ್ವಕ್ಕೆ ಮಾದರಿ ಆಗುವ ರೀತಿಯಲ್ಲಿ ಅವರಿಬ್ಬರ ಹೆಸರಿನಲ್ಲಿ ನಿರ್ಮಾಣ ಮಾಡುತ್ತೇವೆ. ನಮ್ಮ ಸ್ವಂತಕ್ಕಲ್ಲ. ಇದರಲ್ಲಿ ನಮ್ಮ ಕುಟುಂಬದ ಹಸ್ತಕ್ಷೇಪ ಇರುವುದಿಲ್ಲ ಎಂದರು. ಸಾಮಾಜಿಕವಾಗಿ ಸಂಕಷ್ಟದಲ್ಲಿರುವವರು, ಸಮಸ್ಯೆ ಇರುವವರು ಈ ಸ್ಥಳಕ್ಕೆ ಬಂದು ನೆಮ್ಮದಿಯ ಜೀವನ ನಡೆಸಿ, ಉತ್ತಮವಾಗಿ ಹೊರಗೆ ಹೋಗುವ ರೀತಿಯಲ್ಲಿ ಯಾವ್ಯಾವ ರೀತಿಯ ಕೆಲಸಗಳು ಆಗಬೇಕು. ವಯೋವೃದ್ದರಿಗೆ, ಅನಾಥ ಮಕ್ಳಳಿಗೆ, ರೈತರು ಸಂಶೋಧನೆ ಮಾಡುವ ಕೇಂದ್ರ ಇಲ್ಲಿ ಆಗುತ್ತೆ ಹಾಗೂ ಸಂಸ್ಕೃತ ಪಾಠಶಾಲೆ ನಿರ್ಮಾಣ ಸೇರಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಮೂರು ದಿನಗಳ ಹಾಲು, ತುಪ್ಪದ ಕಾರ್ಯದಲ್ಲಿ ಶಾಸಕರಾದ ಸುರೇಶ್ ಗೌಡ, ಬಾಲಕೃಷ್ಣ, ಎ.ಮಂಜು, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಎಂಎಲ್‌ಸಿ ಡಾ. ಸೂರಜ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಸೇರಿದಂತೆ ಹಲವಾರು ಶಾಸಕರು, ಮಾಜಿ ಶಾಸಕರು ಹಾಗೂ ಸಾವಿರಾರು ಜನರು ಭಾಗವಹಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿ ಪಾರ್ಥಿಸಿದರು.

ಹಾಲು, ತುಪ್ಪದ ಕಾರ್ಯದಲ್ಲಿ ಭಾಗವಹಿಸಿದ ಜನರಿಗಾಗಿ ಸುಮಾರು ಮೂರು ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು, ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಎಲ್ಲಾ ಕುಟುಂಬದ ಸದಸ್ಯರು ಸಾಮಾನ್ಯ ಜನರಂತೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಿದ್ದ ಸ್ಥಳದಲ್ಲಿ ಕುಳಿತು ಊಟ ಮಾಡಿದರು. -----ಫೋಟೊ ೧, ೨, ೩ ;

ಹೊಳೆನರಸೀಪುರ ತಾ. ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಕ್ಯಾತನಹಳ್ಳಿ ಸಮೀಪ ಚನ್ನಮ್ಮನವರ ಸಮಾಧಿ ಸ್ಥಳದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಪುತ್ರರಾದ ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ಅನಸೂಯ, ಎಚ್.ಡಿ.ಶೈಲಜಾ ಹಾಗೂ ಸೊಸೆಯಂದಿರಾದ ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ, ಕವಿತಾ, ಸೌಮ್ಯ ಹಾಗೂ ಕುಟುಂಬ ಸದಸ್ಯರು ಹಾಲು ತುಪ್ಪ ಕಾರ್ಯ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ಹಾಲು, ತುಪ್ಪ ಬಿಟ್ಟು ಸದ್ಗತಿ ಸಿಗಲಿ ಪಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈ ಕಚೇರಿಗೆ ಬಿಜೆಪಿಗರ ಮುತ್ತಿಗೆ ಯತ್ನ: ಹೈಡ್ರಾಮಾ!
ಮಳೆಯ ಕಣ್ಣಾಮುಚ್ಚಾಲೆ: ರೈತರಿಗೆ ತಪ್ಪದ ಆತಂಕ