ಧಾರವಾಡ: ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಇಲ್ಲಿಯ ಲೈನ್ ಬಜಾರ್‌ನಲ್ಲಿ ಬುಧವಾರ ಆರ್‌ಸಿಬಿ ಅಭಿಮಾನಿಗಳು ಪಟಾಕಿ ಸಿಡಿಸಿ, ಆರ್‌ಸಿಬಿ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಐಪಿಎಲ್ ಶುರುವಾದಾಗಿನಿಂದಲೂ ನಾನು ಆರ್‌ಸಿಬಿ ಅಭಿಮಾನಿ. ಮೊದಲ ವರ್ಷದಿಂದಲೂ ಕಪ್ ಗೆಲ್ಲುವ ಕನಸು ಇದೀಗ ನೆರವೇರಿದೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಎಲ್ಲರಿಗೂ ಉಚಿತವಾಗಿ ಎಗ್ಗರೈಸ್ ಹಾಗೂ ಕಬಾಬ್ ವಿತರಸುತ್ತಿದ್ದೇನೆ ಎಂದು ಎಗ್ಗರೈಸ್ ಅಂಗಡಿ ಮಾಲೀಕ ರವಿ ಕುರಬರ ಪತ್ರಿಕೆಗೆ ಮಾಹಿತಿ ನೀಡಿದರು.
ಇನ್ನು, ಮಂಗಳವಾರ ರಾತ್ರಿ ಆರ್‌ಸಿಬಿ ಗೆಲವು ದಾಖಲಿಸುತ್ತಿಂತೆ ನಗರದಲ್ಲೆಡೆ ಪಟಾಕಿ ಸಿಡಿತ, ಸಂಭ್ರಮಾಚರಣೆ ಜೋರಾಗಿತ್ತು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಪರಸ್ಪರ ಶುಭಾಷಯಗಳನ್ನು ಕೋರಲಾಯಿತು. ಗಾಂಧಿನಗರ ಹಾಗೂ ಜ್ಯುಬಿಲಿ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳಿಂದಾಗಿ ಕೆಲ ಹೊತ್ತು ರಸ್ತೆ ತಡೆಯೂ ಉಂಟಾಗಿ ಗೊಂದಲ ಸೃಷ್ಟಿಯಾಗಿತ್ತು. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿಯೇ ಸಂಭ್ರಮಾಚರಣೆ ಮಾಡುತ್ತಿದ್ದವರನ್ನು ತೆರವುಗೊಳಿಸಿದರು.ಚೆನ್ನಮ್ಮ ವೃತ್ತದಲ್ಲಿ ಹಬ್ಬದ ವಾತಾವರಣ
ದುರ್ಗದ ಬೈಲ್, ಶಿರೂರು ಪಾರ್ಕ್, ಕೇಶ್ವಾಪುರ ಸರ್ಕಲ್, ವಿಜಯನಗರ ನವನಗರ ಸೇರಿ ವಿವಿಧೆಡೆ ಅಭಿಮಾನಿಗಳು ಗುಲಾಲ್ ಎರಚಿ, ಪಟಾಕಿ ಸಿಡಿಸಿ ಒಬ್ಬರಿಗೊಬ್ಬರು ಶುಭಾಶಯ ಕೋರಿದರು. 18 ವರ್ಷಗಳ ಬಳಿಕ ಆರ್‌ಸಿಬಿ ಕಪ್ ಗೆದ್ದಿದ್ದನ್ನು ಕೊಂಡಾಡಿದರು. ಕೇಕೆ, ಪಿಪಿ ಉದುತ್ತ ಬೈಕ್, ಕಾರ್‌ಗಳಲ್ಲಿ ರ್‍ಯಾಲಿ ನಡೆಸಿದರು. ಕೆಲವೆಡೆ ಆರ್‌ಸಿಬಿ, ವಿರಾಟ್ ಕೊಹ್ಲಿ ಬ್ಯಾನರ್‌ಗಳನ್ನು ಹಿಡಿದು ಕುಣಿದು ಕುಪ್ಪಳಿಸಿದರು. ಬುಧವಾರವೂ ಹಲವೆಡೆ ಆರ್‌ಸಿಬಿ ಜರ್ಸಿ ತೊಟ್ಟು, ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಡಿಜೆ ಸದ್ದು ಜೋರು: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತಂಡ ಭರ್ಜರಿ ಗೆಲುವು ಸಾಧಿಸಿ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ನವಲಗುಂದ ಪಟ್ಟಣದ ತುಂಬೆಲ್ಲ ವಿಜಯೋತ್ಸವ ಆಚರಿಸಿದರು.ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ಅಳವಡಿಸಿದ್ದ ಬೃಹತ್ ಎಲ್.ಇ.ಡಿ ಸ್ಕ್ರೀನ್‌ನಲ್ಲಿ ಪಂದ್ಯ ವೀಕ್ಷಿಸಿದ ಅಭಿಮಾನಿಗಳು ಜಯ ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದರು. ಪಟ್ಟಣದ ಮೂಲೆ.ಮೂಲೆಯಲ್ಲೂ ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚುವುದರೊಂದಿಗೆ ಡಿಜೆ ಸದ್ದಿನೊಂದಿಗೆ ಕುಣಿದು ಕುಪ್ಪಳಿಸಿದರು.