ಪ್ರವೀಣ್ ಘೋರ್ಪಡೆ
ಕನ್ನಡಪ್ರಭ ವಾರ್ತೆ ತಾಳಿಕೋಟೆಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಳಿಕೋಟೆ ನಗರವು ಸದ್ಯ ಧಾರ್ಮಿಕ ಮತ್ತು ದಾಸೋಹ ಕ್ಷೇತ್ರದಲ್ಲಿಯೂ ಕೂಡ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಶ್ರೀ ಖಾಸ್ಗತೇಶ್ವರ ಜಾತ್ರೆ ನಡೆಯುತ್ತಿರುವುದರಿಂದ ನಿತ್ಯ ದಾಸೋಹದಲ್ಲಿ ತರಹೇವಾರಿ ಪದಾರ್ಥವನ್ನು ಭಕ್ತರಿಗೆ ಊಣಬಡಿಸಲಾಗುತ್ತಿದೆ. ಈ ಬಾರಿ ೧೦ ಸಾವಿರಕ್ಕೂ ಮೇಲ್ಪಟ್ಟ ಭಕ್ತರಿಗೆ ಜು.೬ರಂದು ಪಾನಿಪುರಿ ಹಾಗೂ ಜು.೭ರಂದು ಹಾಲು ಹುಗ್ಗಿ ತುಪ್ಪದ ಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಹಿಂದಿನ ಪೀಠಾಧಿಪತಿ ಲಿಂ.ವಿರಕ್ತ ಮಹಾಸ್ವಾಮೀಜಿ ನುಡಿಯಂತೆ, ಈಗಿನ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ಕೂಡಾ ಭಕ್ತರೇ ಶ್ರೀಮಠದ ಆಸ್ತಿ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಶ್ರೀ ಖಾಸ್ಗತ ಮಠದ ಜಾತ್ರೋತ್ಸವದ ದಾಸೋಹ ವ್ಯವಸ್ಥೆಗೆ ಎಲ್ಲ ಗ್ರಾಮ ಪಟ್ಟಣಗಳಿಂದ ಅವಶ್ಯಕ ದವಸ ದಾನ್ಯಗಳಲ್ಲದೇ ರೊಟ್ಟಿ ಇನ್ನಿತರಗಳನ್ನು ಭಕ್ತಾಧಿಗಳು ಅರ್ಪಿಸುತ್ತಿದ್ದಾರೆ. ಭಕ್ತಾಧಿಗಳು ನೀಡಿದ ದವಸ್ಯ ದಾನ್ಯಗಳಿಂದ ನಿತ್ಯ ವಿವಿಧ ರೀತಿಯ ಪ್ರಸಾದ ತಯಾರಿಸಿ ಯಾವುದೇ ರೀತಿಯ ಕೊರತೆ ಆಗದ ಹಾಗೇ ಶ್ರೀಮಠದಿಂದ ನೋಡಿಕೊಳ್ಳಲಾಗುತ್ತಿದೆ.ಪ್ರತೀ ವರ್ಷ ಸಜ್ಜಕ ತುಪ್ಪದ ಊಟ ಭಕ್ತರಿಗೆ ಉಣಬಡಿಸಲಾಗುತ್ತಿತ್ತು. ಈ ಸಲ ಶ್ರೀಮಠದ ಬಾಲಶಿವಯೋಗಿ ಶ್ರೀಗಳ ಮಾತಿನಂತೆ ಬದಲಾವಣೆ ಮಾಡಿ, ಹಾಲು-ಹುಗ್ಗಿ ಮತ್ತು ಪಾನಿಪುರಿ ನೀಡಲು ಮುಂದಾಗಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಜಾತ್ರೆಗೆ ದೇಣಿಗೆ ಸಂಗ್ರಹವಿಲ್ಲ:ಈ ಹಿಂದೆ ಜಾತ್ರೆಯ ಸಮಯದಲ್ಲಿ ಭಕ್ತಾಧಿಗಳ ಮನೆ ಮನೆಗೆ ಶ್ರೀ ಖಾಸ್ಗತರ ಪಲ್ಲಕ್ಕಿಯೊಂದಿಗೆ ದೇಣಿಗೆ ಸಂಗ್ರಹ ಮಾಡಲಾಗುತ್ತಿತ್ತು. ಆದರೆ ಕಳೆದ ೪ ವರ್ಷಗಳಿಂದ ಶ್ರೀಮಠದಿಂದ ದೇಣಿಗೆ ಪಟ್ಟಿ ಎತ್ತುವ ಕಾರ್ಯವನ್ನು ಶ್ರೀಮಠದ ಬಾಲ ಶಿವಯೋಗಿ ಶ್ರೀಸಿದ್ದಲಿಂಗದೇವರು ಸ್ಥಗಿತಗೊಳಿಸಿದ್ದಾರೆ. ಸದ್ಯ ಶ್ರೀಮಠಕ್ಕೆ ಭಕ್ತರೇ ಬಂದು ಜಾತ್ರೆ ಉತ್ಸವದ ಜೊತೆಗೆ ದಾಸೋಹದ ವ್ಯವಸ್ಥೆಗೆ ತಮ್ಮ ಕೈಲಾದಷ್ಟು ಕಾಣಿಕೆ, ದವಸ ದಾನ್ಯಗಳನ್ನು ನೀಡುತ್ತಿದ್ದಾರೆ. ಜಾತ್ರೆಗೆ ಮುಂಬೈ, ಪುಣೆ, ಗೋವಾ, ಹೈದರಾಬಾದ್, ಹುಬ್ಬಳ್ಳಿ, ಕಲ್ಬುರ್ಗಿ ಒಳಗೊಂಡಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಶ್ರೀಮಠಕ್ಕೆ ಆಗಮಿಸುತ್ತಾರೆ.
ಭಕ್ತರೇ ಶ್ರೀಮಠದ ಆಸ್ತಿ ಎಂದು ನಾನು ಶ್ರೀ ಖಾಸ್ಗತರ ಹಾಗೂ ಶ್ರೀ ವಿರಕ್ತಶ್ರೀಗಳ ವಾಣಿಯಂತೆ ನಡೆದಿದ್ದೇನೆ. ಎಲ್ಲ ಭಕ್ತರು ಶ್ರೀಮಠದ ಆಸ್ತಿಯೆಂದು ಭಾವಿಸಿದ್ದೇನೆ. ಈ ಹಿಂದೆ ಶ್ರೀಗಳು ನಡೆದುಕೊಂಡು ಬಂದ ಹಾದಿಯಲ್ಲಿ ನಾನೂ ಕೂಡ ಸಾಗುತ್ತಿದ್ದೇನೆ. ಲಿಂ.ವಿರಕ್ತಶ್ರೀಗಳು ನನಗೆ ಕನಸಿನಲ್ಲಿ ಹೇಳಿದಂತೆ ಈ ಬಾರಿಯ ಜಾತ್ರೆಯಲ್ಲಿ ಹಾಲು, ಹುಗ್ಗಿ, ತುಪ್ಪ ಪ್ರಸಾದ ಭಕ್ತಾಧಿಗಳಿಗೆ ನೀಡಲಾಗುತ್ತಿದೆ. ಎಲ್ಲ ಭಕ್ತರು ಪ್ರಸಾದ ಸ್ವಿಕರಿಸಿ ಶ್ರೀ ಖಾಸ್ಗತರ, ವಿರಕ್ತಶ್ರೀಗಳ ಕೃಪೆಗೆ ಪಾತ್ರರಾಗಬೇಕು. ಬಾಲಶಿವಯೋಗಿ ಶ್ರೀಸಿದ್ದಲಿಂಗ ದೇವರು, ಖಾಸ್ಗತ ಮಠ ತಾಳಿಕೋಟೆ