ಹಾಲು ದರ ಕಡಿತ: ಉತ್ಪಾದಕರಿಂದ ಪ್ರತಿಭಟನೆ

KannadaprabhaNewsNetwork | Published : Sep 5, 2024 12:37 AM

ಸಾರಾಂಶ

ರಾಬಕೊ ಹಾಲಿನ ಒಕ್ಕೂಟ ಏಕಾಏಕಿ ರೈತರಿಗೆ ನೀಡುವ ಹಾಲಿನ ದರ ಕಡಿತ ಮಾಡಿರುವುದು ಖಂಡನೀಯ.

ಹೂವಿನಹಡಗಲಿ: ರಾಯಚೂರು, ಬಳ್ಳಾರಿ/ವಿಜಯನಗರ, ಕೊಪ್ಪಳ (ರಾಬಕೊ) ಹಾಲು ಒಕ್ಕೂಟದ ವ್ಯವಸ್ಥಾಪಕರು ಏಕಾಏಕಿ ಹಾಲಿನ ದರ ಕಡಿತ ಮಾಡಿರುವ ನಿರ್ಧಾರ ಖಂಡಿಸಿ ಪಟ್ಟಣದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಲ್ಲಿ ಹಾಲು ಉತ್ಪಾದಕರು ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜೀವರಡ್ಡಿ, ಕೆಎಂಎಫ್‌ ಮೇಲೆ ರೈತರಿಗೆ ವಿಶ್ವಾಸವಿದೆ. ಹಾಲಿನ ಉತ್ಪಾದನೆ ಹೆಚ್ಚಿದೆ. ಆದರೆ ರಾಬಕೊ ಹಾಲಿನ ಒಕ್ಕೂಟ ಏಕಾಏಕಿ ರೈತರಿಗೆ ನೀಡುವ ಹಾಲಿನ ದರ ಕಡಿತ ಮಾಡಿರುವುದು ಖಂಡನೀಯ. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಹಾಲಿನ ದರ ಹೆಚ್ಚಳ ಮಾಡುವ ಸಂದರ್ಭದಲ್ಲಿ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕ್ರಮಕೈಗೊಳ್ಳುತ್ತಾರೆ. ಆದರೆ ರೈತರಿಗೆ ನೀಡುವ ಹಾಲಿನ ದರದಲ್ಲಿ ₹1.50 ದರ ಕಡಿತ ಮಾಡಲಾಗಿದೆ. ರೈತರ ಹಾಲು ಲೀಟರ್‌ಗೆ ₹29ಗಳಿಗೆ ಖರೀದಿ ಮಾಡಿ, ಮಾರುಕಟ್ಟೆಯಲ್ಲಿ ₹50ಗಳಿಗೆ ಮಾರಾಟ ಮಾಡಲಾಗುತ್ತಿದೆ. ಉಳಿದ ಹಣ ಮಧ್ಯವರ್ತಿಗಳ ಜೇಬು ಸೇರುತ್ತಿದೆ. ಇಲ್ಲಿನ ಒಕ್ಕೂಟ ವ್ಯವಸ್ಥೆಯನ್ನೇ ಹಾಳು ಮಾಡಲಾಗಿದೆ. ಈ ಹಿಂದೆ ಎಂ.ಪಿ. ರವೀಂದ್ರ, ಸೋಮಶೇಖರ ರೆಡ್ಡಿ ಅಧ್ಯಕ್ಷರಾಗಿದ್ದಾಗ ಸಾಕಷ್ಟು ಲಾಭದಲ್ಲಿದ್ದ ಒಕ್ಕೂಟದಲ್ಲಿ ಈಗ ₹13 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಇದೇ ರೀತಿ ಅವ್ಯವಸ್ಥೆ ಮುಂದುವರಿದರೆ ಹಾಲು ಉತ್ಪಾದಕರ ಬದುಕು ಬೀದಿಗೆ ಬಂದು ನಿಲ್ಲುತ್ತದೆ. ವಾರದೊಳಗೆ ಕಡಿತ ಮಾಡಿರುವ ದರವನ್ನು ಹೆಚ್ಚಳ ಮಾಡದಿದ್ದರೆ ಜಿಲ್ಲಾ ಮಟ್ಟದಲ್ಲಿ ಬೃಹತ್‌ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಿವನಗೌಡ ಮಾತನಾಡಿ, ಕಳೆದ 9 ತಿಂಗಳಿನಿಂದ ಹಾಲಿನ ಪ್ರೋತ್ಸಾಹಧನ ವಿತರಣೆ ಮಾಡದ ಒಕ್ಕೂಟ ಈಗ ಹಾಲಿನ ದರ ಕಡಿತ ಮಾಡಿದೆ. ರೈತರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ನ್ಯಾಯ ಒದಗಿಸಬೇಕಿದೆ. ಕೂಡಲೇ ಒಕ್ಕೂಟ ₹3 ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಗಂದೋಡಿ ಬಸವರಾಜ ಮಾತನಾಡಿ, ಶಿವಮೊಗ್ಗ, ಹಾವೇರಿ ಭಾಗದಲ್ಲಿ ಹಾಲಿನ ದರ ಹೆಚ್ಚಳವಾಗಿದೆ. ಆದರೆ ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಹಾಲಿನ ದರ ಕಡಿಮೆ ಇದ್ದು, ಇದರಲ್ಲೇ ದರ ಕಡಿತ ಮಾಡಿರುವುದು ಸರಿಯಲ್ಲ. ಆಡಳಿತ ಮಂಡಳಿ ಕೂಡಲೇ ದರ ಕಡಿತ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ವಿಶ್ವನಾಥ ಮಂತ್ರೋಡಿ ಮಾತನಾಡಿದರು. ಹಾಲು ಉತ್ಪಾದಕ ಸಹಕಾರ ಸಂಘದ ಪದಾಧಿಕಾರಿಗಳಾದ ಎಂ.ಮೈಲಾರೆಪ್ಪ, ಪಿ.ಬಸವಣ್ಯಪ್ಪ, ಮಲ್ಲಿಕಾರ್ಜುನ, ಬಜ್ಜಿ ಬಸಪ್ಪ, ಕೋಡಬಾಳ ಬಸವರಾಜ, ಎನ್‌.ನರೇಂದ್ರ, ಎಚ್‌.ಶಿವಣ್ಣ, ಆರ್‌.ಟಿ. ನಾಗರಾಜ, ಮಹೇಶ ಹಾಗೂ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ತಹಸೀಲ್ದಾರ್‌ ಜಿ.ಸಂತೋಷಕುಮಾರಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಪ್ರತಿಭಟನೆ ರ‍್ಯಾಲಿ ಹೊರಟು ಮುಖ್ಯ ರಸ್ತೆಯ ಮೂಲಕ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತಕ್ಕೆ ಬಂದು, ಅಲ್ಲಿ ಸಮಾವೇಶಗೊಂಡಿತು.

Share this article