ರೈತರ ಹಿತಕ್ಕಾಗಿ ದರ ಹೆಚ್ಚಳ: ಡಿಕೆಶಿ

KannadaprabhaNewsNetwork | Published : Jun 27, 2024 1:05 AM

ಸಾರಾಂಶ

ಸರ್ಕಾರ ಹಾಲಿನ ದರ ಹೆಚ್ಚಿಸಿಲ್ಲ. ರೈತರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ನೀಡಿ ಅದಕ್ಕೆ ತಕ್ಕನಾಗಿ ದರ ನಿಗದಿ ಮಾಡಲಾಗಿದೆ. ಇದನ್ನು ಪ್ರತಿಪಕ್ಷ ಬಿಜೆಪಿಯವರು ವಿರೋಧಿತ್ತಿರುವುದು ರೈತ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಸರ್ಕಾರ ಹಾಲಿನ ದರ ಹೆಚ್ಚಿಸಿಲ್ಲ. ರೈತರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲನ್ನು ಗ್ರಾಹಕರಿಗೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ನೀಡಿ ಅದಕ್ಕೆ ತಕ್ಕನಾಗಿ ದರ ನಿಗದಿ ಮಾಡಲಾಗಿದೆ. ಇದನ್ನು ಪ್ರತಿಪಕ್ಷ ಬಿಜೆಪಿಯವರು ವಿರೋಧಿತ್ತಿರುವುದು ರೈತ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಹಾಲಿನ ದರ ಏರಿಕೆ ವಿಚಾರವಾಗಿ ಬಿಜೆಪಿಗರ ಟೀಕೆ ಬಗೆಗಿನ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ರೈತರ ವಿರೋಧಿಗಳು ಎಂದು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯದಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಹಾಲಿನ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ರೈತರ ಹಿತದೃಷ್ಟಿಯಿಂದ ಆ ಹೆಚ್ಚುವರಿ ಹಾಲನ್ನು ಗ್ರಾಹಕರಿಗೆ ನೀಡಲು ಅರ್ಧ ಮತ್ತು ಒಂದು ಲೀಟರ್‌ ಹಾಲಿನ ಪ್ಯಾಕ್‌ನಲ್ಲಿ 50 ಮಿ.ಲೀ. ಹೆಚ್ಚುವರಿ ಸೇರಿಸಿ ಮಾರಾಟ ಮಾಡಲಾಗುತ್ತಿದೆ. ಅದಕ್ಕನುಗುಣವಾಗಿ ದರ ನಿಗದಿಪಡಿಸಲಾಗಿದೆ. ಇದನ್ನು ಬಿಜೆಪಿಯವರು ದರ ಹೆಚ್ಚಳ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಕಿಡಿಕಾಡಿದರು.

ರಾಜಕೀಯವಾಗಿ ಯಾರು ಏನು ಬೇಕಾದರೂ ಹೇಳಿಕೆ ನೀಡಬಹುದು. ಆದರೆ ರೈತರ ಹಿತ ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಹಾಲಿನ ದರಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಬೆಲೆಗೆ ಹಾಲು ನೀಡಲಾಗುತ್ತಿದೆ. ನಮ್ಮ ರೈತರು ಹಸುಗಳನ್ನು ಮಾರಿಕೊಳ್ಳುವ ದುಸ್ಥಿತಿಯಲ್ಲಿ ಇದ್ದಾರೆ. ನನ್ನ ಪ್ರಕಾರ ಹಾಲಿನ ದರ ಹೆಚ್ಚಿಸಬೇಕಿದೆ ಎಂದರು. ಕೋಟ್‌

ಸಚಿವರಿಂದ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಬೇಡಿಕೆ ಬರುತ್ತಿರುವ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಕೇಳಿ. ಈ ಬಗ್ಗೆ ಉತ್ತರ ನೀಡಲು ಅವರೇ ಸೂಕ್ತ ವ್ಯಕ್ತಿ.

- ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ

Share this article