ಗುಣಮಟ್ಟದ ಹಾಲಿನಿಂದ ಕ್ಷೀರ ಕ್ರಾಂತಿ ಸಾಧ್ಯ

KannadaprabhaNewsNetwork | Published : Apr 4, 2025 12:47 AM

ಸಾರಾಂಶ

ಹೈನುಗಾರರು ತುಮಕೂರು ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಹಾಲನ್ನು ಡೇರಿಗಳಿಗೆ ಹಾಕುವ ಮೂಲಕ ಕ್ಷೀರ ಕ್ರಾಂತಿ ಮಾಡುವ ನಮ್ಮ ಸಂಕಲ್ಪಕ್ಕೆ ಬಲ ನೀಡಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಹೈನುಗಾರರು ತುಮಕೂರು ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಗುಣಮಟ್ಟದ ಹಾಲನ್ನು ಡೇರಿಗಳಿಗೆ ಹಾಕುವ ಮೂಲಕ ಕ್ಷೀರ ಕ್ರಾಂತಿ ಮಾಡುವ ನಮ್ಮ ಸಂಕಲ್ಪಕ್ಕೆ ಬಲ ನೀಡಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು. ಅವರು ನಗರದ ನಂದಿನಿ ಕ್ಷೀರ ಭವನದಲ್ಲಿ ಗುರುವಾರ ಲೆಕ್ಕ ಪುಸ್ತಕ ನಿರ್ವಹಣೆ ಬಗ್ಗೆ ತಾಲೂಕು ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಮತ್ತು ಡೈರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಾಲು ಉತ್ಪಾದಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ತುಮಕೂರು ಹಾಲು ಒಕ್ಕೂಟ ರೈತರ ಹುಲ್ಲು ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದು ನಷ್ಟ ಸಂಭವಿಸಿದ ಸಂದರ್ಭದಲ್ಲಿ ೧೦ ಸಾವಿರ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಅದನ್ನು ೧೫ ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ, ಜೊತೆಗೆ ಹಾಲು ಉತ್ಪಾದಕರ ರಾಸುಗಳು ಮರಣ ಹೊಂದಿದ ಸಂದರ್ಭದಲ್ಲಿ ನೀಡುತ್ತಿದ್ದ ವಿಮಾ ಪರಿಹಾರ ಹಣವನ್ನು ೭೦ ಸಾವಿರ ರುಪಾಯಿಗಳಿಗೆ ಏರಿಕೆ ಮಾಡಲಾಗಿದ್ದು ಹೈನುಗಾರಿಕೆಗೆ ಹೆಚ್ಚು ಶಕ್ತಿ ನೀಡಿದಂತಾಗಿದೆ. ಹಾಲು ಉತ್ಪಾದಕ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿ ಕಾಣಲು, ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಹಾಗೂ ಉತ್ಪಾದಕರ ಸಮನ್ವಯತೆ ಜೊತೆಗೆ ಲೆಕ್ಕಪತ್ರ ಪ್ರಕ್ರಿಯೆಗಳು ಪಾರದರ್ಶಕವಾಗಿದ್ದಾಗ ಡೇರಿ ಆರ್ಥಿಕ ಪ್ರಗತಿ ಸಾಧಿಸಲಿದೆ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕರ್ತವ್ಯ ಮಾಡಬೇಕು, ಅಲ್ಲದೆ ಹಾಲು ಹೆಚ್ಚಳಕ್ಕೆ ಉತ್ಪಾದಕರಿಗೆ ಪ್ರೋತ್ಸಾಹಿಸಬೇಕು. ತಾಲೂಕಿನಲ್ಲಿ ಪ್ರತಿ ದಿನ ೧ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿ ಹೊಂದಿದಾಗ ರೈತರು ಮತ್ತಷ್ಟು ಆರ್ಥಿಕ ಸದೃಢತೆಯನ್ನು ಸಾಧಿಸಲು ಸಾಧ್ಯವಾಗಲಿದೆ ಎಂದರು. ತುಮಕೂರು ಹಾಲು ಒಕ್ಕೂಟ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ ಸಂಘಗಳ ಅಭಿವೃದ್ಧಿಗೆ ಕಾರ್ಯಾಗಾರಗಳಲ್ಲಿ ನೀಡುವಂತಹ ಮಾಹಿತಿಯನ್ನು ಕೇಳಿ ಅಳವಡಿಸಿಕೊಂಡಾಗ ಸಂಘಗಳ ಮುನ್ನಡೆಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು. ಉಪ ವ್ಯವಸ್ಥಾಪಕ ಗಿರೀಶ್ ಮಾತನಾಡಿ ಸಂಘಗಳ ಬಲವರ್ಧನೆಗೆ ಒಕ್ಕೂಟ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಇದನ್ನು ಪಾರದರ್ಶಕವಾಗಿ ಸ್ವೀಕರಿಸಿ ಹಾಲು ಉತ್ಪಾದನೆ ಹೆಚ್ಚಳ ಗೊಳಿಸಿಕೊಳ್ಳುವ ಪ್ರಯತ್ನ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹಾಗೂ ಉತ್ಪಾದಕರು ಒಗ್ಗಟ್ಟಾಗಿ ಮಾಡಿದಾಗ ಗುಣಮಟ್ಟದ ಹಾಲಿನ ಜೊತೆಗೆ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಬೇಕೆಂಬ ನಮ್ಮ ಗುರಿ ತಲುಪಲು ಸಾಧ್ಯವಾಗಲಿದೆ ಎಂದರು. ಲೆಕ್ಕ ಪುಸ್ತಕ ನಿರ್ವಹಣೆ ಬಗ್ಗೆ ಜಂಟಿ ನಿರ್ದೇಶಕ ಉಮಾಶಂಕರ್ ಉಪನ್ಯಾಸ ನೀಡಿದರು.

ವಿಸ್ತರಣಾಧಿಕಾರಿಗಳಾದ ಚೈತ್ರ, ಕಿರಣ್ ಕುಮಾರ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಅಜ್ಜಣ್ಣ ಡೇರಿ ಅಧ್ಯಕ್ಷ ಮಲ್ಲೇಶ್ ಸೇರಿದಂತೆ ಶಿರಾ ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಕಾರ್ಯದರ್ಶಿಗಳು ಹಾಜರಿದ್ದರು.

Share this article