ಚೆಲುವನಾರಾಯಣಸ್ವಾಮಿ, ಮಹಾಲಕ್ಷ್ಮಿ ಕಲ್ಯಾಣನಾಯಕಿ ಕಲ್ಯಾಣೋತ್ಸವ

KannadaprabhaNewsNetwork |  
Published : Apr 04, 2025, 12:47 AM IST
3ಕೆಎಂಎನ್ ಡಿ32 | Kannada Prabha

ಸಾರಾಂಶ

ವೈರಮುಡಿ ಬ್ರಹ್ಮೋತ್ಸವ ವೇಳೆ ಧಾರಾಮಂಟಪದಲ್ಲಿ ನಡೆಯುವ ಕಲ್ಯಾಣೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ಆಂಧ್ರ, ತಮಿಳುನಾಡಿನಿಂದ ನೂರಾರು ಭಕ್ತರು ಸಹ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆವರ್ಷಧಾರೆ ನಂತರ ಕಲ್ಯಾಣಿಸಮುಚ್ಚಯದ ಧಾರಾಮಂಟಪದಲ್ಲಿ ಚೆಲುವನಾರಾಯಣಸ್ವಾಮಿ ಹಾಗೂ ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರ ಕಲ್ಯಾಣೋತ್ಸವ ಗುರುವಾರ ವೈಭವದಿಂದ ನೆರವೇರಿತು.ವರ್ಷಕ್ಕೆ ಒಮ್ಮೆ ಮಾತ್ರ ವೈರಮುಡಿ ಬ್ರಹ್ಮೋತ್ಸವ ವೇಳೆ ಧಾರಾಮಂಟಪದಲ್ಲಿ ನಡೆಯುವ ಕಲ್ಯಾಣೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲು ಆಂಧ್ರ, ತಮಿಳುನಾಡಿನಿಂದ ನೂರಾರು ಭಕ್ತರು ಸಹ ಭಾಗವಹಿಸಿದ್ದರು. ಧಾರಾಮಹೋತ್ಸವದ ಅಂಗವಾಗಿ ಇಡೀ ಧಾರಾಮಂಟಪವನ್ನು ಆಕರ್ಷಕವಾಗಿ ಪುಷ್ಪಾಲಂಕಾರ ಮಾಡಿ ತಳಿರುತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಕಲ್ಯಾಣಿ ಸಮುಚ್ಚಯವನ್ನು ದೀಪಾಲಂಕಾರದಿಂದ ಝಗಮಗಿಸುವಂತೆ ಮಾಡಲಾಗಿತ್ತು.

ಕಲ್ಯಾಣನಾಯಕಿ ಅಮ್ಮನವರಿಗೆ ಸಂಜೆ 5.30ರ ವೇಳೆಗೆ ಕಲ್ಯಾಣಿಯಲ್ಲಿ ಉತ್ಸವ ನೆರವೇರಿಸಲಾಯಿತು. ಸಂಜೆ 6 ಗಂಟೆಗೆ ವೇಳೆಗೆ ದೇವಸೇನಾಧಿಪತಿ ವಿಶ್ವಕ್ಸೇನರ ಉತ್ಸವ ನೆರವೇರಿಸಿ ಕಲ್ಯಾಣೋತ್ಸವ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಲಾಯಿತು.

ನಂತರ ನವ ವಧುವಿನಂತೆ ಬಂಗಾರದ ಪ್ರಭಾವಳಿಯೊಂದಿಗೆ ಸಿಂಗಾರಗೊಂಡ ಶ್ರೀಚೆಲುವನಾರಾಯಣಸ್ವಾಮಿ ಭವ್ಯ ಉತ್ಸವ 6.30ರ ವೇಳೆಗೆ ಧಾರಾಮಂಟಪಕ್ಕೆ ತಲುಪಿದ ನಂತರ ಅಲ್ಲಿ ಕಲ್ಯಾಣನಾಯಕಿ ಅಮ್ಮನವರು ಹಾಗೂ ಚೆಲುವನಾರಾಯಣಸ್ವಾಮಿಗೆ ಸಮನ್ಮಾಲೆ ನೆರವೇರಿಸಲಾಯಿತು. ಲಾಜಹೋಮ ಹಾಗೂ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಳಜಿಯಿಂದಾಗಿ ಕಲ್ಯಾಣೋತ್ಸವಕ್ಕೆ ಕಳೆದ ಸಲಕ್ಕಿಂತ ಉತ್ತಮ ವ್ಯವಸ್ಥೆ ಮಾಡಲಾಗಿತ್ತು. ಮೇಲುಕೋಟೆ ಎಲ್ಲಾ ಪ್ರಮುಖಬೀದಿಗಳಿಗೆ ವಿಶೇಷ ದೀಪಾಲಂಕಾರ ಹಾಗೂ ಜಕ್ಕನಹಳ್ಳಿಯಿಂದ ಮೇಲುಕೋಟೆವರೆಗೆ ಸುಮಾರು 7 ಕಿಮೀ ಉದ್ದಕ್ಕೂ 50 ಅಡಿಅಂತರದಲ್ಲಿ ವಿದ್ಯುತ್ ದೀಪಗಳ ತೋರಣಗಳನ್ನು ಹಾಕಲಾಗಿತ್ತು.

ಜಕ್ಕನಹಳ್ಳಿ ಬಳಿ ಹಾಕಿದ್ದ ವೈರಮುಡಿಗೆ ಸ್ವಾಗತಬಯಸುವ ದೀಪಾಲಂಕಾರದ ಸ್ವಾಗತಕಮಾನು ಭಕ್ತರಿಗೆ ಮುದ ನೀಡುವಂತಿತ್ತು. ದೇವಾಲಯದ ಇಒ ಶೀಲಾ, ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಪರಿಚಾರಕರೂ ಆದ ಪಾರುಪತ್ತೇಗಾರ್ ಪಾರ್ಥಸಾರಥಿ ಉತ್ಸವವವನ್ನು ಅಚ್ಚುಕಟ್ಟಾಗಿ ನಡೆಸಲು ಶ್ರಮಿಸಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವ ಹಾಗೂ ಮೇಲುಕೋಟೆ ಎಸ್.ಎನ್.ಐ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ 10ನೇ ವರ್ಷದ ವೈರಮುಡಿ ಬ್ರಹ್ಮೋತ್ಸವ ನಾದೋಪಾಸನ ಸೇವೆಯಡಿ ಕಲ್ಯಾಣೋತ್ಸವದಂದು ವಿದ್ವಾನ್ ಎಂ.ಎನ್ ಗಣೇಶ್, ಎಂ.ಜಿ ಶ್ರೀಧರ, ಗಿರೀಶ್ ನಾಗೇಶ್ ತಂಡ ಸುಶ್ರಾವ್ಯವಾಗಿ ನಾದಸ್ವರ ನುಡಿಸುವ ಮೂಲಕ ಸ್ವಾಮಿಯ ಉತ್ಸವಕ್ಕೆ ನಾದಮಾಧುರ್ಯದ ಮೆರಗು ಹೆಚ್ಚಿಸಿತ್ತು. ರಾತ್ರಿ 10ಗಂಟೆ ವೇಳೆಗೆ ಕಲ್ಯಾಣೋತ್ಸವದ ಕಾರ್ಯಕ್ರಮಗಳು ಮುಕ್ತಾಯವಾದವು.

ಇಂದು ಧ್ವಜಾರೋಹಣ

ವೈರಮುಡಿ ಬ್ರಹ್ಮೋತ್ಸವದ ಮೊದಲನೇ ತಿರುನಾಳ್ ಅಂಗವಾಗಿ ದೇವಾಲಯದಲ್ಲಿ ಗರುಡ ಧ್ವಜಾರೋಹಣ ನೆರವೇರಲಿದೆ. ಜಾತ್ರಾ ಮಹೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲು ಗರಡುದೇವನನ್ನು ಗರುಡಸಾಮದೊಂದಿಗೆ ಆರಾಧಿಸುವ ಕೈಂಕರ್ಯ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ಹಾಗೂ ರಾತ್ರಿ ತಿರುಪ್ಪರೈ ನಂತರ ಹಂಸವಾಹನೋತ್ಸವ ನೆರವೇರಲಿದೆ.

----------------3ಕೆಎಂಎನ್ ಡಿ32 ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ಗುರುವಾರ ಸಂಜೆ ಕಲ್ಯಾಣಿ ಧಾರಾಮಂಟಪದಲ್ಲಿ ಕಲ್ಯಾಣೋತ್ಸವ ವೈಭವದಿಂದ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ