ಕನ್ನಡಪ್ರಭ ವಾರ್ತೆ ತುಮಕೂರುಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ 118 ನೇ ಜನ್ಮದಿನಾಚರಣೆ ಅಂಗವಾಗಿ ತುಮಕೂರು ನಾಗರೀಕ ವೇದಿಕೆ, ವಿಘ್ನೇಶ್ವರ ಗೆಳೆಯರ ಬಳಗ ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಗುರುವಾರ ನಗರದ ವಿವಿಧೆಡೆ ಅನ್ನದಾಸೋಹ ಏರ್ಪಡಿಸಿ ಸ್ವಾಮೀಜಿಗೆ ಭಕ್ತಿ ಸಮರ್ಪಣೆ ಮಾಡಿದರು. ಎಲ್ಲೆಡೆ ಸಾವಿರಾರು ಜನ ದಾಸೋಹ ಸ್ವೀಕಾರ ಮಾಡಿದರು. ನಗರದ ರೈಲ್ವೆ ನಿಲ್ದಾಣದ ಬಳಿ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನದಾಸೋಹ ಕಾರ್ಯಕ್ರಮ ಉದ್ಘಾಟಿಸಿದ ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಅನ್ನದ ಮಹತ್ವ ಸಾರಿ ದಾಸೋಹ ಸೇವೆಗೆ ನಾಂದಿ ಹಾಡಿದ ಡಾ.ಶಿವಕುಮಾರ ಸ್ವಾಮೀಜಿಗಳ ಆಶಯದ ಹಾದಿಯಲ್ಲಿ ಸಾಗೋಣ ಎಂದರು.ನಗರದಲ್ಲಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಎಸ್.ಎಸ್.ಪುರಂನ ಅರಳಿಮರ ಬಳಿ, ವಿಶ್ವವಿದ್ಯಾಲಯಎದುರು, ಎಪಿಎಂಸಿ ಯಾರ್ಡ್ ಮತ್ತಿತರ ಕಡೆ ಅನ್ನದಾಸೋಹ ಏರ್ಪಡಿಸಲಾಗಿದೆ.ಇದರ ಮೂಲಕ ಸ್ವಾಮೀಜಿಗಳ ಸೇವೆಯನ್ನು ಸ್ಮರಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಅನ್ನದಾಸೋಹಕ್ಕೆ ಮಹತ್ವ ತಂದುಕೊಟ್ಟವರು, ಸರ್ಕಾರದ ಬಿಸಿಯೂಟ ಯೋಜನೆಗೆ ಪ್ರೇರಣೆಯಾದವರು ಡಾ.ಶಿವಕುಮಾರ ಸ್ವಾಮೀಜಿಗಳು.ಇವರ ಸೇವೆ ಸದಾ ಸ್ಮರಣೀಯವಾಗಿರಬೇಕು. ಸೇವೆಯ ಗೌರವಾರ್ಥ ನಗರದ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರಿಡಬೇಕು ಹಾಗೂ ಸ್ವಾಮೀಜಿಗಳಿಗೆ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿದರು.ಈ ವಾರ್ಡಿನ ನಗರ ಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮಾತನಾಡಿ, ಸ್ವಾಮೀಜಿಗಳ ಅನ್ನದಾಸೋಹ ಪರಂಪರೆಯನ್ನು ಮುಂದುವರೆಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ವಿ.ಸೋಮಣ್ಣನವರು ಈ ರೈಲ್ವೆ ನಿಲ್ದಾಣವನ್ನು ಸುಸಜ್ಜಿತವಾಗಿ ಪುನರ್ ನಿರ್ಮಾಣ ಮಾಡುವ ಯೋಜನೆಗೆ ವಿಶೇಷ ಕಾಳಜಿ ವಹಿಸಿದ್ದಾರೆ. ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರವೂ ಅನುಮೋದನೆ ಮಾಡಬೇಕು ಎಂದು ಒತ್ತಾಯಿಸಿದರು.ಬಸ್ ನಿಲ್ದಾಣದಲ್ಲಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ದಾಸೋಹ ಸೇವೆಗೆ ಚಾಲನೆ ನೀಡಿದರು. ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ನಾಗರಾಜು, ಮುಖಂಡರಾದ ಪ್ರಭಾಕರ್, ಅನು ಶಾಂತರಾಜು, ಅತ್ತಿ ಉಮೇಶ್, ನಿವೃತ್ತ ಇಂಜಿನಿಯರ್‌ರವಿಶಂಕರ್ ಮೊದಲಾದವರು ಇಲ್ಲಿನ ದಾಸೋಹ ಸೇವೆಗೆ ಕೈ ಜೋಡಿಸಿದ್ದರು.