ಹಾಲು ಒಕ್ಕೂಟದ ₹16.5 ಕೋಟಿ ಅವ್ಯವಹಾರ ಆರೋಪ ತಳ್ಳಿ ಹಾಕಿದ ಪದಾಧಿಕಾರಿಗಳು

KannadaprabhaNewsNetwork |  
Published : Oct 18, 2026, 03:00 AM IST
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಬಕೊವಿ ಹಾಲು ಒಕ್ಕೂಟದ ಉಪಾಧ್ಯಕ್ಷ ಎನ್.ಸತ್ಯನಾರಾಯಣ.  | Kannada Prabha

ಸಾರಾಂಶ

ಹಿಂದಿನ ಅವಧಿಯಲ್ಲಿ ವಿಮಾ ಪರಿಹಾರ ಹಣ ರೈತರಿಗೆ ತಲುಪದಿರುವ ಕುರಿತು ದೂರುಗಳು ಬಂದ ಹಿನ್ನೆಲೆ ಒಕ್ಕೂಟದ ಉಪಸಮಿತಿ ಮೂಲಕ ಪರಿಶೀಲನೆ ನಡೆಸಲಾಯಿತು.

ಬಳ್ಳಾರಿ: ಇಲ್ಲಿನ ರಾಬಕೊವಿ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ₹16.5 ಕೋಟಿ ಅವ್ಯವಹಾರ ಆರೋಪವನ್ನು ಒಕ್ಕೂಟದ ಉಪಾಧ್ಯಕ್ಷ ಎನ್. ಸತ್ಯನಾರಾಯಣ ಹಾಗೂ ನಿರ್ದೇಶಕರು ಸಾರಾಸಗಟಾಗಿ ತಳ್ಳಿ ಹಾಕಿದ್ದು, ಈ ಸಂಬಂಧ ಸಮಗ್ರ ತನಿಖೆ ಕೈಗೊಳ್ಳಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ಹಣಕಾಸು ವ್ಯವಹಾರಗಳಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಲೆಕ್ಕಪತ್ರ ನಿರ್ವಹಣೆಯಲ್ಲಿಯೂ ಲೋಪವಾಗಿಲ್ಲ. ಆದಾಗ್ಯೂ ಕೆಲವರು ಒಕ್ಕೂಟದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದರು.

ಹಿಂದಿನ ಅವಧಿಯಲ್ಲಿ ವಿಮಾ ಪರಿಹಾರ ಹಣ ರೈತರಿಗೆ ತಲುಪದಿರುವ ಕುರಿತು ದೂರುಗಳು ಬಂದ ಹಿನ್ನೆಲೆ ಒಕ್ಕೂಟದ ಉಪಸಮಿತಿ ಮೂಲಕ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್‌ ವಿಭಾಗದ ಲೆಕ್ಕ ಸಹಾಯಕಿ ಉಮಾಮಹೇಶ್ವರಿ ತಮ್ಮ ಕುಟುಂಬದ ಸದಸ್ಯರುಗಳ ಖಾತೆಗಳಿಗೆ ಒಟ್ಟು ₹44.37 ಲಕ್ಷ ಜಮಾ ಮಾಡಿಕೊಂಡಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಈ ಹಣವನ್ನು ವಸೂಲಿ ಮಾಡಲಾಗಿದ್ದು, ಸಂಬಂಧಪಟ್ಟ ಸಿಬ್ಬಂದಿಯಿಂದ ತಪ್ಪೊಪ್ಪಿಗೆ ಪತ್ರ ಪಡೆಯಲಾಗಿದೆ. ಉಮಾಮಹೇಶ್ವರಿ ಅವರಿಂದ ₹42,04,991 ವಸೂಲಿ ಮಾಡಲಾಗಿದ್ದು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕ್ರಮ ವಹಿಸಲಾಗಿದ್ದು, ಹಣ ದುರಪಯೋಗ ಮಾಡಿಕೊಂಡಿದ್ದ ಕೆ.ಉಮಾಮಹೇಶ್ವರಿ ಅವರನ್ನು ಆಗಸ್ಟ್ 6ರಂದು ಅಮಾನತುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಉಮಾಮಹೇಶ್ವರಿ ಸೇರಿದಂತೆ ಒಕ್ಕೂಟದಲ್ಲಿ ಇನ್ನು ಯಾರಾದರೂ ಅವ್ಯವಹಾರ ಮಾಡಿದ್ದರೆ ಅದನ್ನು ಸಹ ತನಿಖೆ ಮಾಡಿಸುತ್ತಿದ್ದೇವೆ. ಪ್ರಕರಣದಲ್ಲಿ ಭಾಗಿಯಾಗಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಾವು ಸಿದ್ಧರಿದ್ದೇವೆ. ಈ ಸಂಬಂಧ ಹಿರಿಯ ಲೆಕ್ಕ ಪರಿಶೋಧಕರಿಂದ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಸಮಗ್ರ ಮಾಹಿತಿ ಸಿಗುತ್ತಿದ್ದಂತೆಯೇ ಮುಂದಿನ ಹಂತದ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.

ಒಕ್ಕೂಟದ ವಿರುದ್ಧ ಕೇಳಿಬಂದಿರುವ ₹16.5 ಕೋಟಿ ಅವ್ಯವಹಾರದ ಆರೋಪ ಅತ್ಯಂತ ಗಂಭೀರವಾದದ್ದು. ಇಂತಹ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪು ನಡೆದಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ, ಯಾವುದೇ ದಾಖಲೆಗಳಿಲ್ಲದೆ ಒಕ್ಕೂಟದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಹಸುಗಳ ವಿಮಾ ಯೋಜನೆ ರೈತರ ಆರ್ಥಿಕ ಭದ್ರತೆಗೆ ಅತ್ಯಂತ ಮುಖ್ಯವಾಗಿದೆ. ಹೈನುಗಾರಿಕೆಯನ್ನೇ ಜೀವನಾಧಾರವಾಗಿಸಿಕೊಂಡಿರುವ ರೈತರು ಹಸು ಕಳೆದುಕೊಂಡ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿಮಾ ಪರಿಹಾರ ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದರು.

2025ರಿಂದ ಬಜಾಜ್ ವಿಮಾ ಕಂಪನಿಯ ಮೂಲಕ ಜಾನುವಾರುಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿಮೆ ಮಾಡಿಸಿದ ಜಾನುವಾರು ಮೃತಪಟ್ಟಲ್ಲಿ ಪರಿಹಾರದ ಮೊತ್ತ ನೇರವಾಗಿ ಸಂಬಂಧಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಿಂದ ಮಧ್ಯವರ್ತಿಗಳ ಹಸ್ತಕ್ಷೇಪ ತಪ್ಪುವುದರ ಜತೆಗೆ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ. ರೈತರಿಗೆ ಸೇರಬೇಕಾದ ಹಣ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಸತ್ಯನಾರಾಯಣ ವಿವರಿಸಿದರು.

ಒಕ್ಕೂಟದ ನಿರ್ದೇಶಕ ಎಚ್. ಮರುಳಸಿದ್ದಪ್ಪ ಮಾತನಾಡಿ, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪ ನಿರಾಕರಿಸಿದರು. ಕೇವಲ ವೇತನಕ್ಕಾಗಿ ಕೆಲಸ ಮಾಡದೆ ಒಕ್ಕೂಟದ ಬೆಳವಣಿಗೆಗೆ ಆದ್ಯತೆ ನೀಡಿದ್ದೇನೆ. ಆದರೂ ಪ್ರತಿಯೊಂದು ಆರೋಪದಲ್ಲಿಯೂ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ಮೆಗಾ ಡೈರಿ ಸ್ಥಾಪನೆಗೆ ಸಂಬಂಧಿಸಿದ ಜಮೀನು ಖರೀದಿ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ತಮ್ಮ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಅಲ್ಲಿಪುರ ಕೆರೆ ಸಮೀಪ ಒಂಬತ್ತು ಎಕರೆ ಖಾಸಗಿ ಜಮೀನು ಖರೀದಿಸುವ ವಿಚಾರದಲ್ಲಿ ಒತ್ತಡವಿತ್ತು. ಅದಕ್ಕೆ ಒಪ್ಪದ ಕಾರಣ ಕೆಲವರು ತಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎಸ್. ಸುದರ್ಶನ ರೆಡ್ಡಿ, ನಿರ್ದೇಶಕ ಕೃಷ್ಣಾರೆಡ್ಡಿ, ಎಚ್. ಮರುಳಸಿದ್ದಪ್ಪ, ಮಂಜುನಾಥ ನಿಡಶೇಶಿ, ಪ್ರವೀಣ್ ಕುಮಾರ್, ಅಮರಗುಂಡಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

​ರೋಣ, ಸವಡಿಯಲ್ಲಿ ಸಂಕನೂರ ಪರ ಕಳಕಪ್ಪ ಬಂಡಿ ಮತಯಾಚನೆ
ಬ್ಯಾಡಗಿ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳ್ಳತನಕ್ಕೆ ಯತ್ನ