ಇನ್ನು ನಾಲ್ಕೈದು ದಿನದಲ್ಲೇ ಜಂಟಿ ಸಮಿತಿಯಿಂದ ಅಧ್ಯಯನ ಆರಂಭ- ಸಚಿವ ಜೋಶಿ

KannadaprabhaNewsNetwork |  
Published : Oct 18, 2026, 03:00 AM IST
ಪ್ರಹ್ಲಾದ್‌ ಜೋಶಿ | Kannada Prabha

ಸಾರಾಂಶ

ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಜಂಟಿ ಸಮಿತಿ ರಚಿಸಿದ್ದು, ನಾಲ್ಕೈದು ದಿನದಲ್ಲೇ ಅಧ್ಯಯನ ಆರಂಭಿಸಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಶಿಗ್ಗಾಂವಿ: ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಜಂಟಿ ಸಮಿತಿ ರಚಿಸಿದ್ದು, ನಾಲ್ಕೈದು ದಿನದಲ್ಲೇ ಅಧ್ಯಯನ ಆರಂಭಿಸಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹೋರಾಟದಿಂದ ಹಿಂದೆ ಸರಿಯಬೇಕು. ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ. ರೈತ ನಾಯಕರು ಮತ್ತೆ ಚರ್ಚೆಗೆ ಬಂದರೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವತ್ತೂ ರೈತರ ಪರವಿದೆ. ಕೇಂದ್ರ ಸರ್ಕಾರ ನೇಮಿಸಿದ ಪ್ರೊ. ರಮೇಶಚಂದ್ ಸಾರಥ್ಯದ ಸಮಿತಿ ಶೀಘ್ರದಲ್ಲೇ ಎಸ್‌ಎಪಿ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸಮಗ್ರ ಅವಲೋಕನ, ಅಧ್ಯಯನ ನಡೆಸಲಿದೆ ಎಂದರು.

ಸ್ವಾಮಿನಾಥನ್ ವರದಿ ಅನುಷ್ಠಾನ:

2014ರ ನಂತರ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಂಎಸ್‌ಪಿ, ಬೆಂಬಲ ಬೆಲೆಗೆ ಖರೀದಿ ವೃದ್ಧಿಸಿದೆ. ಭತ್ತ ಮತ್ತು ಗೋದಿಯನ್ನು ರೈತರು ಬೆಳೆದಷ್ಟೂ ಖರೀದಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ ಸಚಿವರು, ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಿದ್ದೇ ಮೋದಿ ಅವರು ಎಂದು ಸ್ವತಃ ಸ್ವಾಮಿನಾಥನ್ ಅವರೇ ಟ್ವೀಟ್ ಮಾಡಿದ್ದಾರೆ ಎಂದರು.

ಎಸ್‌ಎಪಿ ಘೋಷಿಸಲಿ..

ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಎಸ್‌ಎಪಿ ಘೋಷಿಸಲಿ. ರಾಜ್ಯ ಸರ್ಕಾರಕ್ಕೆ 2025ರಲ್ಲಿಯೂ ಪತ್ರ ಬರೆದಿದ್ದೆ. ಈ ಬಾರಿಯೂ ಪತ್ರ ಬರೆದಿದ್ದೇನೆ ಮತ್ತು ಸಿಎಂ ಮೊನ್ನೆ ದೆಹಲಿಗೆ ಬಂದ ವೇಳೆ ಸಹ ಈ ಸಂಬಂಧ ಒತ್ತಾಯಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳಲ್ಲಿ ರಿಕವರಿ, ತೂಕದ ವಂಚನೆ ತಡೆಗೆ ಕ್ರಮ ಕೈಗೊಳ್ಳುವಂತೆ ಸೌಹಾರ್ದಯುತ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.

ರಾಜಕೀಯದಲ್ಲಿ ಟಾರ್ಗೆಟ್, ಟೀಕೆ-ಟಿಪ್ಪಣಿಗಳು ಸಹಜವೇ. ಆದರೆ, ಯಾವತ್ತೂ ನಾನೂ ಸಾರ್ವಜನಿಕ ಜೀವನದಲ್ಲಿ ದ್ವೇಷ ಇಟ್ಟುಕೊಂಡಿಲ್ಲ. ರೈತರ ಹೋರಾಟದಲ್ಲೂ ಅಷ್ಟೇ. ಕೆಲವರು ನಿಂದಿಸುತ್ತಿರಬಹುದು. ಅದ್ಯಾವುದನ್ನೂ ಲೆಕ್ಕಿಸದೆ ನೈಜವಾಗಿ ರೈತರ ಸಮಸ್ಯೆಗೆ ಸ್ಪಂದಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.

ಏಳೆಂಟು ವರ್ಷದಿಂದ ಇಳಿದಿಲ್ಲ ಸಕ್ಕರೆ ಬೆಲೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂಎಸ್‌ಪಿ ಜಾರಿಗೊಳಿಸಿದ ಮೇಲೆ ಸಕ್ಕರೆ ಕಾರ್ಖಾನೆಗಳು ಯಾವತ್ತೂ ರು. 31ಕ್ಕಿಂತ ಕಡಿಮೆ ದರಕ್ಕೆ ಸಕ್ಕರೆ ಮಾರಿಲ್ಲ. ಕಳೆದ ಏಳೆಂಟು ವರ್ಷಗಳಿಂದಲೂ ಕನಿಷ್ಠ ಬೆಲೆಗಿಂತ ಕಡಿಮೆ ಹೋಗಲು ಬಿಟ್ಟಿಲ್ಲ ಎಂದರು.

ಕಬ್ಬು ಬೆಳೆಗಾರರು ಎಂಎಸ್‌ಪಿ ಹೆಚ್ಚಳ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಎಂಎಸ್‌ಪಿಗೂ ರೈತರಿಗೂ ಸಂಬಂಧವೇ ಇಲ್ಲ. ಎಂಎಸ್‌ಪಿ ಏನಿದ್ದರೂ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದ್ದು, ಅವುಗಳ ಬಲವರ್ಧನೆಗೆ ಹಾಗೂ ನಷ್ಟ ತಡೆಗಾಗಿ ಅದಿದೆ ಎಂದು ಸ್ಪಷ್ಟಪಡಿಸಿದ ಸಚಿವರು, ಕೇಂದ್ರ ಸರ್ಕಾರ ಸಕ್ಕರೆ ವಿಷಯದಲ್ಲಿ ರೈತರು, ಕಾರ್ಖಾನೆಗಳು ಮತ್ತು ಗ್ರಾಹಕರನ್ನು ಪರಿಗಣಿಸಿಯೇ ಬೆಲೆ ಕಟ್ಟಬೇಕಾಗುತ್ತದೆ. ಯಾರಿಗೂ ನಷ್ಟವಾಗಲು ಬಿಡುವುದಿಲ್ಲ. ಎಲ್ಲರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.

ಕೆಪಿಎಸ್‌ಸಿ ಹಗಣರ ತನಿಖೆ ನಡೆದರೆ ಸರ್ಕಾರವೇ ಪತನ:ಕೆಪಿಎಸ್‌ಸಿ ಹಗರಣ ಬಗ್ಗೆ ಎಸ್‌ಐಟಿ ಅಥವಾ ಕೋರ್ಟ್ ಮಾನಿಟರ್ ಮೂಲಕ ತನಿಖೆ ನಡೆದರೆ ಅನೇಕ ಮಂತ್ರಿಗಳು ಸಿಕ್ಕಿಕೊಳ್ಳುತ್ತಾರೆ. ರಾಜ್ಯ ಸರ್ಕಾರವೇ ಪತನವಾಗಬಹುದು. ಕೆಪಿಎಸ್‌ಸಿ ಬಹುದೊಡ್ಡ ಹಗರಣವಾಗಿದೆ. ಎಸ್‌ಐಟಿ ರಚಿಸಿ, ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿ ಇಲ್ಲವೇ ಸಿಬಿಐ ತನಿಖೆಗೆ ಕೊಡಬೇಕು. ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ಎಸ್‌ಎಪಿ ಕೊಡಲಾಗುತ್ತಿಲ್ಲ. ರೈತರಿಗೆ ಸಮರ್ಪಕ ಬರ ಪರಿಹಾರ ಕೊಡುತ್ತಿಲ್ಲ. ಚರ್ಚೆಗೆ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಅದನ್ನೆಲ್ಲಾ ಮರೆಮಾಚಲು, ಸರ್ಕಾರದ ಆಡಳಿತ ವೈಫಲ್ಯದ ಚರ್ಚೆ ಆಗಬಾರದೆಂದು ಹೀಗೆ ''ಸ್ಟಿಂಗ್ ಆಪರೇಷನ್'' ಚರ್ಚೆ ಹುಟ್ಟು ಹಾಕುತ್ತಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

​ರೋಣ, ಸವಡಿಯಲ್ಲಿ ಸಂಕನೂರ ಪರ ಕಳಕಪ್ಪ ಬಂಡಿ ಮತಯಾಚನೆ
ಬ್ಯಾಡಗಿ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳ್ಳತನಕ್ಕೆ ಯತ್ನ