ಕಡೂರು ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ರಾಗಿ ಖರೀದಿಗೆ ಇರುವ ಮಾನದಂಡಗಳನ್ನು ಅನುಸರಿಸಿಯೇ ಖರೀದಿ ನಡೆಯುತ್ತಿದೆ. ರೈತರು ಗೊಂದಲಕ್ಕೆ ಒಳಗಾಗುವುದು ಬೇಡ. ಹೆಚ್ಚಿನ ಪ್ರಮಾಣದ ರಾಗಿ ನೀಡುವಾಗ ರೈತರು ಸಮರ್ಪಕ ದಾಖಲೆ ಒದಗಿಸಿದರೆ ಮಾತ್ರ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ತಿಳಿಸಿದರು.
ಕಡೂರು ಎಪಿಎಂಸಿ ಪ್ರಾಂಗಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಸೋಮವಾರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಭೇಟಿ ನೀಡಿ ಖರೀದಿಸಿದ ರಾಗಿಯನ್ನು ಕ್ಲೀನ್ ಮಾಡಿ ಗೋದಾಮುಗಳಿಗೆ ದಾಸ್ತಾನು ಮಾಡುವ ಕಟ್ಟೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಜಿಲ್ಲೆಯಾದ್ಯಂತ ರಾಗಿ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾನ ದಂಡಗಳ ಮೂಲಕ ಖರೀದಿಸಿ ರೈತರಿಗೆ ಅನ್ಯಾಯವಾಗದಂತೆ ಕ್ರಮ ವಹಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ಆಗದಂತೆ ನಿರ್ದೇಶನ ನೀಡಲಾಗಿದೆ. ಈ ಸಂಭಂದ ಅಧಿಕಾರಿಗಳು ಆಗಾಗ ತಮಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡುತ್ತಿರುವುದಾಗಿ ವಿವಿರಿಸಿದರು.
ಇನ್ನು ಹದಿನೈದು ದಿನ ನೋಡಿಕೊಂಡು ಹೆಚ್ಚುವರಿ ರಾಗಿ ಇದ್ದಲ್ಲಿ ಖರೀದಿ ದಿನಾಂಕ ವಿಸ್ತರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ಮೊದಲು ಬಂದು ಟೋಕನ್ ಪಡೆದವರಿಗೆ ಆದ್ಯತೆ ನೀಡಿ, ಆನಂತರ ಬಂದ ಹೊಸ ರೈತರಿಗೂ ಖರೀದಿಗೆ ಟೋಕನ್ ನೀಡಲಾಗುವುದು ಎಂದರು.
ರೈತರ ದೂರು ಆಲಿಸಿದ ಡಿಸಿ
ಇದೇ ಸಂಧರ್ಭದಲ್ಲಿ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಆಹಾರ ಇಲಾಖೆ ಶಿರಸ್ತೇದಾರ್ ಶ್ರೀನಿವಾಸ್, ಖರೀದಿ ಕೇಂದ್ರದ ಅಧಿಕಾರಿ ವೆಂಕಟೇಶ್, ಎಪಿಎಂಸಿ ಕಾರ್ಯದರ್ಶಿ ಎಂ.ಧರ್ಮಣ್ಣ ಸೇರಿದಂತೆ ರೈತರು ಅಧಿಕಾರಿಗಳು ಇದ್ದರು.
ಕಡೂರು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿರುವ ರಾಗಿ ಖರೀದಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು.