ಆರೋಗ್ಯಕರ ಪರಿಸರ ನಿರ್ಮಿಸುವ ಉದ್ದೇಶದಿಂದ ಲಕ್ಷ ವೃಕ್ಷ ಸಂಕಲ್ಪ

KannadaprabhaNewsNetwork |  
Published : Aug 19, 2026, 02:45 AM IST
ಜಮಖಂಡಿ ನಗರದ ಸಜ್ಜಿ ಹನುಮಾನ ದೇವಸ್ಥಾನಬಳಿ ಲಕ್ಷ ವೃಕ್ಷ ಅಭಿಯಾನಕ್ಕೆ ಶಾಸಕ ಜಗದೀಶ ಗುಡಗುಂಟಿ ಚಾಲನೆ ನೀಡಿದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿಪರಿಸರ ಸಂರಕ್ಷಣೆ, ಹಸಿರು ವೃದ್ಧಿ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ನಿರ್ಮಿಸುವ ಉದ್ದೇಶದಿಂದ ಶಾಸಕ ಜಗದೀಶ ಗುಡಗುಂಟಿ ಅವರ ಪರಿವಾರ ಹಾಗೂ ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡಿರುವ ಲಕ್ಷ ವೃಕ್ಷ ಅಭಿಯಾನಕ್ಕೆ ಸೋಮವಾರ ನಗರದ ಸಜ್ಜಿ ಹನುಮಾನ ದೇವಸ್ಥಾನ ಬಳಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪರಿಸರ ಸಂರಕ್ಷಣೆ, ಹಸಿರು ವೃದ್ಧಿ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ನಿರ್ಮಿಸುವ ಉದ್ದೇಶದಿಂದ ಶಾಸಕ ಜಗದೀಶ ಗುಡಗುಂಟಿ ಅವರ ಪರಿವಾರ ಹಾಗೂ ಅಭಿಮಾನಿಗಳ ವತಿಯಿಂದ ಹಮ್ಮಿಕೊಂಡಿರುವ ಲಕ್ಷ ವೃಕ್ಷ ಅಭಿಯಾನಕ್ಕೆ ಸೋಮವಾರ ನಗರದ ಸಜ್ಜಿ ಹನುಮಾನ ದೇವಸ್ಥಾನ ಬಳಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.

ಬಳಿಕ ಮಾತನಾಡಿದ ಶಾಸಕ ಜಗದೀಶ ಗುಡಗುಂಟಿ, ನನ್ನ ಗಿಡ-ನನ್ನ ಉಸಿರು, ಹಸಿರಿನಿಂದಲೇ ಮಳೆ-ಬೆಳೆ–ಬದುಕು ಎಂಬ ಆಶಯದೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ಪಕ್ಷ, ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಕ್ಷೇತ್ರದ ಸಮಸ್ತ ಜನರ ಸಹಭಾಗಿತ್ವದಲ್ಲಿ ನಡೆಯುವ ಪರಿಸರ ಸಂರಕ್ಷಣೆಯ ಜನಾಂದೋಲನವಾಗಿದೆ ಎಂದರು.

ಕ್ಷೇತ್ರವನ್ನು ಹಸಿರುಮಯಗೊಳಿಸುವ ಗುರಿಯೊಂದಿಗೆ ಹಂತ ಹಂತವಾಗಿ ಲಕ್ಷ ವೃಕ್ಷಗಳನ್ನು ನೆಡಲಾಗುವುದು. ನಗರ ಪ್ರದೇಶ ಸೇರಿದಂತೆ ಕಡಪಟ್ಟಿ, ಹುನ್ನೂರ ವಿವಿಧ ಪ್ರದೇಶಗಳಲ್ಲಿ ಸುಮಾರು 50 ಸಾವಿರ ಗಿಡಗಳನ್ನು ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಂತ ಹಂತವಾಗಿ ಉಳಿದ 50 ಸಾವಿರ ಗಿಡಗಳನ್ನು ನೆಡುವದು ಹಾಗೂ ಪೊಷಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಗಿಡ ನೆಡುವುದಷ್ಟೇ ಅಲ್ಲದೆ, ಅವುಗಳನ್ನು 2 ವರ್ಷಗಳ ಕಾಲ ನಿರಂತರ ಪೋಷಣೆ ಮತ್ತು ಸಂರಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಗಿಡಗಳಿಗೆ ನೀರುಣಿಸಲು ನಾಲ್ಕು ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಗಿಡಕ್ಕೆ ನಾಲ್ಕು ದಿನಕ್ಕೊಮ್ಮೆ ಸುಮಾರು 10 ಲೀಟರ್ ನೀರುಣಿಸುವ ವ್ಯವಸ್ಥೆ ಮಾಡಲಾಗಿದೆ. ಗಿಡಗಳಿಗೆ ಬಿದಿರಿನ ಗಾರ್ಡ್‌ಗಳನ್ನು ಅಳವಡಿಸಿ ಜಾನುವಾರುಗಳಿಂದ ರಕ್ಷಣೆ ಕಲ್ಪಿಸಲಾಗುವುದು ಎಂದು ವಿವರಿಸಿದರು.

ಮನೆಗಳ ಮುಂದೆ, ಕಚೇರಿಗಳು, ಶಾಲೆ-ಕಾಲೇಜುಗಳು, ವಿವಿಧ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ಯಾನಗಳಲ್ಲಿ ಗಿಡಗಳನ್ನು ನೆಡಲು ಆಸಕ್ತರು ಸ್ಥಳ ಒದಗಿಸಿ ತಮ್ಮ ಹೆಸರು ನೋಂದಾಯಿಸಿದರೆ, ಅಭಿಯಾನದ ತಂಡವೇ ಸ್ಥಳಕ್ಕೆ ತೆರಳಿ ಗುಣಮಟ್ಟದ ಮಣ್ಣು, ಗೊಬ್ಬರ ಹಾಗೂ ನೀರಿನ ವ್ಯವಸ್ಥೆ ಮಾಡಿ ಗಿಡ ನೆಡಲಿದೆ ಎಂದರು.

ಗಿಡಮರಗಳು ಪ್ರಾಣವಾಯುವಿನ ಬ್ಯಾಂಕ್‌ಗಳಿದ್ದಂತೆ. ಅವುಗಳನ್ನು ಮಕ್ಕಳಂತೆ ಪೋಷಿಸಿ, ಹಿರಿಯರಂತೆ ಗೌರವಿಸಿ, ದೇವರಂತೆ ಪೂಜಿಸಬೇಕು. ಮನುಕುಲದ ಉಳಿವಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಜಗದೀಶ ಗುಡಗುಂಟಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಓಲೆಮಠದ ಆನಂದ ದೇವರು, ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮೀಜಿ, ಕೊಣ್ಣೂರ ಹೊರಗಿನ ಮಠದ ವಿಶ್ವಪ್ರಭು ಶಿವಾಚಾರ್ಯ ಮಹಾಸ್ವಾಮೀಜಿ, ಬ್ರಹ್ಮಕುಮಾರಿ ಆಶ್ರಮದ ಮೀರಾ ಅಕ್ಕ, ತಹಸೀಲ್ದಾರ ಅನಿಲ ಬಡಿಗೇರ, ಮಾಜಿ ಶಾಸಕ, ಶ್ರೀಕಾಂತ ಕುಲಕರ್ಣಿ, ಜಿ.ಎಸ್‌. ನ್ಯಾಮಗೌಡ ಮಹಾದೇವ ಇಟ್ಟಿ, ಮಲ್ಲಿಕಾರ್ಜುನ ಬಡಿಗೇರ, ವಿರೂಪಾಕ್ಷಯ್ಯ ಗುಡಗುಂಟಿ, ವಿಶ್ವನಾಥ ಶಾಸ್ತ್ರಿ, ನಾಗಪ್ಪ ಸನದಿ, ದೇವಲ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇಂಜಿನಿಯರ್‌ಗಳು, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹಾಗೂ ವಿವಿಧ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲ್ಲೆಗೆ ಖಂಡನೆ: ಶಿಕಾರಿಪುರ ಬಂದ್ ಬಾಗಶಃ
ಫ್ಲೆಕ್ಸ್, ಬ್ಯಾನರ್ ಮುದ್ರಿಸಿಕೊಡುವಾಗ ಎಚ್ಚರವಹಿಸಿ: ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್