ಕಡೆಯ ಆಷಾಢ ಶುಕ್ರವಾರ- ಚಾಮುಂಡಿಬೆಟ್ಟದಲ್ಲಿ ಭಕ್ತಸಾಗರ

KannadaprabhaNewsNetwork |  
Published : Jul 19, 2025, 01:00 AM IST
3 | Kannada Prabha

ಸಾರಾಂಶ

ಕಡೆಯ ಆಷಾಢ ಶುಕ್ರವಾರವಾದ್ದರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

----ಕನ್ನಡಪ್ರಭ ವಾರ್ತೆ ಮೈಸೂರು

ಆಷಾಢ ಮಾಸದ ಕಡೆಯ ಶುಕ್ರವಾರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಲಕ್ಷಾಂತರ ಭಕ್ತರು ಚಾಮುಂಡೇಶ್ವರಿಯ ದರ್ಶನ ಪಡೆದು ಪಾವನರಾದರು.ಮಂಜು, ಮಳೆಯನ್ನೂ ಲೆಕ್ಕಿಸದೆ ಮುಂಜಾನೆಯಿಂದಲೇ ವಿವಿಧೆಡೆಗಳಿಂದ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಭಕ್ತರು ನೂಕುನುಗ್ಗಲಿಲ್ಲದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದರ್ಶನ ಪಡೆದರು. ದೇವಸ್ಥಾನದ ಹೊರಗೆ ಹಿಮ ಮಳೆ ಸುರಿಯುತ್ತಿದ್ದರೆ, ದೇವಸ್ಥಾನದ ಒಳಗೆ, ಸರತಿ ಸಾಲಿನಲ್ಲಿ ಜಯಘೋಷಗಳು ಮೊಳಗುತ್ತಿದ್ದವು. ಯಾವುದೇ ಗಲಾಟೆ ಗೊಂದಲಗಳಿಗೆ ಆಸ್ಪದ ಕೊಡದೆ ಸಾವಧಾನವಾಗಿ ದೇವಸ್ಥಾನಕ್ಕೆ ತೆರಳಿ ಚಾಮುಂಡೇಶ್ವರಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.ಕಡೆಯ ಆಷಾಢ ಶುಕ್ರವಾರವಾದ್ದರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುಂಜಾನೆ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾದವು. ದೇವಿಗೆ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.5.30 ರಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಮಧ್ಯೆ ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30 ರಿಂದ 7 ರವರೆಗೆ ಮತ್ತೊಮ್ಮೆ ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ 10 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದೇವಿಗೆ ಸಿಂಹವಾಹಿನಿ ಅಲಂಕಾರತಾಯಿ ಚಾಮುಂಡೇಶ್ವರಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ವಿವಿಧ ಬಣ್ಣಗಳ ಸೇವಂತಿಗೆ, ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಅಲಂಕೃತಗೊಂಡಿತ್ತು. ದೇವಾಲಯದ ಪ್ರವೇಶದ್ವಾರ, ಹೊರಾವರಣವೂ ವಿಶೇಷವಾಗಿ ಸಿಂಗಾರಗೊಂಡಿತ್ತು. ಸಿಂಹವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯ ದರ್ಶನ ಪಡೆದು ಹೊರಬರುತ್ತಿದ್ದ ಭಕ್ತರಲ್ಲಿ ದನ್ಯತಾಭಾವ ಮೂಡಿತ್ತು.ಚಾಮುಂಡಿಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ಹಲವರು ಕೆಎಸ್ಆರ್ ಟಿಸಿ ಬಸ್‌ ಗಳಲ್ಲಿ ಬಂದರೆ ಇನ್ನು ಕೆಲವರು ಮೆಟ್ಟಿಲುಗಳು ಮೂಲಕ ಬೆಟ್ಟಕ್ಕೆ ಆಗಮಿಸಿದರು. ಚಾಮುಂಡಿಬೆಟ್ಟದ ಪಾದದಿಂದ ಪ್ರತಿ ಮೆಟ್ಟಿಲಿಗೂ ಅರಿಶಿಣ ಕುಂಕುಮ ಹೂಗಳನ್ನಿಟ್ಟು, ಕರ್ಪೂರ ಹಚ್ಚಿ ಭಕ್ತಿ ಭಾವದಿಂದ ಮೆಟ್ಟಿಲು ಹತ್ತಿ ತಮ್ಮ ಹರಕೆ ತೀರಿಸಿದರು. ಭಕ್ತರಿಗೆ ಅರಣ್ಯ ಇಲಾಖೆಯ ಜಾಗದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರ ಭೇಟಿಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಂಬ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಎಂಎಲ್ಸಿ ಸೂರಜ್ ರೇವಣ್ಣ, ಭವಾನಿ ರೇವಣ್ಣ, ಸಿಎಂ ಪತ್ನಿ ಪಾರ್ವತಿ, ಸೊಸೆ ಸ್ಮಿತಾ ರಾಕೇಶ್ ಸೇರಿದಂತೆ ಅನೇಕ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.----ಬಾಕ್ಸ್... ವಿವಿಧೆಡೆ ಪ್ರಸಾದ ವಿತರಣೆಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಸ್ತೆ, ವೃತ್ತಗಳಲ್ಲಿ ಚಾಮುಂಡೇಶ್ವರಿ ಭಾವಚಿತ್ರವಿರಿಸಿ, ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.ನಾರಾಯಣಶಾಸ್ತ್ರಿ ರಸ್ತೆ, ಅಗ್ರಹಾರ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಚಾಮರಾಜ ಜೋಡಿ ರಸ್ತೆ, ಎಂ.ಜಿ. ರಸ್ತೆ, ಕೆ.ಜಿ. ಕೊಪ್ಪಲು, ಒಂಟಿಕೊಪ್ಪಲು, ಕುವೆಂಪುನಗರ, ರಾಮಕೃಷ್ಣನಗರ, ವಿಜಯನಗರ ಸೇರಿದಂತೆ ನಗರದೆಲ್ಲೆಡೆ ಹಲವೆಡೆ ಪ್ರಸಾದ ವಿತರಣೆ ಮಾಡಲಾಯಿತು. ಸಾರ್ವಜನಿಕರು ಸರತಿ ಸಾಲಿನಲ್ಲಿ ಪ್ರಸಾದ ಸ್ವೀಕರಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?