ಎಸ್.ನಾಗಭೂಷಣ ಕನ್ನಡಪ್ರಭವಾರ್ತೆ, ತುರುವೇಕೆರೆ
ಜನರಿಗೆ ಅನುಕೂಲವಾಗಲಿ ಎಂದು ಜಾರಿ ಮಾಡಿರುವ ಜೆಜೆಎಂ ಕಾಮಗಾರಿಯಲ್ಲಾಗಿರುವ ಯಡವಟ್ಟಿನಿಂದಾಗಿ ಕಾಮಗಾರಿ ಕಳಪೆಯಾಗಿರುವುದಲ್ಲದೇ ಕಾಮಗಾರಿ ಪೂರ್ಣ ಮಾಡದೇ ಅರ್ಧಕ್ಕೆ ನಿಲ್ಲಿಸಿದ್ದು ತಾಲೂಕಿನ ಡಿ.ಕಲ್ಕರೆ ಗ್ರಾಮದ ಜನರು ದಿನ ನಿತ್ಯ ಹಿಡಿಶಾಪ ಹಾಕುವಂತಾಗಿದೆ.ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಯೋಜನೆ ಸರಿಯಾಗಿ ಅನುಷ್ಠಾನವಾಗಿದ್ದರೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ತಾಳಕೆರೆ ಗ್ರಾಪಂ ವ್ಯಾಪ್ತಿಯ ಡಿ. ಕಲ್ಕರೆ ಗ್ರಾಮದ ಜನರಿಗೆ ನಿತ್ಯ ಶುದ್ಧ ಕುಡಿಯುವ ನೀರು ಸಿಗುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಹಣದ ದಾಹದಿಂದಾಗಿ ಅತ್ತ ನೀರು ಇಲ್ಲ ಇತ್ತ ಓಡಾಡಲು ರಸ್ತೆಯೂ ಇಲ್ಲದಂತಾಗಿದೆ. ಯೋಜನೆ ಅನುಷ್ಠಾನ ಮಾಡುವಲ್ಲಿ ಎಡವಿರುವ ಅಧಿಕಾರಿಗಳು ಗುತ್ತಿಗೆದಾರರು ಹಾಳು ಮಾಡಿರುವ ರಸ್ತೆಯನ್ನು ಸರಿ ಪಡಿಸುವ ಗೋಜಿಗೆ ಹೋಗದೇ ಇರುವುದಿರಂದ ಈ ಹಿಂದೆ ಮಸಾಲೆ ಜಯರಾಮ್ ಅವಧಿಯಲ್ಲಿ ಆಗಿದ್ದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಇದರಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಹೋಗಬೇಕಾದರೆ ಒಂದು ಬಿದ್ದು ಹೋಗಬೇಕು ಇಲ್ಲವೇ ಕಷ್ಟವಿದ್ದವರನ್ನೇ ಕೈ ಬಿಡಬೇಕಾದ ಸ್ಥಿತಿ ಬಂದಿದೆ.
ಕೋಟ್ಯಂತರ ನೀರಿನಲ್ಲಿ ಹೋಮಜಲಜೀವನ್ ಯೋಜನೆಗೆ ಕೇಂದ್ರ ಸರ್ಕಾರ ಸುಮಾರು ೧.೧೪ ಕೋಟಿ ವಿನಿಯೋಗಿಸಿದೆ. ಆದರೆ ಈಗ ಜಲ ಜೀವನ್ ಯೋಜನೆಯಡಿ ಮನೆ ಮನೆಗೆ ನೀರು ಸಂಪರ್ಕ ನೀಡುವ ಸಲುವಾಗಿ ಪೈಪುಗಳನ್ನು ಅಳವಡಿಸುವುದಕ್ಕಾಗಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸಿಮೆಂಟ್ ರಸ್ತೆಯ ಮಧ್ಯದಲ್ಲೇ ಗುಂಡಿ ತೆಗೆದು ಪೈಪ್ ಗಳನ್ನು ಹೂಳಲಾಗಿದೆ. ಆದರೆ ತೆಗೆದಿರುವ ಗುಂಡಿಗಳನ್ನು ಕ್ರಮಬದ್ದವಾಗಿ ಮುಚ್ಚಿಲ್ಲ. ಕಾರಣ ಜನರು ಓಡಾಡಲು ತೊಂದರೆಯಾಗಿದೆ. ಗ್ರಾಮದಲ್ಲಿರುವ ಹಲವಾರು ಗುಂಡಿಗಳಲ್ಲಿ ಗಿಡಗಂಟೆಗಳು ಬೆಳೆದಿವೆ. ನಡೆದಾಡುವುದು ಸಹ ಕಷ್ಟವಾಗಿದೆ. ಇನ್ನು ದ್ವಿಚಕ್ರ ವಾಹನಗಳಲ್ಲಿ ಓಡಾಡುವವರ ಸ್ಥಿತಿಯಂತೂ ಭಯಾನಕ. ಗ್ರಾಮದ ಅದೆಷ್ಟೋ ಮಂದಿ ದ್ವಿಚಕ್ರವಾಹದಲ್ಲಿ ಬಿದ್ದು ತಮ್ಮ ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ. ಅಲ್ಲದೇ ತಮ್ಮ ವಾಹನಗಳಿಗೂ ಹಾನಿಯಾಗಿದೆ. ಕೆಲವು ರಸ್ತೆಗಳಲ್ಲಿ ಪೈಪುಗಳನ್ನು ಹುಗಿಯುವ ಸಂದರ್ಭದಲ್ಲಿ ಜೆಸಿಬಿ ಬಳಸಿರುವ ವೇಳೆ ಇಡೀ ರಸ್ತೆಯೇ ಕಿತ್ತು ಬಂದಿದೆ. ಇತ್ತ ಜಲ ಜೀವನ್ ಯೋಜನೆಯ ಕಾಮಗಾರಿಯೂ ಆಗಿಲ್ಲ. ಅಲ್ಲದೇ ಕಿತ್ತು ಹಾಕಿರುವ ರಸ್ತೆಯನ್ನು ದುರಸ್ಥಿ ಪಡಿಸುವ ಗೋಜಿಗೂ ಯಾರೂ ಹೋಗಿಲ್ಲ.
ಗುಣಮಟ್ಟವಿಲ್ಲದ ಕಾಮಗಾರಿಜಲಜೀವನ್ ಯೋಜನೆಯ ಕಾಮಗಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳಾಗಲೀ, ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಾಗಲೀ ಜನರ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಿಲ್ಲ. ಗ್ರಾಮದಲ್ಲಿ ಸುಮಾರು ೩೫೦ ಕ್ಕೂ ಹೆಚ್ಚು ಮನೆಗಳಿವೆ. ಇವುಗಳಲ್ಲಿ ಕೆಲವು ಮನೆಗಳಿಗೆ ಮಾತ್ರ ಜಲ ಜೀವನ್ ಯೋಜನೆಯಡಿ ನಲ್ಲಿ ಸಂಪರ್ಕವನ್ನು ನೀಡಲಾಗಿದೆ. ಅಲ್ಲಿಯೂ ಗುಣಮಟ್ಟದ ಪರಿಕರಗಳನ್ನು ಹಾಕದೇ ವಂಚಿಸಲಾಗಿದೆ. ಕಳಪೆ ಗುಣಮಟ್ಟ ಕಾಮಗಾರಿ ಆಗಿರುವ ಬಗ್ಗೆ ಗ್ರಾಮದ ಗ್ರಾಮ ಪಂಚಾಯ್ತಿ ಸದಸ್ಯರೋರ್ವರು ತಕರಾರು ತೆಗೆದಿದ್ದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣಗೊಳಿಸದೇ ಅರ್ಧಕ್ಕೇ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ತಾಳಕೆರೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ವಿನೋದ್ ಇನ್ನು ಕೆಲವೇ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಗ್ರಾಮಸ್ಥರೊಡನೆ ಮಾತುಕತೆ ನಡೆಸಿ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.ಕೋಟ್ಬೇಜವಾಬ್ದಾರಿಯಿಂದ ದಾರಿ ಮಧ್ಯೆಯೇ ಗುಂಡಿ ತೋಡಿರುವುದರಿಂದ ರಸ್ತೆಯೂ ಹಾಳಾಗಿದೆ. ಅಲ್ಲದೇ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ತಮ್ಮ ಗ್ರಾಮದಲ್ಲಿ ಆಗಿರುವ ತೊಂದರೆಯನ್ನು ನಿವಾರಿಸದಿದ್ದಲ್ಲಿ ತಾಲೂಕು ಪಂಚಾಯಿತಿ ಮುಂಭಾಗವೇ ಪ್ರತಿಭಟನೆ ಹಮ್ಮಿಕೊಳ್ಳುವುದು. - ಮೃತ್ಯುಂಜಯ, ಗ್ರಾಮಸ್ಥ.
ಕೋಟ್ಗ್ರಾಮದ ಹಲವಾರು ರಸ್ತೆಗಳ ಉದ್ದಕ್ಕೂ ಗುಂಡಿ ತೋಡಲಾಗಿದೆ. ಗುಂಡಿಗಳನ್ನು ಮುಚ್ಚದಿರುವ ಹಿನ್ನೆಲೆಯಲ್ಲಿ ಜನರು ಗುಂಡಿಯೊಳಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಸಾಮಾನ್ಯವಾಗಿದೆ. ದ್ವಿಚಕ್ರವಾಹನದಲ್ಲಿ ತೆರಳುವಾಗ ಬಿದ್ದು ಜೀವಕ್ಕೆ ಅನಾಹುತವಾದರೆ ಯಾರು ಹೊಣೆ. - ಬಾಬಣ್ಣ ಎಂದು ಗುಂಡಿಯಲ್ಲಿ ಬಿದ್ದು ಗಾಯಗೊಂಡವರು.