ಕಡೇ ಕಾರ್ತಿಕ ಮಾಸ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ

KannadaprabhaNewsNetwork | Published : Nov 26, 2024 12:48 AM

ಸಾರಾಂಶ

ಕಡೇ ಕಾರ್ತಿಕ ಮಾಸದ ಅಂಗವಾಗಿ ಮದ್ದೂರು ತಾಲೂಕಿನ ವೈದ್ಯನಾಥಪುರದ ಪುರಾಣ ಪ್ರಸಿದ್ಧ ಶ್ರೀವೈದ್ಯನಾಥೇಶ್ವರ ದೇವಾಲಯ, ಮದ್ದೂರಿನ ಕೋಟೆ ಶ್ರೀಕಾಶಿ ವಿಶ್ವೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು.

ಕನ್ನಡಪ್ರಭ ವಾರ್ತೆ ಮದ್ದೂರು

ಕಡೇ ಕಾರ್ತಿಕ ಮಾಸದ ಅಂಗವಾಗಿ ತಾಲೂಕಿನ ವೈದ್ಯನಾಥಪುರದ ಪುರಾಣ ಪ್ರಸಿದ್ಧ ಶ್ರೀವೈದ್ಯನಾಥೇಶ್ವರ ದೇವಾಲಯ, ಮದ್ದೂರಿನ ಕೋಟೆ ಶ್ರೀಕಾಶಿ ವಿಶ್ವೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ಜರುಗಿದವು.

ಶ್ರೀವೈದ್ಯನಾಥೇಶ್ವರ ದೇವಾಲಯದಲ್ಲಿ ಮುಂಜಾನೆ ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ಕ್ಷೀರಭಿಷೇಕ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರದೊಂದಿಗೆ ಪೂಜಾ ಕಾರ್ಯಗಳು ನಡೆದವು.

ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ ಒಳಗೊಂಡಂತೆ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಶಿಂಶಾ ನದಿಯಲ್ಲಿ ಪುಣ್ಯಸ್ಥಾನ ಮಾಡಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.

ದೇಗುಲಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ವೈದ್ಯನಾಥಪುರದ ಶ್ರೀ ಪ್ರಸನ್ನ ಪಾರ್ವತಂಬ ವೈದ್ಯನಾಥೇಶ್ವರ ಟ್ರಸ್ಟ್ ದಾನಿಗಳ ನೆರವಿನಿಂದ ಅನ್ನಸಂತರ್ಪಣೆ ನಡೆಯಿತು.

ಮದ್ದೂರಿನ ಕೋಟೆ ಬೀದಿಯ ಶ್ರೀಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಸಾಮೂಹಿಕ ರುದ್ರ ಹೋಮ, ರುದ್ರಾಭಿಷೇಕ, ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು. ಸಂಜೆ ದೀಪಾಲಂಕಾರ ಮಹಾಮಂಗಳಾರತಿ ಯೊಂದಿಗೆ ಪ್ರಸಾದ ವಿತರಣೆ ಮಾಡಲಾಯಿತು.

ತಾಲೂಕಿನ ಚಿಕ್ಕ ಅಂಕನಹಳ್ಳಿ ಶ್ರೀ ನಂದಿ ಬಸವೇಶ್ವರ, ಚಿಕ್ಕಅರಸಿನಕೆರೆ ಗ್ರಾಮದ ಕಾಲಭೈರವೇಶ್ವರ ದೇವಾಲಯ ಸೇರಿದಂತೆ ವಿವಿಧ ಶಿವನ ದೇವಾಲಯದಲ್ಲಿ ಕಡೇ ಕಾರ್ತಿಕ ಸೋಮವಾರದ ವಿಶೇಷ ಪೂಜಾ ಕಾರ್ಯ ದೊಂದಿಗೆ ದೀಪೋತ್ಸವ ನಡೆಯಿತು.

ಶ್ರೀಮಂಚಮ್ಮ ದೇವಿ ದೇಗುಲದಲ್ಲಿ ಗಂಗೆ ಪೂಜೆ

ಭಾರತೀನಗರ:

ಅಣ್ಣೂರು ಗ್ರಾಮದ ಶ್ರೀಮಂಚಮ್ಮ ದೇವಿ ದೇವಸ್ಥಾನದದಲ್ಲಿ ವಾದ್ಯಗೋಷ್ಠಿಯೊಂದಿಗೆ ಗಂಗೆ ಪೂಜೆ ಜರುಗಿತು.

ದೇವಸ್ಥಾನದ ಕರಗ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಜೀರ್ಣೋದ್ಧಾರದ ಅಂಗವಾಗಿ ಸೋಮವಾರ ಸಂಜೆ ಹೊರ ವಲಯದಲ್ಲಿರುವ ಶ್ರೀಬೊಮ್ಮಲಿಂಗೇಶ್ವರ ದೇಸ್ಥಾನದಿಂದ ಹೂ-ಹೊಂಬಾಳೆಯೊಂದಿಗೆ ಗಂಗೆ ಪೂಜೆಯಲ್ಲಿ ಮಡಿ ಸಮೇತ ಶ್ರೀಮಂಚಮ್ಮ ದೇವಸ್ಥಾನದ ವರೆಗೆ ನೂರಾರು ಮಹಿಳೆಯರು ಗಂಗೆ ನೀರನ್ನು ವೀರಗಾಸೆಯೊಂದಿಗೆ ತರಲಾಯಿತು.

ಶ್ರೀಬೊಮ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಕಳಸ ಹೊತ್ತ ಮಹಿಳೆಯರು ಕುಂಭದೊಂದಿಗೆ ಶ್ರೀ ಬೋರಪ್ಪ ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿದರು. ನಂತರ ವೀರಗಾಸೆದೊಂದಿಗೆ ಶ್ರೀಮಂಚಮ್ಮ ದೇವಸ್ಥಾನಕ್ಕೆ ಸಂಜೆ ಆಗಮಿಸಿದರು. ಈ ವೇಳೆ ಗ್ರಾಮದ ತೆಂಡೆ ಯಜಮಾನರು, ಯಜಮಾನರುಗಳು ಉಪಸ್ಥಿತರಿದ್ದರು.

Share this article