ಸುಬ್ರಮಣಿ ಆರ್ ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅಮ್ಮತ್ತಿಯಲ್ಲಿ ರೋಬಸ್ಟಾ ಅಡ್ವೆಂಚರ್ ಮತ್ತು ಸ್ಪೋರ್ಟ್ಸ್ ಆಯೋಜಿಸಿದ ಬ್ಲೂಬ್ಯಾಂಡ್ ಸ್ಪೋರ್ಟ್ಸ್ ಎಫ್‌ಎಂಎಸ್‌ಸಿ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್ 2024 ರ್ಯಾಲಿಯಲ್ಲಿ ಜನರ ನಿರೀಕ್ಷೆಯಂತೆ ಗೌರವ್ ಗಿಲ್ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾರೆ.ಅರ್ಜುನ ಪ್ರಶಸ್ತಿ ವಿಜೇತ, ಏಳು ಬಾರಿ ರಾಷ್ಟ್ರೀಯ ಚಾಂಪಿಯನ್ನಾಗಿರುವ ಗೌರವ್ ಗಿಲ್ ಈ ಬಾರಿ ಕೂಡ ರಾಷ್ಟ್ರೀಯ ರೊಬಸ್ಟಾ ಚಾಂಪಿಯನ್ ಆಗುವುದಾಗಿ ಜನರು ನೀರಿಕ್ಷಿಸಿದ್ದರು. ಅದರಂತೆ ಗೌರವ್ ಗಿಲ್ ಮತ್ತು ಸಹ ಚಾಲಕ ಅನಿರುದ್ದ್ ರಂಗ್ನೇಕರ್ 5 ನೇ ಆವೃತ್ತಿಯ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಅರ್ಕಾ ಮೋಟಾರ್ ಸ್ಪೋರ್ಟ್ಸ್‌ನ ಬೆಂಗಳೂರಿನ ಕರ್ಣ ಕಡೂರ್ (ಮೂಸಾ ಶೆರಿಫ್) ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಮಹಾರಾಷ್ಟ್ರದ ಆದಿತ್ಯ ಠಾರ್ (ವೀರೇಂದ್ರ ಕಶ್ಯಪ್) ತೃತೀಯ ಸ್ಥಾನ ಪಡೆದರು.ಅಮ್ಮತ್ತಿ ಹಾಗೂ ಪಾಲಿಬೆಟ್ಟ ವಲಯದ ಟಾಟಾ ಕಾಫಿ ಸಂಸ್ಥೆಯ ಆನಂದಪುರ ಹೊಸಳ್ಳಿ ಮತ್ತು ಮಟಪರಂಬು ಮಾರ್ಗೊಲ್ಲಿ ತಣ್ಣೀರುಹಳ್ಳ ತೋಟದ ಹಸಿರ ಪರಿಸರದ ನಡುವಿನ ಮಣ್ಣಿನ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ದುರ್ಗಮ ಹಾಗೂ ಕಠಿಣ ರಸ್ತೆಗಳಲ್ಲಿ 3 ದಿನಗಳ ಕಾಲ ನಡೆದ ರ್ಯಾಲಿಯಲ್ಲಿ 61 ರ್ಯಾಲಿಸ್ಟ್ ಗಳು ಪಾಲ್ಗೊಂಡಿದ್ದರು. ರಾಜ್ಯ ಮತ್ತು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ಕಾರ್ಮಿಕರು, ಸ್ಥಳೀಯ ನಿವಾಸಿಗಳು, ಕಾರುಗಳು ತೆರಳುವ ಮಾರ್ಗದುದ್ದಕ್ಕೂ ಜಮಾಯಿಸಿ ಸ್ಪರ್ಧಿ ಗಳನ್ನು ಹುರಿದುಂಬಿಸಿ, ಶಿಳ್ಳೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಟಾಟಾ ಸಂಸ್ಥೆಯ ಜನರಲ್ ಮ್ಯಾನೇಜರ್ ರಾಜೀವ್ ಕೆ.ಜಿ., ಡೆಪ್ಯೂಟಿ ಜನರಲ್ ಮ್ಯಾನೇಜರ್ ದಿಲೀಪ್ ಕುಮಾರ್ ಸಿಂಗ್, ಅರಣ್ಯ ಸಂಶೋಧನಾ ಮ್ಯಾನೇಜರ್ ಬಿ.ಜಿ.ಪೊನ್ನಪ್ಪ, ರೋಬಸ್ಟಾ ಅನ್ವೆಂಚರ್ ಆಂಡ್ ಸ್ಪೋರ್ಟ್ಸ್ ಅಕಾಡೆಮಿ ನಿರ್ದೇಶಕ ಕುಂಞಂಡ ಮಹೇಶ್ ಮಾಚಯ್ಯ ಇದ್ದರು.ಇತರೆ ಪ್ರದೇಶಗಳಿಗೆ ಹೋಲಿಸಿದರೆ ಕೊಡಗಿನ ರಸ್ತೆಗಳು ಕಠಿಣವಾಗಿವೆ. ನಮ್ಮ ಒಟ್ಟಾರೆ ಟೀಂ ಪ್ರಯತ್ನ ನಮಗೆ ಗೆಲುವು ತಂದಿದೆ. ಮುಂದೆ ತುಮಕೂರುವಿನಲ್ಲಿ ನಡೆಯುವ ಸೀಸನ್ 6 ರ್ಯಾಲಿಗೆ ತಯಾರಾಗಿದ್ದೇವೆ ಎಂದು ಚಾಂಪಿಯನ್ ಗೌರವ್ ಗಿಲ್ ಹೇಳಿದರು.