ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಎದುರು ಸೇರಿದ ಕಾರ್ಯಕರ್ತರು ತಮ್ಮ ಬೆರಳನ್ನು ಕೊಯ್ದು ರಕ್ತ ತೆಗೆದು ಬ್ಯಾನರ್‌ಗೆ ಸವರಿ ಧರಣಿ ನಡೆಸಿದರು. ಕಳೆದ ನಾಲ್ಕು ವರ್ಷದಿಂದ ಬೂದನೂರು ಗ್ರಾಪಂನಲ್ಲಿ ಆಡಳಿತ ಮಂಡಳಿ ಅಧಿಕಾರಿಗಳು ನಿಯಮಬಾಹಿರವಾಗಿ ಅಕ್ರಮ, ಭ್ರಷ್ಟಾಚಾರ ನಡೆಸಿದ್ದು, ಇದರ ಬಗ್ಗೆ ಜೂ.೧೦ರಂದು ತಮ್ಮ ಕಚೇರಿ ಎದುರು ಪ್ರತಿಭಟನೆ ನಡೆಸಿ ೧೫ ವಿಷಯಗಳ ಕುರಿತು ಮನವಿ ಸಲ್ಲಿಸಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾವು ನೇಮಿಸಿದ್ದ ಸಮಿತಿ ಯಾವುದೇ ವಿಚಾರಣೆ ನಡೆಸಿಲ್ಲದ ಕಾರಣ ಅವ್ಯವಹಾರ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕ ಸಹಭಾಗಿತ್ವ, ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬೂದನೂರು ಗ್ರಾಮ ಪಂಚಾಯ್ತಿ ವಿಫಲವಾಗಿದೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಆಶ್ರಯ ಬಡಾವಣೆಗೆ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರ ನಾಮಕರಣ ಮಾಡಲು ಫಲಾನುಭವಿಗಳ ಪರವಾಗಿ ಮನವಿ ನೀಡಿದರೆ, ಪ್ರಭಾವ, ಅಮಿಷಗಳಿಗೆ ಒಳಗಾಗಿರುವ ಸದಸ್ಯರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಹೆಸರನ್ನು ನಾಮಕರಣ ಮಾಡಿ ಬಳಿಕ ಮತ್ತೆ ಪರಿಷ್ಕರಿಸುವ ಭರವಸೆ ನೀಡಿ ಮೂರು ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂ ಅಧ್ಯಕ್ಷೆ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಸೇರಿ ಬೂದನೂರು ಸ.ನಂ.೩೮೨, ೩೮೨/೭ ರ ಭೂಮಿಯ ಆರ್‌ಟಿಎಸ್ ಇಂಡೀಕರಣವಾಗಿಲ್ಲದಿದ್ದರೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಕ್ಕೆ ಖಾಸಗಿ ವ್ಯಕ್ತಿಯ ನಿವೇಶನದ ಸಂಖ್ಯೆ ಬಳಸಿ ಕ್ರಮ ಸಂಖ್ಯೆಯ ಇ-ಸ್ವತ್ತು ತೆಗೆದು ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ. ಹುಕ್ಕಾಬಾರ್‌ಗೆ ಅನಧಿಕೃತವಾಗಿ, ಅನ್ಯಕ್ರಾಂತವಾಗಿಲ್ಲದ ಹಾಗೂ ಸ್ವತ್ತಿನ ನೋಂದಣಿಗೆ ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ಕಿಡಿಕಾರಿದರು.
ಆಹೋರಾತ್ರಿ ಧರಣಿ ಆರಂಭ:
ಪ್ರತಿಭಟನೆಯಲ್ಲಿ ಎಚ್.ಡಿ.ಜಯರಾಂ, ಸವಿತಾ, ವಿಜಯಾ, ಮಂಗಳಾ, ಶಿವರಾಜು, ಕಾರ್ತಿಕ್ ಭಾಗವಹಿಸಿದ್ದರು.