ಮಿಮ್ಸ್ ಮಹಿಳಾ ಭದ್ರತಾ ಸಿಬ್ಬಂದಿ ಆತ್ಮಹತ್ಯೆ ಯತ್ನ

KannadaprabhaNewsNetwork |  
Published : Jun 12, 2025, 01:47 AM IST

ಸಾರಾಂಶ

ಹಣ ಕೊಟ್ಟು ಒಂದು ವರ್ಷವಾದರೂ ಪ್ರಸನ್ನಕುಮಾರ ಯಾರೊಬ್ಬರಿಗೂ ಡಿ- ಗ್ರೂಪ್ ಹುದ್ದೆಯನ್ನು ಕೊಡಿಸಲಿಲ್ಲ. ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ದರ್ಪ ಪ್ರದರ್ಶಿಸಿದ ಪ್ರಸನ್ನಕುಮಾರ, ಈಗ ನೀವಿರುವ ಸೆಕ್ಯುರಿಟಿ ಕೆಲಸದಿಂದಲೂ ತೆಗೆಸಿಹಾಕುತ್ತೇನೆ. ನೀವು ನನಗೆ ಹಣ ಕೊಟ್ಟಿರುವುದಕ್ಕೆ ಏನು ಸಾಕ್ಷಿ ಇದೆ ಎಂದು ಪ್ರಶ್ನಿಸಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶ್ರುತಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಿಮ್ಸ್ ಆಸ್ಪತ್ರೆಯಲ್ಲಿ ಡಿ- ಗ್ರೂಪ್ ಕೆಲಸ ಕೊಡಿಸುವುದಾಗಿ ಕಾರ್ಪೋರೇಟ್ ಸರ್ವೀಸ್ ಏಜೆನ್ಸಿಯ ಸೆಕ್ಯುರಿಟಿಯೊಬ್ಬನ ಮಾತನ್ನು ನಂಬಿ ಹಣ ಕೊಟ್ಟು ವಂಚನೆಗೊಳಗಾದ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮಿಮ್ಸ್ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ಶ್ರುತಿ (೩೫) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಇವರು ನಗರದ ಜಯಲಕ್ಷ್ಮೀ ಚಿತ್ರಮಂದಿರ ಎದುರಿನ ಮಾರುತಿನಗರ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಕಾರ್ಪೋರೇಟ್ ಸರ್ವೀಸ್ ಏಜೆನ್ಸಿಯ ಸೆಕ್ಯುರಿಟಿ ಪ್ರಸನ್ನಕುಮಾರ್ ಎಂಬಾತನೇ ಡಿ- ಗ್ರೂಪ್ ಕೆಲಸ ಕೊಡಿಸುವುದಾಗಿ ಶ್ರುತಿ, ಜ್ಯೋತಿ, ದೀಪ್ತಿ ಎಂಬ ಮೂವರು ಮಹಿಳೆಯರಿಗೆ ವಂಚಿಸಿರುವ ಆರೋಪಿಯಾಗಿದ್ದಾನೆ.

ಹೇಗಾಯ್ತು?:

ಮಿಮ್ಸ್ ಭದ್ರತಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರುತಿ, ಜ್ಯೋತಿ, ದೀಪ್ತಿ ಅವರಿಗೆ ಸೆಕ್ಯುರಿಟಿ ವಿಭಾಗದ ಪ್ರಸನ್ನಕುಮಾರ ಪರಿಚಯವಾಗಿದ್ದನು. ಒಂದೂವರೆ ವರ್ಷದ ಹಿಂದೆ ಪ್ರಸನ್ನಕುಮಾರ ನನಗೆ ಮಿಮ್ಸ್ ನಿರ್ದೇಶಕರು, ಸೂಪರಿಂಟೆಂಡೆಂಟ್ ಚೆನ್ನಾಗಿ ಗೊತ್ತು. ಎಫ್‌ಡಿಎ ಚನ್ನೇಗೌಡ ಕೂಡ ಪರಿಚಯದವರು. ನಾನು ಅವರ ಬಳಿ ಮಾತನಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂವರಿಗೂ ಡಿ- ಗ್ರೂಪ್ ಕೆಲಸ ಕೊಡಿಸುವುದಾಗಿ ಹೇಳಿದನು. ಆದರೂ ಈತನ ಮಾತನ್ನು ಆರಂಭದಲ್ಲಿ ಯಾರೂ ನಂಬಿರಲಿಲ್ಲ.

ಪ್ರಸನ್ನಕುಮಾರ ಪದೇ ಪದೇ ಕೆಲಸ ಕೊಡಿಸುವ ವಿಚಾರವನ್ನು ಮೂವರು ಮಹಿಳೆಯರ ಮುಂದೆ ಪ್ರಸ್ತಾಪ ಮಾಡುತ್ತಲೇ ಇದ್ದನು. ಖಚಿತವಾಗಿ ಡಿ- ಗ್ರೂಪ್ ಕೆಲಸ ಕೊಡಿಸುವುದಾಗಿ ನಂಬಿಸಿದನು. ಅದರಂತೆ ೨೧ ಮಾರ್ಚ್ ೨೦೨೪ರಂದು ಮಧ್ಯಾಹ್ನ ೩ ಗಂಟೆ ಸಮಯದಲ್ಲಿ ಮಿಮ್ಸ್ ಆಸ್ಪತ್ರೆಯ ಲ್ಯಾಬ್ ಬಳಿ ಶ್ರುತಿ ಅವರು ಪ್ರಸನ್ನಕುಮಾರನಿಗೆ ೬೫ ಸಾವಿರ ರು., ಜ್ಯೋತಿ ೭೦ ಸಾವಿರ ರು. ನಗದು ಹಣವನ್ನು ಕೊಟ್ಟಿದ್ದರು. ೨೬ ಡಿಸೆಂಬರ್ ೨೦೨೪ರಂದು ಮಧ್ಯಾಹ್ನ ೩ ಗಂಟೆಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ದೀಪ್ತಿ ಕೊಟ್ಟಿದ್ದ ೪೦ ಸಾವಿರ ರು. ಹಣವನ್ನು ಪ್ರಸನ್ನಕುಮಾರ್‌ಗೆ ಕೊಟ್ಟಿದ್ದರು.

ಹಣ ಕೊಟ್ಟು ಒಂದು ವರ್ಷವಾದರೂ ಪ್ರಸನ್ನಕುಮಾರ ಯಾರೊಬ್ಬರಿಗೂ ಡಿ- ಗ್ರೂಪ್ ಹುದ್ದೆಯನ್ನು ಕೊಡಿಸಲಿಲ್ಲ. ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ದರ್ಪ ಪ್ರದರ್ಶಿಸಿದ ಪ್ರಸನ್ನಕುಮಾರ, ಈಗ ನೀವಿರುವ ಸೆಕ್ಯುರಿಟಿ ಕೆಲಸದಿಂದಲೂ ತೆಗೆಸಿಹಾಕುತ್ತೇನೆ. ನೀವು ನನಗೆ ಹಣ ಕೊಟ್ಟಿರುವುದಕ್ಕೆ ಏನು ಸಾಕ್ಷಿ ಇದೆ ಎಂದು ಪ್ರಶ್ನಿಸಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶ್ರುತಿ ತಿಳಿಸಿದ್ದಾರೆ.

ಇದರಿಂದ ಮಾನಸಿಕವಾಗಿ ನೊಂದಿದ್ದ ಶ್ರುತಿ ಮನೆಯಲ್ಲಿದ್ದ ಯಾವುದೋ ೩೦ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ಶ್ರುತಿಯನ್ನು ಆಕೆಯ ಕುಟುಂಬದವರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದರು. ಇದೀಗ ಚೇತರಿಸಿಕೊಳ್ಳುತ್ತಿರುವ ಶ್ರುತಿ ತಮಗೆ ವಂಚನೆ ಮಾಡಿರುವ ಪ್ರಸನ್ನಕುಮಾರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ