ಕನ್ನಡಪ್ರಭ ವಾರ್ತೆ ಮಂಡ್ಯ
ಮಿಮ್ಸ್ ಆಸ್ಪತ್ರೆಗೆ ಕೋವಿಡ್ ವೇಳೆ ಹೊಂಬಾಳೆ ಗ್ರೂಪ್ಸ್‌ನವರು ಸುಮಾರು ಒಂದೂವರೆ ಕೋಟಿ ರು. ಖರ್ಚು ಮಾಡಿ ಎರಡು ವಾರ್ಡ್‌ಗಳಿಗೆ ಐಸಿಯು ಘಟಕ ನಿರ್ಮಿಸಿ ದಾನವಾಗಿ ಕೊಟ್ಟಿದ್ದರು. ಕೋವಿಡ್ ವೇಳೆ ಶ್ವಾಸಕೋಶ, ಉಸಿರಾಟ ಮತ್ತು ಹೃದಯ ಸಂಬಂಧಿ ರೋಗಿಗಳಿಗಾಗಿ ಈ ವಾರ್ಡ್‌ಗಳು ಬಳಕೆಯಾಗುತ್ತಿತ್ತು.
ಆದರೆ, ದಾನವಾಗಿ ಬಂದ ಕೋಟ್ಯಂತರ ರು. ಮೌಲ್ಯದ ಉಪಕರಣಗಳೂ ಸಹ ಧೂಳು ಹಿಡಿಯುತ್ತಿವೆ. ವಿಧಿ ಇಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದರಿಂದ ಸಾಮಾನ್ಯ ಜನರು ಖಾಸಗಿ ಆಸ್ಪತ್ರೆಗೆ ಲಕ್ಷ ಲಕ್ಷ ಹಣ ಸುರಿಯುವಂತಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.ಹೊಂಬಾಳೆ ಗ್ರೂಪ್‌ನ ವಿಜಯ್ ಕಿರಗಂದೂರು ಅವರು 1.50 ಕೋಟಿ ರು. ವೆಚ್ಚದಲ್ಲಿ ವೆಂಟಿಲೇಟರ್‌ವುಳ್ಳ ಎರಡು ಐಸಿಯು ಘಟಕ ನೀಡಿದ್ದರು. ಎರಡು ವಾರ್ಡ್‌ಗಳಲ್ಲಿ 40 ಬೆಡ್ ಅಳವಡಿಸಲಾಗಿದೆ. ಇಷ್ಟು ದಿನಗಳ ಕಾಲ ಎರಡೂ ಐಸಿಯು ಘಟಕವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ಈ ಪೈಕಿ ಒಂದು ವಾರ್ಡ್‌ಗೆ ಬೀಜ ಹಾಕಿ ನರ್ಸ್‌ಗಳ ಸಮಸ್ಯೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.
ಒಂದು ಬೆಡ್‌ನಲ್ಲಿ ಇಬ್ಬರು ರೋಗಿಗಳನ್ನು ಮಲಗಿಸಿ ಚಿಕಿತ್ಸೆ ಕೊಡುವ ಬದಲು ಇರುವ ವಾರ್ಡ್‌ಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಮಿಮ್ಸ್ ಆಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸದೆ ಇರುವುದರಿಂದ ರೋಗಿಗಳು ಪರದಾಡುವಂತಾಗಿದೆ.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್)ಯಲ್ಲಿ ಹಲವು ಸಮಸ್ಯೆಗಳು ಇರುವುದು ನನ್ನ ಗಮನಕ್ಕೂ ಬಂದಿದೆ. ಜಿಲ್ಲಾಧಿಕಾರಿಗಳ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿಸಲಾಗಿದೆ. ಮಿಮ್ಸ್‌ಗೆ ಮೇಜರ್ ಸರ್ಜರಿ ಆಗಬೇಕಿದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಶೀಘ್ರ ಸಭೆ ನಡೆಸಿ ಕ್ರಮ ವಹಿಸುತ್ತೇನೆ.
- ಪಿ.ರವಿಕುಮಾರ್, ಶಾಸಕರು
ಎರಡು ಐಸಿಯುಗಳಲ್ಲಿ ಒಂದರಲ್ಲಿ ರೋಗಿಗಳನ್ನು ದಾಖಲು ಮಾಡುತ್ತಿದ್ದೆವು. ಮತ್ತೊಂದಕ್ಕೆ ಸಿಬ್ಬಂದಿಗಳ ಕೊರತೆಯಿಂದ ತೆಗೆಯುತ್ತಿಲ್ಲ. ಯಾವುದೇ ರೋಗಿಯನ್ನೂ ಹೊರಗೆ ಕಳುಹಿಸುತ್ತಿಲ್ಲ. ರೋಗಿಗಳಿಗೆ ತೊಂದರೆ ತಪ್ಪಿಸಲು ಇಂದಿನಿಂದಲೇ ತೆರೆಯಲಾಗಿದೆ.
- ಡಾ.ದರ್ಶನ್, ಸ್ಥಾನಿಕ ವೈದ್ಯಾಧಿಕಾರಿ, ಮಿಮ್ಸ್