ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ತಿರಸ್ಕಾರ ಹಿಂದೆ ಬಿಜೆಪಿ : ಕಾಂಗ್ರೆಸ್‌ ಆರೋಪ

KannadaprabhaNewsNetwork | Updated : Feb 10 2025, 01:24 PM IST

ಸಾರಾಂಶ

ಮೈಕ್ರೋ ಫೈನಾನ್ಸ್ ಮೂಲಕ ಬಡವರ ಜೀವ ತೆಗೆಯುವವರ ವಿರುದ್ಧ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿರುವುದಕ್ಕೆ ಬಿಜೆಪಿಯ ಒತ್ತಡ ಕಾರಣ ಎಂದು ಆಡಳಿತಾರೂಢ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆಪಾದಿಸಿದ್ದಾರೆ.

 ಬೆಂಗಳೂರು : ಮೈಕ್ರೋ ಫೈನಾನ್ಸ್ ಮೂಲಕ ಬಡವರ ಜೀವ ತೆಗೆಯುವವರ ವಿರುದ್ಧ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಿರಸ್ಕರಿಸಿರುವುದಕ್ಕೆ ಬಿಜೆಪಿಯ ಒತ್ತಡ ಕಾರಣ ಎಂದು ಆಡಳಿತಾರೂಢ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆಪಾದಿಸಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಬಿಜೆಪಿಯವರಿಗೆ ದಮ್ಮು, ತಾಕತ್ತು, ಬಡವರ ಪರ ಕಾಳಜಿಯಿದ್ದರೆ ರಾಜ್ಯಪಾಲರಿಂದ ಸುಗ್ರೀವಾಜ್ಞೆಗೆ ಸಹಿ ಹಾಕಿಸಲಿ ಎಂದೂ ಅವರು ಆಗ್ರಹಿಸಿದ್ದಾರೆ.

ರಾಜ್ಯ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಉಗ್ರಪ್ಪ ಅವರು, ಸಾಲವನ್ನು ಅಕ್ರಮವಾಗಿ ವಸೂಲಿ ಮಾಡುತ್ತಿರುವವರ ಕಿರುಕುಳದಿಂದ ಹಲವರು ಮೃತಪಟ್ಟಿದ್ದಾರೆ. ಇದನ್ನು ತಡೆಯಲು ಬಡವರ ಜೀವ ತೆಗೆಯುವವರ ವಿರುದ್ಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತಂದಿದೆ. ಆದರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿಗರ ಒತ್ತಡಗಳಿಗೆ ಮಣಿದಿರುವ ರಾಜ್ಯಪಾಲರು ಜನಪರ ಸುಗ್ರೀವಾಜ್ಞೆ ವಾಪಸು ಕಳುಹಿಸಿದ್ದಾರೆ. ಇದು ಸಂವಿಧಾನ ಹಾಗೂ ಮನುಷ್ಯತ್ವ ವಿರೋಧಿ ನಡೆ ಎಂದು ದೂರಿದರು.

ಎಚ್.ಎಂ.ರೇವಣ್ಣ ಮಾತನಾಡಿ, ಕೂಡಲೇ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಬೇಕು. ಇಲ್ಲವಾದರೆ ಸಾವು-ನೋವುಗಳಿಗೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯೇ ಕಾರಣವಾಗುತ್ತದೆ. ರೈತರು, ಬಡವರ ಪರ ಬದ್ಧತೆಯಿದ್ದರೆ ಬಿಜೆಪಿಯವರು ರಾಜ್ಯಪಾಲರಿಗೆ ಸಲಹೆ ನೀಡಲಿ ಎಂದು ಆಗ್ರಹಿಸಿದರು.

ಸರ್ಕಾರ ಕಾನೂನು ಬದ್ಧವಾಗಿ ನೀಡಿರುವ ಸಾಲ ವಸೂಲಾತಿಗೆ ಸುಗ್ರೀವಾಜ್ಞೆಯಲ್ಲಿ ಆಕ್ಷೇಪ ಇಲ್ಲ. ಅನಧಿಕೃತವಾಗಿ ಕೊಡುವ ಸಾಲ ಗರಿಷ್ಠ ಎಂದರೆ 2 ಲಕ್ಷದವರೆಗೆ ಸಾಲ ಕೊಡಬಹುದು. ಆದರೆ ಕಾನೂನು ಬಾಹಿರವಾಗಿ 3-4 ಲಕ್ಷ ರು.ವರೆಗೆ ಸಾಲ ಕೊಡುತ್ತಿದ್ದಾರೆ. ಒಂದು ಲಕ್ಷ ಕೋಟಿ ರು.ಗೂ ಹೆಚ್ಚು ಹಣ ವಹಿವಾಟು ನಡೆದಿದೆ. ಸಾವಿರಾರು ಅನಧಿಕೃತ ಸಂಸ್ಥೆಗಳು ಹುಟ್ಟಿಕೊಂಡು ಬೇಕಾಬಿಟ್ಟಿ ಬಡ್ಡಿ ಸುಲಿಗೆ ಮಾಡುತ್ತಿವೆ. ಕೊಡಲಾಗದ ಪರಿಸ್ಥಿತಿಯಲ್ಲಿ ಆಸ್ತಿ ಕಬಳಿಸುತ್ತಿದ್ದಾರೆ. ಬಡವರ ಆಸ್ತಿ ರಕ್ಷಣೆ ರಾಜ್ಯಪಾಲರ ಹೊಣೆ ಅಲ್ಲವೇ ಎಂದು ಪ್ರಶ್ನಿಸಿದರು.ಕಾನೂನು ಮೀರಿ ಸುಗ್ರೀವಾಜ್ಞೆ ತಂದಿದ್ದಕ್ಕೆ ವಾಪಸ್‌: ಬಿಜೆಪಿ

ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ‘ಸಿಲ್ಲಿ’  ಕಾರಣಕ್ಕಾಗಿ ವಾಪಸ್ ಕಳುಹಿಸಿದ್ದಾರೆ ಎಂಬ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಸಿಲ್ಲಿ ಪೀಪಲ್ ಸ್ಟಾರ್ಟ್ ಸಿಲ್ಲಿ ಥಿಂಗ್ಸ್ ಓನ್ಲಿ’ (ಸಣ್ಣತನದ ವ್ಯಕ್ತಿಗಳು ಸಣ್ಣತನದ ಕೆಲಸ ಶುರುಮಾಡೋದು) ಎಂದು ಟೀಕಿಸಿದ್ದಾರೆ.ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ನಡೆಸುವವರಿಗೆ ಅಥವಾ ಮೈಕ್ರೋ ಫೈನಾನ್ಸ್‌ಗೂ ರಾಜ್ಯಪಾಲರಿಗೂ ಯಾವ ಸಂಬಂಧ ಇರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಉಗ್ರಪ್ಪ ಅವರು ಸಿಲ್ಲಿಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದರು.ಮೈಕ್ರೋ ಫೈನಾನ್ಸ್‌ನವರು ಕಿರುಕುಳ ನೀಡಿದರೆ 10 ವರ್ಷ ಶಿಕ್ಷೆ ವಿಧಿಸಬಹುದು ಎಂದು ಸುಗ್ರೀವಾಜ್ಞೆಯಲ್ಲಿದೆ

ಇಂತಹ ತೀರ್ಮಾನ ಕೈಗೊಳ್ಳಬೇಕಾದರೆ ಇದು ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ ಆಗಬೇಕು. ಸದನದಲ್ಲಿ ಚರ್ಚಿಸದೇ ಮನಸ್ಸಿಗೆ ಬಂದಂತೆ ನಿಯಮ ರೂಪಿಸುವುದು ಕಾನೂನುಬಾಹಿರವೂ, ಅಸಾಂವಿಧಾನಿಕವೂ ಆಗಿದೆ. ಅದಕ್ಕೇ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್‌ ಕಳುಹಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.ದೌರ್ಜನ್ಯ ನಡೆಸುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾವು ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ.

 ಆದರೆ ಇಲ್ಲಿಯವರೆಗೂ ಕ್ರಮ ಕೈಗೊಳ್ಳಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದರು.ದರ ಹೆಚ್ಚಿಸಲು ಬ್ಯುಸಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಯಾವುದರ ದರ ಹೆಚ್ಚಳ ಮಾಡಬೇಕು ಎಂದು ಚಿಂತಿಸುವುದರಲ್ಲಿ ಬ್ಯುಸಿಯಾಗಿದೆ. ಹಾಲಿನ ದರ, ಸ್ಟಾಂಪ್ ಡ್ಯೂಟಿ, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು ಆಯಿತು. ಇದೀಗ ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಳ ಮಾಡಿದ್ದಾರೆ. ಬೆಲೆ ಹೆಚ್ಚಳ ಮಾಡುವ ಮೂಲಕ ಜನರ ತಲೆ ಬೋಳಿಸಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.

Share this article