ಹೊಸದುರ್ಗ: ಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಮನಸ್ಸು ಹಾಗೂ ಸಮಾಜ ಎರಡು ಶುದ್ಧಿಯಾಗುತ್ತದೆ ಎಂದು ಮಾಜಿ ಸಚಿವೆ, ಸಾಹಿತಿ ಬಿ.ಟಿ.ಲಲಿತಾ ನಾಯಕ್ ಹೇಳಿದರು.
ಜಾತಿ, ಮತ, ಧರ್ಮ ಎಲ್ಲವನ್ನೂ ಬಿಟ್ಟು ನಾವೆಲ್ಲ ಒಂದೇ ಎಂದು ಕೊಂಡಾಗ ಮಾತ್ರ ಸಾಹಿತ್ಯದ ಕಡೆ ನಮ್ಮ ಒಲವು ಹೋಗುತ್ತದೆ. ಮನುಷ್ಯನಿಗೆ ಹಲವಾರು ಮಾನಸಿಕ ರೋಗಗಳಿವೆ. ಮತ್ತೊಬ್ಬರ ಬೆಳವಣಿಗೆ ಅಭಿವೃದ್ಧಿ ಸಹಿಸಲು ಆಗದಂತಹ ರೋಗ ಎಲ್ಲರಲ್ಲೂ ಇರುತ್ತದೆ. ಇಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ಮೆಟ್ಟಿ ನಿಂತು ಛಲದಿಂದ ಮುಂದೆ ಸಾಗಬೇಕು ಎಂದರು.
ಬಂಡಾಯ ಸಾಹಿತಿಗಳು ಎಂದರೆ ಮೂಢನಂಬಿಕೆಗಳನ್ನು ವಿರೋಧಿಸುವವರು. ಕೇವಲ ಉಪದೇಶ ಕೊಡುವುದು ಅಷ್ಟೇ ಅಲ್ಲ ನಮ್ಮ ಬದುಕೇ ಇತರರಿಗೆ ಸಂದೇಶವಾಗಬೇಕು. ನಾವು ಏನನ್ನು ಹೇಳುತ್ತೇವೋ ಅದನ್ನು ಮಾಡಬೇಕು ಅದನ್ನೇ ಪಾಲಿಸಬೇಕು. ಉತ್ತಮ ಹವ್ಯಾಸಗಳು ಮನುಷ್ಯನ ಬದುಕನ್ನು ಸಾರ್ಥಕಗೊಳಿಸುತ್ತವೆ ಎಂದು ಹೇಳಿದರು.ಕನಕ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಎಚ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಪ್ಪಅವ್ವ ಅಕ್ಷರ ಪಬ್ಲಿಕೇಶನ್ ಮುಖ್ಯಸ್ಥ ಮಾಚೇನಹಳ್ಳಿ ರಾಮಕೃಷ್ಣ, ಸಾಹಿತಿ ಮಂಜುನಾಥ ಮಾಗೋದಿ, ಆರ್.ಪಿ.ಕಾಲೇಜು ಪ್ರಾಂಶುಪಾಲ ರಮಣ ಪ್ರಸಾದ್, ಸಂಪಾದಕಿ ಬಿ.ವೈ.ವಾಣಿಶ್ರೀ, ಡಾ.ಸಂಜಯ್, ಸಮಾಜ ಸೇವಕ ತುಂಬಿನಕೆರೆ ಬಸವರಾಜ್ ಸೇರಿದಂತೆ ಮತ್ತಿತರರಿದ್ದರು.