ಪ್ರಾರ್ಥನೆಯಿಂದ ಮನಸ್ಸು ನಿರಾಳ: ಸ್ವರ್ಣವಲ್ಲೀ ಸ್ವಾಮೀಜಿ

KannadaprabhaNewsNetwork | Published : Aug 7, 2024 1:09 AM

ಸಾರಾಂಶ

ಪ್ರಾರ್ಥನೆಯನ್ನು ದೀರ್ಘಕಾಲದವರೆಗೆ ಮಾಡಬೇಕು. ಭಗವಂತನು ನಾವು ಕೇಳಿದ್ದನ್ನು ಕೊಡಲು ದೀರ್ಘ ಕಾಲದ ಪ್ರಾರ್ಥನೆ ಅಗತ್ಯ. ಹಿರಿಯರು ಹೇಳಿದ ಹಾಗೆ ಕಾಲ ಬರಬೇಕು ಎನ್ನುವ ಹಾಗೆ ಎಲ್ಲದಕ್ಕೂ ಕಾಲ ಬರಬೇಕು.

ಶಿರಸಿ: ಅತ್ಯಂತ ಶ್ರದ್ಧೆಯಿಂದ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದರೆ ಮನಸ್ಸಿನ ಭಾರ ಕಮ್ಮಿ ಆಗುತ್ತದೆ. ಮನಸ್ಸು ನಿರಾಳವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಶ್ರೀಮಠದಲ್ಲಿ ತಮ್ಮ ೩೪ನೇ ಹಾಗೂ ಕಿರಿಯ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಮಠದ ಶಿಷ್ಯರಾದ ಶಿರಸಿ ಸೀಮೆಯ ತೆರಕನಹಳ್ಳಿ ಹಾಗೂ ತುಂಡುಗ್ರಾಮ ಭಾಗಿಯ ಸಮಸ್ತ ಶಿಷ್ಯ ಭಕ್ತರು ಶ್ರದ್ಧಾ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿ, ಉಭಯ ಶ್ರೀಗಳ ಆಶೀರ್ವಾದವನ್ನು ಪಡೆದರು.ಪ್ರಾರ್ಥನೆಯನ್ನು ದೀರ್ಘಕಾಲದವರೆಗೆ ಮಾಡಬೇಕು. ಭಗವಂತನು ನಾವು ಕೇಳಿದ್ದನ್ನು ಕೊಡಲು ದೀರ್ಘ ಕಾಲದ ಪ್ರಾರ್ಥನೆ ಅಗತ್ಯ. ಹಿರಿಯರು ಹೇಳಿದ ಹಾಗೆ ಕಾಲ ಬರಬೇಕು ಎನ್ನುವ ಹಾಗೆ ಎಲ್ಲದಕ್ಕೂ ಕಾಲ ಬರಬೇಕು. ದೇವರಲ್ಲಿ ಪ್ರಾರ್ಥನೆಯೂ ಕೂಡ ಹಾಗೆ. ದೇವರಿಗೆ ಭಕ್ತನ ಪ್ರಾರ್ಥನೆಯನ್ನು ಈಡೇರಿಸಬೇಕು ಎಂಬ ಮನಸ್ಸು ಬರಬೇಕು ಎಂದು ಪ್ರಾರ್ಥನೆಯ ಮಹತ್ವದ ಕುರಿತು ತಿಳಿಸಿದ ಶ್ರೀಗಳು, ಅನೇಕ ದಿವಸಗಳು ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆಯ ಮರ್ಮವನ್ನು ಅರಿತುಕೊಂಡರೆ ಪ್ರಾರ್ಥನೆಯನ್ನು ಯಾಕೆ ಮಾಡಬೇಕು ಎಂಬುದು ತಿಳಿಯುತ್ತದೆ ಎಂದರು.ನಮ್ಮ ಮನಸ್ಸನ್ನು ಸ್ಥಿರಗೊಳಿಸುವುದಕ್ಕೋಸ್ಕರ. ಮನಸ್ಸನ್ನು ಸ್ಥಿರವಾಗಿ ಇಟ್ಟು ಕೊಳ್ಳದೇ ಪ್ರಾರ್ಥನೆಯನ್ನು ಮಾಡಿದರೆ ಆ ಪ್ರಾರ್ಥನೆ ಫಲಿಸುವುದಿಲ್ಲ. ನಮ್ಮ ಮನಸ್ಸು ದೇವರಲ್ಲಿ ಸ್ಥಿರವಾಗಿರದೇ ಬೇರೆಲ್ಲೋ ಇರುತ್ತದೆ. ಕೆಲವೊಮ್ಮೆ ದೇವರಲ್ಲಿ ಸಂಶಯದ ಭಾವಗಳು ಬರುತ್ತಿರುತ್ತವೆ. ಈ ರೀತಿಯಾದ ಪ್ರಾರ್ಥನೆಯನ್ನು ದೇವರು ಸ್ವೀಕರಿಸುವುದಿಲ್ಲ. ಭಗವಂತನ ಸಾಮ್ರಾಜ್ಯದಲ್ಲಿ ವಿಶಿಷ್ಟವಾದ ಒಂದು ನಿಯಮವಿದೆ. ಯಾವನು ಮನಸ್ಸು ಕೊಟ್ಟು ಮಾಡುತ್ತಾನೋ ಅವನ ಪ್ರಾರ್ಥನೆ ಬೇಗ ಹೋಗಿ ತಲುಪುತ್ತದೆ ಎಂದರು.

ಸೀಮೆಯ ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಈ ಸಂದರ್ಭದಲ್ಲಿ ಸೀಮೆಯ ಪ್ರಮುಖರು ಗಣಪತಿ ಹೆಗಡೆ ಹೊಸಬಾಳೆ, ಗೋಪಾಲಕೃಷ್ಣ ಹೆಗಡೆ ಮೆಣಸಿಕೇರಿ ಇದ್ದರು. ಆರ್.ಎಸ್. ಹೆಗಡೆ ಬೈರುಂಭೆ ನಿರ್ವಹಿಸಿದರು.

Share this article