ಗಾಣಿಗರು ಸಂಘಟಿತರಾಗುವ ಅಗತ್ಯವಿದೆ

KannadaprabhaNewsNetwork | Published : Oct 20, 2024 1:56 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಗಾಣಿಗ ಸಮುದಾಯದವರು ಹೃದಯ ವೈಶಾಲ್ಯತೆ ಹೊಂದಿದ್ದು, ನಮ್ಮ ಸಮಾಜ ಬಾಂಧವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಂಘಟಿತರಾಗುವುದು ಅಗತ್ಯವಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಗಾಣಿಗ ಸಮುದಾಯದವರು ಹೃದಯ ವೈಶಾಲ್ಯತೆ ಹೊಂದಿದ್ದು, ನಮ್ಮ ಸಮಾಜ ಬಾಂಧವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಂಘಟಿತರಾಗುವುದು ಅಗತ್ಯವಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ಪಟ್ಟಣದ ಯಲ್ಲಾಲಿಂಗೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ತಾಲೂಕು ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಗಾಣಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕ ಹಾಗೂ ಸಮಾಜದ ಮಹಿಳಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತಿಹಾಸ ಓದಿದವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಸಮಾಜದ ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಸಮಾಜದ ಸಭೆಗಳು ನಿರಂತರವಾಗಿ ನಡೆಯುವಂತಾಗಬೇಕು. ಸಂಕ್ರಮಣದ ನಂತರ ಎಲ್ಲರೂ ಒಂದಾಗಿ ಬೃಹತ್ ಪ್ರಮಾಣದಲ್ಲಿ ಸಮಾಜದ ಸಮಾವೇಶವನ್ನು ಹಮ್ಮಿಕೊಳ್ಳೋಣ ಎಂದು ಕರೆ ನೀಡಿದರು.

ಮುಳವಾಡ ಏತ ನೀರಾವರಿ ಯೋಜನೆ, ಬಸವನಬಾಗೇವಾಡಿ ಬಸ್ ಡಿಪೋ, ಮಿನಿ ವಿಧಾನಸೌಧ ಸೇರಿ ಅನೇಕ ಅಭಿವೃದ್ಧಿ ಯೋಜನೆಗಳು ನನ್ನ ಅವಧಿಯಲ್ಲಿ ಆಗಿವೆ. ನನ್ನ ಅಧಿಕಾರವಧಿಯಲ್ಲಿ ಯಾವುದೇ ಸರ್ಕಾರಿ ನೌಕರರನ್ನು ಬಲಿಪಶು ಮಾಡಿಲ್ಲ. ನಾನು ಒಂದು ಗುಂಟೆ ಜಾಗವನ್ನು ನನ್ನ ಹೆಸರಿನಲ್ಲಿಯಾಗಲಿ, ಸಂಬಂಧಿಕರ ಹೆಸರಿನಲ್ಲಿಯಾಗಲಿ ಕೂಡಗಿ, ಮುಳವಾಡ ಸುತ್ತಮುತ್ತ ಮಾಡಿಕೊಂಡಿಲ್ಲ. ಈಗಿರುವ ಶಾಸಕ ಶಿವಾನಂದ ಪಾಟೀಲರು ಸರ್ಕಾರಿ ನೌಕರರನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವ ಮೂಲಕ ಅವರನ್ನು ಬಲಿಪಶು ಮಾಡುತ್ತಿದ್ದಾರೆ. ಬೇರೆ ಸಮಾಜದ ನೌಕರರ ಮೇಲೆ ವರ್ಗಾವಣೆ ಅಸ್ತ್ರ ಬಳಸುತ್ತಿದ್ದಾರೆ. ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ. ಅಧಿಕಾರದಲ್ಲಿದ್ದಾಗ ಎಲ್ಲ ಸಮಾಜದವರನ್ನು ಸಮಾನವಾಗಿ ಕಾಣುವ ಗುಣ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದರು.

ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ಗಾಣಿಗ ಸಮಾಜ ದೇಶಕ್ಕೆ ಮೋದಿಯಂತಹ ಶ್ರೇಷ್ಠ ರಾಜಕಾರಣಿಯನ್ನು ನೀಡುವ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಪ್ರತಿಯೊಬ್ಬ ಗಾಣಿಗ ಸಮಾಜ ಬಾಂಧವರು ಗಾಣಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದರು.

ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿದರು. ಶಿಕ್ಷಕ ಕಲ್ಲಪ್ಪ ಗಾಣಿಗೇರ ಉಪನ್ಯಾಸ ನೀಡಿದರು.

ತಾಲೂಕು ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ವಿವಿಧ ಸಂಘದ ಪದಾಧಿಕಾರಿಗಳಾದ ಎಸ್.ಎಂ.ಸಜ್ಜನ, ಚಂದ್ರಕಾಂತ ಡೋಣಗಿ, ಅರವಿಂದ ಸಜ್ಜನ, ಪರಶುರಾಮ ತುಪ್ಪದ, ಪುಷ್ಪಾ ತುಪ್ಪದ, ಶ್ರೀಶೈಲ ಪರಮಗೊಂಡ, ಎಸ್.ಎಂ.ಹಂಗರಗಿ, ಸುರೇಶ ಗೋಲಗೊಂಡ, ಎಸ್.ಎಂ.ಬಿಸ್ಟಗೊಂಡ, ಚಂದ್ರಪ್ಪ ಮುರನಾಳ ಇತರರು ಇದ್ದರು.ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಕಲ್ಲು ಸೊನ್ನದ ಪ್ರಾಸ್ತವಿಕವಾಗಿ ಮಾತನಾಡಿದರು. ಬಿ.ಎಸ್.ಚನ್ನಗೊಂಡ ಸ್ವಾಗತಿಸಿದರು. ವಿನೋದ ಸಜ್ಜನ ನಿರೂಪಿಸಿದರು. ಬಸವರಾಜ ಕೋಣಿನ ವಂದಿಸಿದರು.

ಕೋಟ್‌

ನನ್ನ ಅಧಿಕಾರವಧಿಯಲ್ಲಿ ಸರ್ಕಾರಿ ನೌಕರರನ್ನು ಬಲಿಪಶು ಮಾಡಿಲ್ಲ. ಈಗಿನ ಶಾಸಕ ಶಿವಾನಂದ ಪಾಟೀಲರು ಸರ್ಕಾರಿ ನೌಕರರನ್ನು ಬಲಿಪಶು ಮಾಡುತ್ತಿದ್ದಾರೆ. ಬೇರೆ ಸಮಾಜದ ನೌಕರರ ಮೇಲೆ ವರ್ಗಾವಣೆ ಅಸ್ತ್ರ ಬಳಸುತ್ತಿದ್ದಾರೆ. ರಾಜಕಾರಣದಲ್ಲಿ ಸೋಲು-ಗೆಲುವು ಸಾಮಾನ್ಯ. ಅಧಿಕಾರವಿದ್ದಾಗ ಎಲ್ಲ ಸಮಾಜದವರನ್ನು ಸಮಾನವಾಗಿ ಕಾಣುವ ಅಗತ್ಯವಿದೆ.

ಎಸ್.ಕೆ.ಬೆಳ್ಳುಬ್ಬಿ, ಮಾಜಿ ಸಚಿವ

Share this article