ಕುಷ್ಟಗಿ: ರಾಮದುರ್ಗದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಮಿನಿ ಬಸ್‌ವೊಂದು ಕುಷ್ಟಗಿ ಸಮೀಪದ ಮದಲಗಟ್ಟಿ ಕೆರೆಯ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಮಧ್ಯರಾತ್ರಿ ನಡೆದಿದೆ. ಬಸ್‌ನಲ್ಲಿದ್ದ 35 ಪ್ರಯಾಣಿಕರ ಪೈಕಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಗ್ರಾಮಸ್ಥರಿಂದ ರಕ್ಷಣೆ
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಮದಲಗಟ್ಟಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಮಕ್ಕಳು ಹಾಗೂ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಟ್ರ್ಯಾಕ್ಟರ್‌ಗಳ ಮೂಲಕ ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಬಳಿಕ ಅಗತ್ಯವಿದ್ದವರನ್ನು ಕೊಪ್ಪಳ ಹಾಗೂ ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಸಿಪಿಐ ವಿಶ್ವನಾಥ ಹಿರೇಗೌಡರ ಹಾಗೂ ಪಿಎಸ್ಐ ಹನುಮಂತಪ್ಪ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಯಾಣಿಕ ಹನುಮಂತಪ್ಪ ಅದ್ದೂರಿ ನೀಡಿದ ದೂರಿನ ಮೇರೆಗೆ ಚಾಲಕ ರಮೇಶ್ ಲಕ್ಷ್ಮಪ್ಪ ಆಯಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಪ್ಪಳ: ಸಾಲಬಾಧೆಯಿಂದ ಮನನೊಂದು ರೈತ ಮನೆಯ ಹಿಂದಿನ ಖಾಲಿ ಜಾಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಇಂದರಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ಗ್ರಾಮದ ನಿಂಗಪ್ಪ ಕುಡಲಗಿ (೩೭) ಮೃತರು. ಕೃಷಿ ಮಾಡಲು ನಿಂಗಪ್ಪ ಗ್ರಾಮಸ್ಥರಿಂದ ಕೈಗಡ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸುವ ಚಿಂತೆಯಿಂದ ಮನನೊಂದು ಶುಕ್ರವಾರ ಕಟ್ಟಿಗೆಯ ಕಂಬಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎಂದು ಮೃತರ ಪತ್ನಿ ಪ್ರಮೀಳಾ ಮುನಿರಾಬಾದ್ ಠಾಣೆಗೆ ಶನಿವಾರ ನೀಡಿದ ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.