ಮಳೆಗಾಲ ಬಂದಲ್ಲಿ ಕಲ್ಲಡ್ಕದಲ್ಲಿ ನಿರ್ಮಾಣವಾಗಲಿದೆ ಮಿನಿದ್ವೀಪಗಳು

KannadaprabhaNewsNetwork | Published : May 3, 2024 1:04 AM

ಸಾರಾಂಶ

ಕಲ್ಲಡ್ಕದಲ್ಲಿ ಜಿಲ್ಲೆಯಲ್ಲಿಯೇ ಅತ್ಯಂತ ಉದ್ದ ಎನ್ನಲಾದ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆ ಸಂಸ್ಥೆಯ ಅವೈಜ್ಞಾನಿಕ‌ ಕಾಮಗಾರಿಗಳಿಂದಾಗಿ ಇಲ್ಲಿನ ನಾಗರಿಕರು ಒಂದಲ್ಲ‌ ಒಂದು‌ ಬಗೆಯ ಸಂಕಟ ಎದುರಿಸುತ್ತಿದ್ದಾರೆ.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಂಟ್ವಾಳ ತಾಲೂಕಿನಲ್ಲಿರುವ ಮಳೆಗಾಲದ ನೆರೆಪೀಡಿತ ಸ್ಥಳಗಳಿಗೆ ಇತ್ತೀಚೆಗಿನ ವರ್ಷಗಳಲ್ಲಿ ಹೊಸ ಸೇರ್ಪಡೆ ಕಲ್ಲಡ್ಕ ಪೇಟೆ. ಈ ಅವಾಂತರಕ್ಕೆ ಕಾರಣವಾಗುತ್ತಿರುವುದು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆಯ‌ ಕಾಮಗಾರಿ.

ಕಲ್ಲಡ್ಕದಲ್ಲಿ ಜಿಲ್ಲೆಯಲ್ಲಿಯೇ ಅತ್ಯಂತ ಉದ್ದ ಎನ್ನಲಾದ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆ ಸಂಸ್ಥೆಯ ಅವೈಜ್ಞಾನಿಕ‌ ಕಾಮಗಾರಿಗಳಿಂದಾಗಿ ಇಲ್ಲಿನ ನಾಗರಿಕರು ಒಂದಲ್ಲ‌ ಒಂದು‌ ಬಗೆಯ ಸಂಕಟ ಎದುರಿಸುತ್ತಿದ್ದಾರೆ.

ಬೇಸಿಗೆಯ ದಿನಗಳಲ್ಲಿ ಧೂಳಿನ ಕಾಟ ಎದುರಿಸುವ ಕಲ್ಲಡ್ಕದ ಜನತೆ, ಮಳೆಗಾಲದಲ್ಲಿ ಕೆಸರು ಹಾಗೂ ಕೃತಕ ನೆರೆಯ ಸಮಸ್ಯೆ ಎದುರಿಸುತ್ತಿದ್ದಾರೆ.‌ ಸಮರ್ಪಕ ರೀತಿಯಲ್ಲಿ ನಡೆಯದ ಚರಂಡಿ ಕಾಮಗಾರಿ, ಎಲ್ಲೆಂದರಲ್ಲಿ ಅರ್ಧಕ್ಕೆ ನಿಂತಿರುವ ತಡೆಗೋಡೆ ಕಾಮಗಾರಿಗಳು ಭಯ ಹುಟ್ಟಿಸುತ್ತಿವೆ. ಎಲ್ಲೆಂದರಲ್ಲಿ ನೀರು‌ನಿಲ್ಲುವುದರಿಂದ ಅನೇಕ ಅಂಗಡಿ, ಮನೆಗಳಿಗೆ , ಕೃಷಿಭೂಮಿಗೆ ನೀರುನುಗ್ಗುವ ಘಟನೆಗಳು ಕಳೆದ ಎರಡು ಮೂರು ವರ್ಷಗಳಿಂದ ಕಲ್ಲಡ್ಕ ಪೇಟೆಯ ಆಸುಪಾಸಿನಲ್ಲಿ ನಡೆಯುತ್ತಿದ್ದು ಈ ವರ್ಷವೂ ಅದೇ ಆತಂಕ ಕಲ್ಲಡ್ಕದ ಜನತೆಗಿದೆ. ಪ್ರತಿಭಟನೆಯ ಮೂಲಕ ಎಚ್ಚರಿಕೆ...: ಮಳೆಗಾಲದ ಆತಂಕದ ದಿನಗಳ ಬಗ್ಗೆ ಕಲ್ಲಡ್ಕದ ಜನತೆ ನಿತ್ಯ ಚಿಂತೆಯಲ್ಲಿದ್ದು, ಮಂಗಳವಾರ ದಿನ ಏಕಾಏಕಿ ಪ್ರತಿಭಟನೆ ನಡೆಸುವ ಮೂಲಕ ಗುತ್ತಿಗೆ ಸಂಸ್ಥೆಗೆ ಬಿಸಿಮುಟ್ಟಿಸಿದ್ದಾರೆ.

ಸರ್ವೀಸ್ ರಸ್ತೆಯ ದುಸ್ಥಿತಿಯ ವಿರುದ್ಧ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಲ್ಲಡ್ಕದ ವರ್ತಕರು ಹಾಗೂ ಸಾರ್ವಜನಿಕರು ರಸ್ತೆಯನ್ನು ಡೋಸಿಂಗ್ ಮಾಡಿ ಡಾಮಾರು ಹಾಕಿಕೊಡುವಂತೆ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‌ಆರ್ ಕಂಪನಿಯ ಅಧಿಕಾರಿಗಳನ್ನು ಆಗ್ರಹಿಸಿದರು.

ರಸ್ತೆಯು ಏರು ತಗ್ಗಿನಿಂದ ಕೂಡಿರುವ ಪರಿಣಾಮ ವಾಹನ ಸಾಗುವುದಕ್ಕೆ ತೀರಾ ತೊಂದರೆಯಾಗುತ್ತಿದೆ. ಜತೆಗೆ ಧೂಳಿನಿಂದ ಜನರ ಆರೋಗ್ಯ ಕೆಡುತ್ತಿದ್ದು, ನೀರು ಹಾಯಿಸಲು ಹೇಳಿದರೆ ಡ್ರೈವರ್ ಇಲ್ಲ, ಟ್ಯಾಂಕರ್ ಇಲ್ಲ ಎಂಬ ಉತ್ತರ ನೀಡುತ್ತೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ ಹಲವು ವರ್ಷಗಳಿಂದ ಭೂಸ್ವಾಧೀನ ಪ್ರಕ್ರಿಯೆ, ಚರಂಡಿಗಳ ನಿರ್ಮಾಣ, ಸೇತುವೆ ಕಾಮಗಾರಿ, ತಡೆಗೋಡೆ ನಿರ್ಮಾಣ , ಮೇಲ್ಸೇತುವೆಗೆ ಪಿಲ್ಲರ್ ನಿರ್ಮಾಣದ ಕಾಮಗಾರಿ ಸಂದರ್ಭ ಕಳೆದ ಮಳೆಗಾಲದಲ್ಲಿ ಎದುರಾದ ವಿಚಾರಗಳನ್ನೂ ಕಲ್ಲಡ್ಕ ನಿವಾಸಿಗಳು ಅಧಿಕಾರಿಗಳ ಮುಂದಿರಿಸಿದ್ದಾರೆ.

ಮುಂದೆ ಕೆಲವೇ ದಿನಗಳಲ್ಲಿ ಮಳೆ ಬರುವುದರಿಂದ ರಸ್ತೆಯನ್ನು ಸಮತಟ್ಟುಗೊಳಿಸಿ ಹೆಚ್ಚಿನ ಮೆಷಿನ್‌ಗಳನ್ನು ಹಾಕಿ ಶೀಘ್ರ ಡಾಮಾರು ಹಾಕುವ ಕೆಲಸ ಮುಗಿಸಬೇಕು. ಕೃತಕ ನೆರೆಯಾಗದಂತೆ ಚರಂಡಿಗಳನ್ನು‌ನಿರ್ವಹಿಸುವಂತೆಯೂ ಒತ್ತಾಯಿಸಿದ್ದಾರೆ.

ಬಾಕ್ಸ್

ಸಂಭಾವ್ಯ ಅಪಾಯಗಳು..

ಮಳೆ ತೀವ್ರಗೊಂಡರೆ ಅಲ್ಲಲ್ಲಿ ಮಿನಿದ್ವೀಪಗಳು ಸೃಷಿಯಾಗಬಹುದು.

ನೀರು ಹರಿವಿಗೆ ಚರಂಡಿ ಇಲ್ಲದೆ ಅಕ್ಕಪಕ್ಕದ ಅಂಗಡಿ, ಮನೆ, ಕೃಷಿ ಭೂಮಿಗೆ ನೀರುನುಗ್ಗಬಹುದು

ಸರ್ವೀಸ್ ರಸ್ತೆಯ ಡಾಮರೀಕರಣ ಆಗದೇ ಇರುವುದರಿಂದ ಹೆದ್ದಾರಿ ಕೆಸರುಗದ್ದೆಯಾಗಬಹುದು.ಕೋಟ್ಸ್‌

ಮಳೆಗಾಲದಲ್ಲಿ ನಾಗರಿಕರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯ ಹಲವು ಕ್ರಮಗಳನ್ನು ಕೈಗೊಳ್ಳಲಿದ್ದೇವೆ. 15 ದಿನದ ಒಳಗಾಗಿ ಬಿ.ಸಿ .ರೋಡಿನಿಂದ ಪೆರಿಯಶಾಂತಿ ವರೆಗೆ ಸುಗಮ ಸಂಚಾರದ ಸರ್ವೀಸ್ ರಸ್ತೆ ಒದಗಿಸುತ್ತೇವೆ.

- ನಂದಕುಮಾರ್, ಪಿಆರ್‌ಒ, ಕೆಎನ್‌ಆರ್‌ ಕಂಪನಿ (ಗುತ್ತಿಗೆ ಸಂಸ್ಥೆ)

Share this article