ಮಿನಿ ಒಲಂಪಿಕ್ಸ್ ಕ್ರೀಡಾಕೂಟ: ಸುಂಟಿಕೊಪ್ಪದ ರಾಝಿಕ್‌ ಆಯ್ಕೆ

KannadaprabhaNewsNetwork | Published : Aug 19, 2024 12:51 AM

ಸಾರಾಂಶ

ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಆಡಲಿರುವ ಫುಟ್ಬಾಲ್‌ ಜಿಲ್ಲಾ ತಂಡಕ್ಕೆ ಇಲ್ಲಿನ ರಾಝಿಕ್‌ ಆಯ್ಕೆಯಾಗಿದ್ದಾರೆ. ರಾಝಿಕ್‌ ಆ. 22ರಂದು ಕೊಡಗು ತಂಡದೊಂದಿಗೆ ಬೆಂಗಳೂರಿಗೆ ತೆರಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆ. 24 ರಿಂದ 31ರವರೆಗೆ ಕರ್ನಾಟಕ ರಾಜ್ಯ ಒಲಂಪಿಕ್ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಮಿನಿ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಆಡಲಿರುವ ಫುಟ್ಬಾಲ್ ಜಿಲ್ಲಾ ತಂಡಕ್ಕೆ ಇಲ್ಲಿನ ರಾಝಿಕ್ ಆಯ್ಕೆಯಾಗಿದ್ದಾರೆ.

ಇಲ್ಲಿನ ಸೆಸ್ಕ್ ಇಲಾಖೆಯ ಬಳಿಯ ಹೊಸ ಬಡಾವಣೆಯ ನಿವಾಸಿ ಲತೀಫ್ -ಖದೀಜಾ ದಂಪತಿ ಪುತ್ರ ರಾಝಿಕ್ ತಮ್ಮ ಸ್ವಯಂ ಪರಿಶ್ರಮದಿಂದ ಒಂದನೇ ತರಗತಿಯಿಂದಲೇ ಫುಟ್ಬಾಲ್ ಆಡಲು ಆರಂಭಿಸಿ ಶಾಲಾ ಮಟ್ಟದಲ್ಲಿ ಮಿಂಚಿದ್ದರು.

ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವಾಗ ಅವರ ಆಟದ ಚಾಣಕ್ಷತೆಯನ್ನು ಕಂಡು ದೈಹಿಕ ಶಿಕ್ಷಕರೇ ಬೆರಗಾಗಿದ್ದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಹೋಬಳಿ ಮಟ್ಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ರಾಝಿಕ್ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ತಮ್ಮ ಆಟದ ಪ್ರದರ್ಶನದ ಮೂಲಕ ಮಿಂಚಿದ್ದರು. ನಂತರ ತಮ್ಮ ಹಿರಿಯ ಆಟಗಾರರೊಂದಿಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಆಟವಾಡುತ್ತಾ ಅವರ ಆಟದ ಚಾತುರ್ಯತೆಯನ್ನು ಮೈಗೂಡಿಸಿಕೊಂಡು ತಮ್ಮ ಕಠಿಣ ಪರಿಶ್ರಮದಿಂದಲೇ ಆಟದ ಚಾಣಾಕ್ಷತೆಯನ್ನು ಕಲಿತು ಸುಂಟಿಕೊಪ್ಪದ ಫುಟ್ ಬಾಲ್ ಸಂಘದ ಆಟಗಾರರಾಗಿ ಸೇರ್ಪಡೆಗೊಂಡು ತಮ್ಮ ಆಟದೊಂದಿಗೆ ಮಿಂಚುತ್ತಾ ಬಂದರು.

ಸುಂಟಿಕೊಪ್ಪದ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಪಾಂಡ್ಯನ್ ಅವರೊಂದಿಗೆ ಇನ್ನಷ್ಟು ತರಬೇತಿಯನ್ನು ಪಡೆದ ರಾಝಿಕ್ ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ ಹಲವು ಪಂದ್ಯದಲ್ಲಿ ತಮ್ಮದೇ ಆದ ಆಟದ ಮೂಲಕ ಮನರಂಜಿಸಿದ್ದರು. ಹಾಗೆಯೇ ಕಳೆದ ವರ್ಷ ಕೊಪ್ಪದ ಹುಲ್ಲು ಹಾಸಿನ ಮೈದಾನದಲ್ಲಿ ಸುಂಟಿಕೊಪ್ಪದ ಮಿಡ್ ಸಿಟಿ ತಂಡದ ಆಟಗಾರರಲ್ಲಿ ಒಬ್ಬರಾಗಿ ಗೆಲುವು ಸಾಧಿಸುವಲ್ಲಿ ಈತನ ಪಾತ್ರವು ಹೆಚ್ಚಾಗಿತ್ತು. ನಂತರ ಬೆಂಗಳೂರುನಲ್ಲಿ ನಡೆದ ರಾಜ್ಯಮಟ್ಟದ ಫುಟ್ಬಾಲ್ ಟೂರ್ನಿಯಲ್ಲಿ ಸುಂಟಿಕೊಪ್ಪ ತಂಡವನ್ನು ಪ್ರತಿನಿಧಿಸಿ ಅಮೋಘ ಪ್ರದರ್ಶನ ನೀಡಿ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸುಂಟಿಕೊಪ್ಪ ಜಿಯಂಪಿ ಶಾಲಾ ಮೈದಾನದಲ್ಲಿ, ಗದ್ದೆಹಳ್ಳದ ಆರ್.ಕೆ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ತನ್ನ ತಂಡ ಜಯಗಳಿಸುವ ಮೂಲಕ ತನ್ನ ಸ್ಥಾನವನ್ನು ತಂಡದಲ್ಲಿ ಉಳಿಸಿಕೊಂಡರು.

ಕೊಡಗು ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಅಮ್ಮತ್ತಿಯಲ್ಲಿ ಜುಲೈ ತಿಂಗಳಲ್ಲಿ ಆಯೋಜಿಸಿದ್ದ 14 ವರ್ಷದೊಳಗಿನ ಕೊಡಗು ಫುಟ್‌ಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 160 ಮಂದಿ ಯುವ ಆಟಗಾರರು ಭಾಗವಹಿಸಿದ್ದು, ಅದರಲ್ಲಿ ಒಟ್ಟು 13 ಮಂದಿ ಆಟಗಾರರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಅದರಲ್ಲಿ ಸುಂಟಿಕೊಪ್ಪದ ರಾಝಿಕ್ ಕೂಡ ಒಬ್ಬರಾಗಿದ್ದಾರೆ.

ಕೊಡಗಿನ ಅಮ್ಮತ್ತಿ ಮೈದಾನದಲ್ಲಿ ತರಬೇತಿ ಪಡೆದು ಕೊಡಗು ಎಫ್.ಸಿ 14 ವರ್ಷದೊಳಗಿನ ತಂಡದ ಪ್ರಮುಖ ಆಟಗಾರರಾಗಿರುವ ರಾಝಿಕ್ ಆ.22 ರಂದು ಕೊಡಗು ತಂಡದೊಂದಿಗೆ ಬೆಂಗಳೂರಿಗೆ ತೆರಳಲಿದ್ದಾರೆ.

ಕೊಡಗು ಎಫ್.ಸಿ ತಂಡಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಪ್ರಶಸ್ತಿ ಗಳಿಸುವ ಉತ್ತಮ ತಂಡವಾಗಿ ಮೂಡಿದೆ. ನನಗೆ ಪ್ರೋತ್ಸಾಹ ನೀಡಿದ ಹಿರಿಯ ಆಟಗಾರರಿಗೆ ಚಿರಾಋಣಿ ಎಂದು ಸುಂಟಿಕೊಪ್ಪ ಫುಟ್ ಬಾಲ್ ಆಟಗಾರ ರಾಝಿಕ್ ತಿಳಿಸಿದರು.

ಸುಂಟಿಕೊಪ್ಪದ ಯುವ ಆಟಗಾರ ಕೊಡಗು ತಂಡಕ್ಕೆ ಆಯ್ಕೆಯಾಗಿರುವುದು ಹೆಮ್ಮೆ ತಂದಿದೆ. ಇತನ ಪ್ರತಿಭೆ ರಾಜ್ಯ ಮಟ್ಟದಲ್ಲಿ ಅನಾವರಣಗೊಳ್ಳಲಿ. ಕೊಡಗು ತಂಡ ಜಯಗಳಿಸಲಿ ಎಂಬುದೇ ನಮ್ಮ ಆಶಯ ಎಂದು ಸುಂಟಿಕೊಪ್ಪ ಫುಟ್ ಬಾಲ್ ಆಟಗಾರರಾದ ಪಾಂಡ್ಯನ್, ಅಬೂಬಕರ್ ಹೇಳಿದರು.

Share this article