;Resize=(412,232))
ಬೆಂಗಳೂರು : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಹಾಗೂ ಭಾರತೀಯ ಮೀಸಲು ಪಡೆ (ಐಆರ್‌ಬಿ) ಪೇದೆಗಳ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಎಸ್ಸೆಸ್ಸೆಲ್ಸಿಯಿಂದ ಪಿಯುಸಿಗೆ ಹೆಚ್ಚಳ ಸೇರಿ ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ವೃಂದ ಮತ್ತು ನೇಮಕಾತಿ ಕರಡು ನಿಯಮಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೆಎಸ್ಆರ್‌ಪಿ ಹಾಗೂ ಐಆರ್‌ಬಿ (ಭಾರತೀಯ ಮೀಸಲು ಪಡೆ) ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಒಪ್ಪಿಗೆ ನೀಡಿದೆ. ಈ ಕರಡಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಿ ಮೊದಲು ಪ್ರಕಟಿಸಬೇಕು. ಕರಡು ನಿಯಮಗಳಿಗೆ ಗಂಭೀರ ಆಕ್ಷೇಪಣೆಗಳು ಬಾರದಿದ್ದರೆ ಮತ್ತೊಮ್ಮೆ ಸಂಪುಟಕ್ಕೆ ವಿಷಯ ಮಂಡಿಸದೆ ಅಂತಿಮಗೊಳಿಸಲು ಸಂಪುಟ ಅನುಮೋದಿಸಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ಸರ್ಕಾರಿ ಶಾಲೆಗಳಲ್ಲಿ 360 ಕೋಟಿ ರು. ವೆಚ್ಚದಲ್ಲಿ 2200 ಶಾಲಾ ಕೊಠಡಿ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ, ವಲಯ ಮಟ್ಟದಲ್ಲಿ ಟೆಂಡರ್ ಕರೆಯಲು ಅವಕಾಶ ನೀಡಲಾಗುವುದು. ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ಯೋಜನಾ ರಸ್ತೆ ಆಸ್ತಿ ನಿರ್ವಹಣಾ ಕೇಂದ್ರಕ್ಕೆ (PRAMC) ವಹಿಸಿ ಕೇಂದ್ರೀಕೃತ ಟೆಂಡರ್ ಕರೆಯಲು ಅವಕಾಶ ನೀಡುವುದು. ಜಿಪಂ ಸಿಇಒ ಇದರ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ‘ಕಾವೇರಿ ಐಟಿ ವಿಭಾಗ’ ಹೆಸರಿನಲ್ಲಿ ಹೊಸದಾಗಿ ಇನ್ ಹೌಸ್ ತಾಂತ್ರಿಕ ಅಭಿವೃದ್ಧಿ ವಿಭಾಗ ಸ್ಥಾಪಿಸಲು ಅನುಮೋದಿಸಲಾಯಿತು. ಕೆಟಿಪಿಪಿ ಕಾಯ್ದೆ ಪ್ರಕಾರ ಮಾನವ ಸಂಪನ್ಮೂಲ ಸಂಸ್ಥೆಯಿಂದ ಹೊರಗುತ್ತಿಗೆ ಆಧಾರ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಬೇಕು. 5 ವರ್ಷದ ಅವಧಿಗೆ 69.13 ಕೋಟಿ ವೆಚ್ಚದಲ್ಲಿ ಐಟಿ ಸೆಲ್ ಸ್ಥಾಪಿಸಲು ಅನುಮೋದನೆ ನೀಡಿದೆ.
ನಾಲ್ಕು ಬಂದರು ಅಭಿವೃದ್ಧಿ:
ರಾಜ್ಯದ ಹಾಲಿ ಬಂದರುಗಳಾದ ಕಾರವಾರ, ಹಳೇ ಮಂಗಳೂರಿನ ಎರಡು ಬಂದರು, ಮಲ್ಪೆ ಬಳಿ ಸೇರಿ ನಾಲ್ಕು ಬಂದರು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಒಪ್ಪಿಗೆ ನೀಡಿದೆ. ಕರ್ನಾಟಕ ಜಲಸಾರಿಗೆ ಮಂಡಳಿಯ ವಾರ್ಷಿಕ ಆದಾಯ ಹೆಚ್ಚಳ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮತ್ತು ಸುಧಾರಿತ ಜೀವನೋಪಾಯಕ್ಕೆ ಅವಕಾಶ ನೀಡಲು ಈ ಯೋಜನೆ ಕೈಗೆತ್ತಿಕೊಂಡಿರುವುದಾಗಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
8 ಕಡೆ ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯುಬೇಟರ್ಸ್ ಸ್ಥಾಪನೆ:
ತಂತ್ರಜ್ಞಾನ ಉದ್ಯಮ ಪ್ರೋತ್ಸಾಹಿಸಲು ಮೈಸೂರು, ಬಾಗಲಕೋಟೆ, ಶಿವಮೊಗ್ಗ, ಮಂಗಳೂರು, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ 10 ಕೋಟಿ ರು. ವೆಚ್ಚದಲ್ಲಿ ಎಂಟು ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯುಬೇಟರ್ಸ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಸ್ಟಾರ್ಟ್ಅಪ್ ಪಾಲಿಸಿ 2022-27ರ ಅಡಿ ಐದು ವರ್ಷಗಳ ಅವಧಿಗೆ 80 ಕೋಟಿ ರು. ವೆಚ್ಚ ಮಾಡಲಾಗುವುದು.
ಕೆ-ಶೋರ್ ಯೋಜನೆಗೆ 20.47 ಕೋಟಿ ವೆಚ್ಚದಲ್ಲಿ ತಾಂತ್ರಿಕ ಸಲಹೆ:
ಕರ್ನಾಟಕದ ಕರಾವಳಿ ಆರ್ಥಿಕತೆಯನ್ನು ಬಲಪಡಿಸುವ ಕೆ-ಶೋರ್ ಯೋಜನೆಗೆ 20.47 ಕೋಟಿ ರು. ವೆಚ್ಚದಲ್ಲಿ ತಾಂತ್ರಿಕ ಮತ್ತು ನಿರ್ವಹಣಾ ಸಲಹೆಗಾರರ ಸೇವೆ ಪಡೆಯಲು ಸಂಪುಟ ಒಪ್ಪಿಗೆ ನೀಡಿದೆ.
ಇತರೆ ನಿರ್ಣಯಗಳು:
- ಬೆಂಗಳೂರಿನ ಬನಶಂಕರಿ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ 602.88 ಚ.ಮೀ. ವಿಸ್ತೀರ್ಣದ ನಿವೇಶನವನ್ನು 30 ವರ್ಷದ ಅವಧಿಗೆ ಗುತ್ತಿಗೆಗೆ ನೀಡಲು ನಿರ್ಧಾರ.
- ಜಿಬಿಎ ವ್ಯಾಪ್ತಿಯಿಂದ ಹಾಗೂ ಕೋಲಾರ ಎಪಿಎಂಸಿಯಿಂದ ಬರುವ ಹಸಿ ತ್ಯಾಜ್ಯ ಸಂಸ್ಕರಣೆಗೆ ಕೋಲಾರದ ವಕ್ಕಲೇರಿ ಬಳಿ ಗೇಲ್ ಸಂಸ್ಥೆಗೆ 9.38 ಎಕರೆ ಮಂಜೂರು.
-ಮಂಡ್ಯದ ನೂತನ ಕೃಷಿ ವಿವಿಯ ಪ್ರಾಥಮಿಕ ಹಂತದ ನಿರ್ವಹಣೆಗೆ 23.25 ಕೋಟಿ ರು. ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ.
- ಕಾರವಾರ ಕ್ಯಾನ್ಸರ್ ಕೇರ್ ಘಟಕಕ್ಕೆ ಬೇಕಾದ ಅಗತ್ಯ ಉಪಕರಣ ಖರೀದಿಸಲು 18.25 ಕೋಟಿ ರು. ನೀಡಿಕೆ
- ಪೊಲೀಸ್ ಇಲಾಖೆಗೆ 34.95 ಕೋಟಿ ರು. ವೆಚ್ಚದಲ್ಲಿ 241 ಮಾದರಿಯ ವಿವಿಧ ವಾಹನ ಖರೀದಿಗೆ ಅನುಮೋದನೆ.