ಕೃಷಿ ತಾಕಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ಪರಿಶೀಲನೆ

KannadaprabhaNewsNetwork |  
Published : Oct 31, 2025, 02:00 AM IST
14 | Kannada Prabha

ಸಾರಾಂಶ

ಕಬ್ಬಿನೊಂದಿಗೆ ಬೆಳೆದಿರುವ ಬೆಂಡೆ, ಗೋರಿಕಾಯಿ, ಸೋಯಾ ಅವರೆ, ಉದ್ದು, ನೆಲಗಡಲೆ, ವಿವಿಧ ಸೊಪ್ಪುಗಳನ್ನು ವೀಕ್ಷಿಸಿ ರೈತರು ಕಬ್ಬು ಬೆಳೆಯನ್ನು ಏಕಬೆಳೆಯಾಗಿ ಬೆಳೆಯದೆ ಮಣ್ಣಿನ ಆರೋಗ್ಯ ವೃದ್ಧಿಸಲು ಹಾಗೂ ಮಧ್ಯಂತರ ಆದಾಯ ಪಡೆಯಲು ಸಹಕಾರಿಯಾಗುವಂತೆ ಅಂತರ ಬೆಳೆಯನ್ನು ಬೆಳೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ವಿ.ಸಿ.ಫಾರ್ಮ್ ಕೃಷಿ ವಿವಿಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಕಬ್ಬಿನಲ್ಲಿ ವಿವಿಧ ಅಂತರ ಬೆಳೆಗಳನ್ನು ಬೆಳೆದಿರುವ ಕೃಷಿ ತಾಕಿಗೆ ಜಿಪಂ ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿ.ಸಿ.ಫಾರ್ಮ್ ನಲ್ಲಿನ ಕೃಷಿ ತಾಕಿಗೆ ಭೇಟಿ ನೀಡಿ, ಸದರಿ ತಾಕಿನಲ್ಲಿ ಕಬ್ಬಿನೊಂದಿಗೆ ಬೆಳೆದಿರುವ ಬೆಂಡೆ, ಗೋರಿಕಾಯಿ, ಸೋಯಾ ಅವರೆ, ಉದ್ದು, ನೆಲಗಡಲೆ, ವಿವಿಧ ಸೊಪ್ಪುಗಳನ್ನು ವೀಕ್ಷಿಸಿ ರೈತರು ಕಬ್ಬು ಬೆಳೆಯನ್ನು ಏಕಬೆಳೆಯಾಗಿ ಬೆಳೆಯದೆ ಮಣ್ಣಿನ ಆರೋಗ್ಯ ವೃದ್ಧಿಸಲು ಹಾಗೂ ಮಧ್ಯಂತರ ಆದಾಯ ಪಡೆಯಲು ಸಹಕಾರಿಯಾಗುವಂತೆ ಅಂತರ ಬೆಳೆಯನ್ನು ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.

ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿ ಕುಮಾರ್ ಮಾತನಾಡಿ, ಸದರಿ ತಾಕಿನಲ್ಲಿ ಒಂಟಿ ಕಣ್ಣಿನ ಕಬ್ಬಿನ ಸಸಿ ಬೆಳೆಸಲಾಗಿದೆ. ಇದರಿಂದ ಕಬ್ಬಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.

ರೈತರು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಹಾಗೂ ಅಂತರ ಬೆಳೆ ಬೆಳೆಯಬೇಕು ಹಾಗೂ ತಾವು ಬೆಳೆಯುವ ಬೆಳೆ ಹಾಗೂ ಉತ್ಪನ್ನಗಳನ್ನು ತಾವೇ ಮೌಲ್ಯವರ್ಧನೆ ಮಾಡಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ಮಾರುಕಟ್ಟೆಯಲ್ಲಿ ಉತ್ತಮ ಲಾಭ ಪಡೆಯಬಹುದು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ರೈತರಿಗೆ ಅರಿವು ಮೂಡಿಸಬೇಕು ಎಂದರು.

ಕೃಷಿ ಸಖಿ ಮತ್ತು ರೈತರೊಂದಿಗೆ ಸಂವಾದ:

ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆ, ರಾಸಾಯನಿಕಗಳ ಬಳಕೆ ಕಡಿಮೆ ಮಾಡುವುದು, ನೀರಾವರಿ ಪದ್ಧತಿಯಲ್ಲಿ ಬದಲಾವಣೆ, ಬಹು ಬೆಳೆ ಪದ್ಧತಿ, ಅಂತರ ಬೆಳೆ ಬೇಸಾಯ, ಸಾವಯವ ಕೃಷಿ ಸೇರಿದಂತೆ ಇತರೆ ವಿಷಯಗಳ ಕುರಿತು ಕೃಷಿ ಸಖಿಯರು ಮತ್ತು ನೈಸರ್ಗಿಕ ಕೃಷಿಕ ರೈತರೊಂದಿಗೆ ಸಂವಾದ ನಡೆಸಿದರು.

ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಗುಂಪು ಪ್ರಮಾಣೀಕರಣ ಮಾಡಲು ಕ್ರಮವಹಿಸುವುದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಸಹಾಯಕ ಕೃಷಿ ನಿರ್ದೇಶಕ ಹರ್ಷ ಸೇರಿದಂತೆ ಇತರರು ಹಾಜರಿದ್ದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ