ನೀವೆಲ್ಲಾ ಮನುಷ್ಯರೋ ಮೃಗಗಳೋ ಗೊತ್ತಾಗುತ್ತಿಲ್ಲ: ಡೀಸಿ ಡಾ.ಕುಮಾರ ಆಕ್ರೋಶ

KannadaprabhaNewsNetwork |  
Published : Oct 31, 2025, 02:00 AM IST
30ಕೆಎಂಎನ್ ಡಿ18 | Kannada Prabha

ಸಾರಾಂಶ

ಏನೇ ಕೇಳಿದರೂ ತಾಲೂಕು ಶಿರಸ್ತೇದಾರ್ ತಲೆಯಾಡಿಸುತ್ತೀರಿ. ಸಣ್ಣ ಕೆಲಸದ ಬಗ್ಗೆಯೂ ತಹಸೀಲ್ದಾರ್ ತಲೆಕೆಡಿಸಿಕೊಂಡಿಲ್ಲ. ನಾನೇ ಬಂದು ವಿಷಯ ನಿರ್ವಾಹಕರ ಹಂತಕ್ಕಿಳಿದು ಕೇಳುವ ಪರಿಸ್ಥಿತಿ ಬಂದೊದಗಿದೆ ಏಕೆ..?

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿವೆ. ಯಾವೊಬ್ಬ ಅಧಿಕಾರಿಗಳಿಗೂ ಜನಪರ ಕೆಲಸ ಮಾಡುವ ಆಸಕ್ತಿ, ಕಾಳಜಿ ಇಲ್ಲ. ಸಭೆಯಲ್ಲಿ ಸಬೂಬು ಹೇಳಿದರೆ ನಾನು ಕೇಳುವುದಿಲ್ಲ. ಸರಿಯಾಗಿ ಕೆಲಸ ಮಾಡದ ನೀವೆಲ್ಲಾ ಮನುಷ್ಯರೋ ಮೃಗಗಳೋ ಗೊತ್ತಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಕೆಲ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾಲೂಕು ಕಚೇರಿಗೆ ಗುರುವಾರ ಭೇಟಿ ಕೊಟ್ಟು ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಕೆಲ ಅಧಿಕಾರಿಗಳು ನೀಡುತ್ತಿದ್ದ ಸಬೂಬು ಕೇಳಿ ಗರಂ ಆದ ಜಿಲ್ಲಾಧಿಕಾರಿಗಳು ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆವರಿಳಿಸಿದರು.

ಎಲ್ಲಾ ಇಲಾಖೆಗಳಿಗೂ ಕಂದಾಯ ಇಲಾಖೆ ಮಾತೃ ಇಲಾಖೆ ಇದ್ದಂತೆ. ಹಾಗಾಗಿ ನೌಕರರು ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬೇಕು. ಆದರೆ, ಏನೇ ಕೇಳಿದರೂ ತಾಲೂಕು ಶಿರಸ್ತೇದಾರ್ ತಲೆಯಾಡಿಸುತ್ತೀರಿ. ಸಣ್ಣ ಕೆಲಸದ ಬಗ್ಗೆಯೂ ತಹಸೀಲ್ದಾರ್ ತಲೆಕೆಡಿಸಿಕೊಂಡಿಲ್ಲ. ನಾನೇ ಬಂದು ವಿಷಯ ನಿರ್ವಾಹಕರ ಹಂತಕ್ಕಿಳಿದು ಕೇಳುವ ಪರಿಸ್ಥಿತಿ ಬಂದೊದಗಿದೆ ಏಕೆ ಎಂದು ಪ್ರಶ್ನಿಸಿದರು.

ಡೀಸಿ ಕಚೇರಿಯಲ್ಲಿ ಬಾಕಿ ಇರುವ ನ್ಯಾಯಾಲಯ ಪ್ರಕರಣಗಳ ಬಾಬ್ತು ತುರ್ತಾಗಿ ಕ್ರಮವಹಿಸುವ ಜೊತೆಗೆ ಹಿಂಬಾಲಿಕಾ ಕ್ರಮವಹಿಸಿ, ವರದಿ ಸಲ್ಲಿಸಿ ಬಾಕಿಯಿರುವ ರಿಟ್ ಪಿಟಿಷನ್ ಪ್ರಕರಣಗಳ ಬಾಬ್ತು ಶೀಘ್ರವೇ ನ್ಯಾಯಾಲಯಕ್ಕೆ ಕಂಡಿಕೆವಾರು ಉತ್ತರ ಸಲ್ಲಿಸುವಂತೆ ಸೂಚಿಸಿದರು.

ಬಾಕಿ ಇರುವ ಲೋಕಾಯುಕ್ತ ಪ್ರಕರಣಗಳ ಬಗ್ಗೆ ಜರೂರಾಗಿ ಲೋಕಾಯುಕ್ತರಿಗೆ ವರದಿ ಸಲ್ಲಿಸಬೇಕು. ಪ್ರಕೃತಿ ವಿಕೋಪ, ಆಕಸ್ಮಿಕ ಹಾಗೂ ಇತರೆ ರೀತಿಯ ವಿಕೋಪಗಳಲ್ಲಿ ಬಾಧಿತರಾದವರಿಗೆ ತುರ್ತಾಗಿ ಪರಿಹಾರ ನೀಡಲು ಕ್ರಮವಹಿಸಬೇಕು. ಇ-ಕಚೇರಿ ಬಾಕಿಯನ್ನು ಶೀಘ್ರ ಇತ್ಯರ್ಥ, ಸಾರ್ವಜನಿಕರ ಅನಗತ್ಯ ಅಲೆದಾಟಕ್ಕೆ ಆಸ್ಪದ ನೀಡದೆ ತ್ವರಿತಗತಿಯಲ್ಲಿ ಅರ್ಜಿಗಳ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.

ಜನರ ಅಹವಾಲು ಶೀಘ್ರ ಇತ್ಯರ್ಥಪಡಿಸುವಂತೆ ತಹಸಿಲ್ದಾರ್ ಜಿ.ಆದರ್ಶ ಅವರಿಗೆ ಸೂಚಿಸಿದರು. ಎಲ್ಲ ರೀತಿಯ ಸೇವೆಗಳನ್ನು ಸಕಾಲದಲ್ಲಿ ಕಡ್ಡಾಯವಾಗಿ ಒದಗಿಸಬೇಕು. ತಪ್ಪಿದ್ದಲ್ಲಿ ಅಂತಹ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿದ್ದು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗಿ, ಜನರ ಮನವಿಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು. ಆಧಾರ್ ಸೀಡಿಂಗ್, ಇ-ಪೌತಿ ಖಾತಾ ಆಂದೋಲನ, ನಮೂನೆ-1 ರಿಂದ 5, ಗೈರು ವಿಲೆ ಕಡತ, ಸಕಾಲ, ನ್ಯಾಯಾಲಯಗಳ ಪ್ರಕರಣಗಳು, ಒತ್ತುವರಿ ತೆರವು, ಭೂ ಸುರಕ್ಷ, 11 ಇ ತಿದ್ದುಪಡಿ, ಬಗರ್ ಹುಕ್ಕುಂ ಅರ್ಜಿಗಳ ವಿಲೇವಾರಿ, ಹಕ್ಕು ಪತ್ರಗಳ ವಿತರಣೆಗಳ ಪ್ರಗತಿ ಪರಿಶೀಲಿಸಿ, ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ವೇಳೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಜಿ.ಆದರ್ಶ ಸೇರಿದಂತೆ ಕಂದಾಯ ಇಲಾಖೆ ಎಲ್ಲಾ ಅಧಿಕಾರಿಗಳು ಮತ್ತು ವಿಷಯವಾರು ಗುಮಾಸ್ತರು ಇದ್ದರು.

PREV

Recommended Stories

ಕಸ ಸುರಿಯುವ ಹಬ್ಬದಿಂದ ಜನರಲ್ಲಿ ಜಾಗೃತಿ - ಕಂಡಲ್ಲಿ ಕಸ ಹಾಕುವವರ ಮನೆ ಮುಂದೆ ತ್ಯಾಜ್ಯ
ಟನಲ್ ರಸ್ತೆ, ಎ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ: ಡಿಕೆಶಿ