ಅಜ್ಜಂಪುರದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ಸೇವಾ ಅರಿವು ಮೂಡಿಸುವ ಕಾರ್ಯಾಗಾರ
ಹಿರಿಯ ನಾಗರಿಕರಿಗೆ ಅನೇಕ ಸಮಸ್ಯೆಗಳಿವೆ. ಕಾನೂನು ಸೇವೆ ಅರಿವು ಮೂಡಿಸುವುದರಿಂದ ಕನಿಷ್ಠ ಭದ್ರತೆ ಮನೋಭಾವ ಬರಲು ಸಾಧ್ಯ ಎಂದು ತಾಲೂಕು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಿ. ಶಿವಮೂರ್ತಿ ಅಭಿಪ್ರಾಯಪಟ್ಟರು.
ಅಜ್ಜಂಪುರ ತಾಲೂಕು ಕಚೇರಿ ಆವರಣದ ಡಾ.ಬಿ. ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತರೀಕೆರೆ, ವಿಶೇಷ ಚೇತನರ ಸಬಲೀಕರಣ ಇಲಾಖೆ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಇಲಾಖೆ ಗಳು ಸಂಯುಕ್ತವಾಗಿ ಆಯೋಜಿಸಿರುವ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಅಜ್ಜಂಪುರದಲ್ಲಿ ಒಂದು ವೃದ್ಧಾಶ್ರಮದ ಅಗತ್ಯವಿದೆ. ದಿಕ್ಕಿಲ್ಲದ ಅಥವಾ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ವೃದ್ಧರಿಗೆ ಒಂದು ನೆಲೆ ಬೇಕು. ಹಾಗಾಗಿ ಸರ್ಕಾರವೇ ಈ ಯೋಜನೆ ಕೈಗೆತ್ತಿಕೊಂಡರೆ ಸಾರ್ವಜನಿಕರಾದ ನಾವು ಸಹಕಾರ ನೀಡಬಲ್ಲೆವು ಎಂದು ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಪ್ಯಾನೆಲ್ ವಕೀಲ ಪಿ.ವಿನಯಕುಮಾರ್ ಹಿರಿಯ ನಾಗರಿಕರ ಹಕ್ಕುಗಳು ಮತ್ತು ಕಾನೂನು ಗಳು ಎಂಬ ವಿಷಯ ಕುರಿತು ಮಾತನಾಡಿ. ಹಕ್ಕು ಮತ್ತು ಕಾನೂನು ಅರಿವು ಇಲ್ಲದೆ ಹಿರಿಯ ನಾಗರಿಕರು ಉಪೇಕ್ಷೆ ಮತ್ತು ಶೋಷಣೆಗೆ ಒಳಗಾಗುವುದು ಸಾಮಾನ್ಯ. ಆದ್ದರಿಂದ ನಿಮಗಾಗಿಯೇ ಈ ಸಮಿತಿ ಉಚಿತ ಕಾನೂನು ಸಲಹೆ ಹಾಗೂ ಸೇವೆ ನೀಡುತ್ತದೆ. ಅವುಗಳ ಪ್ರಯೋಜನ ನೀವು ಪಡೆಯಬೇಕು. ನಮಗೊಂದು ಅಹವಾಲು ನಮಗೆ ಸಲ್ಲಿಸಿ, ಕಾನೂನು ನೆರವು ಪಡೆಯಿರಿ ಎಂದು ಹೇಳಿದರು.
ಅಜ್ಜಂಪುರದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ಸೇವಾ ಅರಿವು ಮೂಡಿಸುವ ಕಾರ್ಯಾಗಾರದ ಉದ್ಘಾಟನೆಯನ್ನು ತಾಲೂಕು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಿ. ಶಿವಮೂರ್ತಿ ನೆರವೇರಿಸಿದರು.