- 1 ಸಾವಿರ ಬೋನಸ್ ಬಗ್ಗೆಯೂ ಚರ್ಚೆ: ಶಾಸಕ ಬಸವಂತಪ್ಪ । ದಾವಣಗೆರೆ ಬಂದ್ ವಾಪಸ್ ಪಡೆದ ರೈತ ಸಂಘ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಜಾರಿ, ಪ್ರತಿ ಕ್ವಿಂಟಲ್ ಭತ್ತಕ್ಕೆ ರಾಜ್ಯ ಸರ್ಕಾರದ ₹1 ಸಾವಿರ ಬೋನಸ್ ನೀಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು. ಈ ಭರವಸೆ ಮೇರೆಗೆ ಮೇ 25ರಂದು ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣ ಕರೆ ನೀಡಿದ್ದ ದಾವಣಗೆರೆ ಬಂದ್ ಹಿಂಪಡೆಯಲಾಗಿದೆ.ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯ ಶಾಸಕ ಕೆ.ಎಸ್. ಬಸವಂತಪ್ಪ ಜೊತೆಗೆ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರ ಸುದೀರ್ಘ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ರಾಜ್ಯಮಟ್ಟದಲ್ಲಿ ಸುಗ್ರೀವಾಜ್ಞೆ ಹೊರಡಿಸಬೇಕು. ಇದಕ್ಕಾಗಿ ಸರ್ಕಾರ, ಅಧಿಕಾರಿಗಳ ಸಭೆ ನಡೆಸಬೇಕು, ಸಹಾಯಧನ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದರು.
ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಕನಿಷ್ಠ ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಜಾರಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನರ ನೇತೃತ್ವದಲ್ಲಿ ಮೇ 23ರಂದು ಸಿಎಂ ಕಚೇರಿಯಲ್ಲಿ ಮುಂದಿನ ಸಭೆಗೆ ದಿನಾಂಕ ನಿಗದಿಯಾಗಲಿದೆ. ಸಭೆಯಲ್ಲಿ ಈ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಚರ್ಚಿಸೋಣ. ಸಹಾಯಧನ ಕೊಡಿಸುವ ವಿಚಾರ ಚರ್ಚೆ ಮಾಡಲಾಗುವುದು. ಇದಕ್ಕೆ ನಮ್ಮೆಲ್ಲರ ಸಹಕಾರವೂ ಇದೆ. ದಾವಣಗೆರೆ ಬಂದ್ ಬೇಡ ಎಂದು ಹೇಳಿದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಮಾಯಕೊಂಡ, ದಾವಣಗೆರೆ ಎಪಿಎಂಸಿ ಮಾರುಕಟ್ಟೆ ಆವರಣಗಳಲ್ಲಿ ತಲಾ 1 ಸಾವಿರ ಕ್ವಿಂಟಲ್ ಭತ್ತ ಮತ್ತು ಮೆಕ್ಕೇಜೋಳ ಡ್ರೈಯರ್ ಯಂತ್ರಗಳನ್ನು ಅಳವಡಿಸಿ ಉಚಿತವಾಗಿ ಧಾನ್ಯ ಒಣಗಿಸುವ ವ್ಯವಸ್ಥೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ವಿಸ್ತೃತ ವರದಿ ಸಿದ್ಧಪಡಿಸಲು ಎಪಿಎಂಸಿ ಕಾರ್ಯದರ್ಶಿಗೆ ಸೂಚಿಸಿದರು. ಇದೇ ವಿಚಾರವಾಗಿ ರಾಜ್ಯ ಎಪಿಎಂಸಿ ನಿರ್ದೇಶಕ ಶಿವಾನಂದ ಕಪಾಶಿ ಅವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಎಪಿಎಂಸಿಯಲ್ಲಿ ಅನುದಾನ ಲಭ್ಯವಿದ್ದು, ಪ್ರಸ್ತಾವನೆ ಸಲ್ಲಿಸಿದರೆ ಈ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ರೈತ ಸಂಘದ ಮುಖಂಡರಾದ ಆಲೂರು ಪರಶುರಾಮ, ಚಿನ್ನಸಮುದ್ರ ಭೀಮಾನಾಯ್ಕ, ಕುಮಾರಹಳ್ಳಿ ಪ್ರಭು, ರಾಜನಹಟ್ಟಿ ರಾಜು ಚಿಕ್ಕಮಲ್ಲನಹೊಳೆ ಚಿರಂಜೀವಿ, ಹುಚ್ಚವ್ವನಹಳ್ಳಿ ಪ್ರಕಾಶ, ಗಂಡುಗಲಿ, ಕಬ್ಬೂರು ತಿಪ್ಪಣ್ಣ, ಕೊಡಗನೂರು ತಿಮ್ಮಣ್ಣ, ದೇವ್ಲಾನಾಯ್ಕ, ಕುಕ್ಕವಾಡ ಬಸವರಾಜ, ರಾಮಣ್ಣ, ಆನಗೋಡು ಭೀಮಣ್ಣ, ಸುರೇಶ ನಾಯ್ಕ, ಯರವನಾಗತಿಹಳ್ಳಿ ರುದ್ರಣ್ಣ, ಕೋಲ್ಕುಂಟೆ ಬಸವರಾಜ ಇತರರು ಇದ್ದರು.
-22ಕೆಡಿವಿಜಿ18: