ವಿ.ಎಂ. ನಾಗಭೂಷಣ
ಪ್ರಸ್ತಾವಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದರಿಂದ ಅಲ್ಲಿನ ಲಕ್ಷಾಂತರ ಗಿಡ-ಮರಗಳು, ಔಷಧೀಯ ಸಸ್ಯಗಳು, ವನ್ಯಜೀವಿ ಸಂಕುಲದ ಅಸ್ತಿತ್ವಕ್ಕೆ ಕಂಟಕ ಎದುರಾಗಿದೆ. ತಾಲೂಕು ಮಾತ್ರವಲ್ಲದೆ ಸುತ್ತಲಿನ ಪ್ರದೇಶಗಳಲ್ಲಿನ ಜನಜೀವನ, ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಜಲಮೂಲಗಳಿಗೂ ಕಂಟಕ ಎದುರಾಗಬಹುದೆನ್ನಲಾಗಿದೆ. ಈ ಪ್ರದೇಶದಲ್ಲಿಯೇ ಇತಿಹಾಸ ಪ್ರಸಿದ್ಧ ಹಾಗೂ ಸಂರಕ್ಷಿತ ಪ್ರಾಚೀನ ಸ್ಮಾರಕ ಶ್ರೀಕುಮಾರಸ್ವಾಮಿ ದೇವಸ್ಥಾನವು ಬರುವುದರಿಂದ ಅದರ ಅಸ್ತಿತ್ವಕ್ಕೂ ಧಕ್ಕೆ ಉಂಟಾಗಲಿದೆ ಎಂಬ ಆತಂಕವಿದೆ.
ರಾಮನಮಲೈ ಅರಣ್ಯ ವಲಯದಲ್ಲಿ ಸಿ ಕೆಟಗರಿಯ ಗಣಿಗಳಿವೆ. ಅಲ್ಲಿ ಕೆಐಒಸಿಎಲ್‌ಗೆ ಗಣಿಗಾರಿಕೆಗೆ ಅವಕಾಶ ನೀಡಿದ್ದರೆ ಆಗುತ್ತಿತ್ತು. ಸ್ವಾಮಿಮಲೈನಲ್ಲಿನ ದಟ್ಟ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಮುಂದೆ ಪರಿಸರ ಅಸಮತೋಲಕ್ಕೆ ಕಾರಣವಾಗಿ ಇಲ್ಲಿನ ಜನ ಜೀವನ ತೊಂದರೆ ಅನುಭವಿಸಬೇಕಾಗುತ್ತದೆ. ಇದೇ ರೀತಿಯಲ್ಲಿ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡುತ್ತಾ ಸಾಗಿದರೆ, ಇನ್ನು ಕೆಲವೇ ವರ್ಷಗಳಲ್ಲಿ ಇಲ್ಲಿನ ಸುಂದರ ಪರಿಸರ ಮಾಯವಾಗಿ, ಪರಿಸರ ಅಸಮತೋಲನಕ್ಕೆ ಕಾರಣವಾಗಬಹುದು ಎಂಬ ಆತಂಕ ಈ ಭಾಗದ ಜನರಲ್ಲಿ ಶುರುವಾಗಿದೆ.ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿ ಪರಿಸರ ನಾಶಕ್ಕೆ ಕಾರಣವಾಗುತ್ತಿರುವಂತೆ ಇಲ್ಲಿನ ಪರಿಸರ ಪುನಶ್ಚೇತನ, ಜನ ಜೀವನ ಸುಧಾರಣೆ ಕುರಿತು ಸರ್ಕಾರ ಏಕೆ ಚಿಂತನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಮಾತುಗಳು ಇಲ್ಲಿನ ಪರಿಸರಾಸಕ್ತರಿಂದ ಕೇಳಿ ಬರುತ್ತಿದೆ.
ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಲಕ್ಷಾಂತರ ಮರಗಿಡಗಳಿಗೆ ಕೊಡಲಿ ಏಟು ಬೀಳಲಿದೆ. ಇಲ್ಲಿನ ಸುಂದರ ಪರಿಸರ ಹಾಗೂ ಪ್ರಾಣಿ ಪಕ್ಷಿ ಸಂಕುಲಕ್ಕೆ ಕಂಟಕ ಉಂಟಾಗಲಿದೆ. ಕಾಡುಪ್ರಾಣಿಗಳು ಹಾಗೂ ಮಾನವ ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ. ರಾಮಘಡ ವಲಯದಲ್ಲಿನ ಸಿ ಕೆಟಗರಿ ಗಣಿಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಿ ಎನ್ನುತ್ತಾರೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ, ಜನ ಸಂಗ್ರಾಮ ಪರಿಷತ್ ಶ್ರೀಶೈಲ ಆಲ್ದಳ್ಳಿ.
ಸಂಡೂರು ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಜೀವ ವೈವಿಧ್ಯ, ಜಲಮೂಲ, ಔಷಧೀಯ ಸಸ್ಯಗಳಿವೆ. ಇವುಗಳನ್ನು ನಾಶ ಮಾಡಿದರೆ ಮುಂದೆ ನೂರು ವರ್ಷವಾದರೂ ಇಂತಹ ಪರಿಸರವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಕಮ್ಮತ್ತೂರು ಗ್ರಾಮಸ್ಥ ಎನ್.ಎಚ್. ಮಲ್ಲಿಸ್ವಾಮಿ.