ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪರಾಮರ್ಶನಾ ಸಭೆಯಲ್ಲಿ ಮಾತನಾಡಿ, ಫಲಿತಾಂಶ ಕುಸಿಯಲು ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿದ್ದು ಪ್ರಮುಖ ಕಾರಣ ಎಂದ ಕೆಲವು ಮುಖ್ಯ ಶಿಕ್ಷಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸರಾಸರಿ ಶೇ.67 ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಶಾಲೆಗಳಲ್ಲಿ ಶೇ.83 ರಷ್ಟು ಫಲಿತಾಂಶ ಬಂದಿದೆ. ಖಾಸಗಿ ಶಾಲೆಗಳ ಮಕ್ಕಳು ಕೂಡಾ ಸಿಸಿ ಕ್ಯಾಮರಾ ಅಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಖಾಸಗಿ ಶಾಲೆ ಶಿಕ್ಷಕರಿಗಿರುವ ಕಲಿಸುವ ಇಚ್ಛಾಶಕ್ತಿ ಸರ್ಕಾರಿ ಶಾಲೆ ಶಿಕ್ಷಕರಿಗಿಲ್ಲ. ಇದು ಮಕ್ಕಳ ಕಲಿಕಾ ಪ್ರಗತಿ ಹಿನ್ನಡೆಗೆ ಕಾರಣ ಎಂದು ಹೇಳಿದರು.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕಳೆದ ಸಾಲಿನಲ್ಲಿ 14 ಸಾವಿರ ಇದ್ದ ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಪ್ರಸಕ್ತ ವರ್ಷ 11 ಸಾವಿರಕ್ಕೆ ಕುಸಿದಿದೆ. ಆದರೆ, ಖಾಸಗಿ ಶಾಲೆಗಳ ದಾಖಲಾತಿ ಸಂಖ್ಯೆ ಏರು ಮುಖದಲ್ಲಿದೆ. ಇದರ ಬಗ್ಗೆ ಶಿಕ್ಷಕ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲು ಶಾಲಾ ಕೊಠಡಿಯನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ದೈನಂದಿನ ಪಾಠ ಪ್ರವಚನಕ್ಕೆ ಕೊಠಡಿಗಳ ಸಮಸ್ಯೆ ಎದುರಾಗಿದೆ. ಬಹುತೇಕ ಶಾಲೆಗಳ ಕಟ್ಟಡಗಳಲ್ಲಿ ಮಳೆಗಾಲದಲ್ಲಿ ನೀರು ಸೋರಿಕೆಯಾಗುತ್ತಿದೆ. ಕೆಲ ಕಟ್ಟಡದ ಆರ್.ಸಿ.ಸಿ ಕಿತ್ತು ಬರುತ್ತಿವೆ ಎಂದರು.
ಅನುದಾನಿತ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ನಿವೃತ್ತರಾದರೆ ಸರ್ಕಾರ ಹೊಸ ನೇಮಕಾತಿಗೆ ಅನುಮತಿ ನೀಡುತ್ತಿಲ್ಲ. ಇದರಿಂದ ಶಿಕ್ಷಕರ ಕೊರತೆ ಕಾಡುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳೂ ಮುಚ್ಚಿ ಹೋಗುವ ಅಪಾಯ ಎದುರಾಗಲಿದೆ ಎಂದು ಮನವಿ ಮಾಡಿದರು.
ಸಭೆಯಲ್ಲಿ ತಾಪಂ ಇಒ ಬಿ.ಎಸ್.ಸತೀಶ್, ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುನಾಥ್, ಅಕ್ಷರ ದಾಸೋಹ ಅಧಿಕಾರಿ ಯತೀಶ್, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಬಸವರಾಜು, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ವೆಂಕಟೇಶ್ ಸೇರಿ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಜರಿದ್ದರು.