ತೆರವಾಗದ ಹಿರೇಕೆರೂರಿನ ದುರ್ಗಾದೇವಿ ಕೆರೆ ಕಾಲುವೆಯ ಗಿಡಗಂಟಿ

KannadaprabhaNewsNetwork |  
Published : Jun 14, 2024, 01:04 AM IST
ಪೊಟೊ ಶಿರ್ಷಿಕೆ ೧೨ ಎಚ್‌ಕೆಆರ್‌೦೧  | Kannada Prabha

ಸಾರಾಂಶ

ಹಿರೇಕೆರೂರು ಪಟ್ಟಣದ ಸುಣ್ಣದ ಕಾಲುವೆಯ ಮಾರ್ಗವಾಗಿ ದುರ್ಗಾದೇವಿ ಕೆರೆಗೆ ಹರಿಯುವ ನೀರಿನ ಕಾಲುವೆಯಲ್ಲಿ ಬೆಳೆದ ಗಿಡಗಂಟಿಗಳನ್ನು ಸಮರ್ಪಕವಾಗಿ ತೆರವು ಮಾಡದೇ ಇರುವುದರಿಂದ ನೀರು ಹರಿದು ಹೋಗದೇ ಸ್ಥಳೀಯರಿಗೆ ತೀವ್ರ ಸಮಸ್ಯೆಯಾಗಿದೆ.

ರವಿ ಮೇಗಳಮನಿ

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಪಟ್ಟಣದ ಸುಣ್ಣದ ಕಾಲುವೆಯ ಮಾರ್ಗವಾಗಿ ದುರ್ಗಾದೇವಿ ಕೆರೆಗೆ ಹರಿಯುವ ನೀರಿನ ಕಾಲುವೆಯಲ್ಲಿ ಬೆಳೆದ ಗಿಡಗಂಟಿಗಳನ್ನು ಸಮರ್ಪಕವಾಗಿ ತೆರವು ಮಾಡದೇ ಇರುವುದರಿಂದ ನೀರು ಹರಿದು ಹೋಗದೇ ಸ್ಥಳೀಯರಿಗೆ ತೀವ್ರ ಸಮಸ್ಯೆಯಾಗಿದೆ.

೧೫ ದಿವಸಗಳ ಹಿಂದೆ ನೆಪ ಮಾತ್ರಕ್ಕೆ ಜೆಸಿಬಿ ಬಳಸಿ ಚನ್ನಳ್ಳಿ ರಸ್ತೆಯವರೆಗೆ, ಅರ್ಧ ಕಾಲುವೆಯ ಗಿಡಗಂಟೆಗಳನ್ನು ಮಾತ್ರ ಸ್ವಚ್ಛಗೊಳಿಸಲಾಗಿದೆ. ಸೇತುವೆ ಮೇಲಿನ ರಸ್ತೆಯಲ್ಲಿ ಕಸ ಹಾಕಲಾಗಿದೆ. ಉಳಿದ ಕಾಲುವೆ ಯಾವ ಕಾರಣಕ್ಕೆ ಹಾಗೆಯೇ ಬಿಡಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಇದರ ಗೋಳು ತಪ್ಪಿದ್ದಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿರೇಕೆರೂರು ತಾಲೂಕಿನಲ್ಲಿಯೇ ದುರ್ಗಾದೇವಿ ಕೆರೆ ಅತಿ ಹಿರಿದಾದ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆನಂತರ ಹಿರೇಕೆರೂರ ಎಂಬ ಹೆಸರು ರೂಢಿಗೆ ಬಂದಿದೆ. ಈ ಕೆರೆ ಒಟ್ಟು ೫೬೩.೨೧ ಎಕರೆ ವಿಸ್ತೀರ್ಣ ಹೊಂದಿದೆ. ೪ ಭಾಗದಲ್ಲಿ ತೂಬುಗಳಿವೆ. ಇದು ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ್ದು, ಒಮ್ಮೆ ಭರ್ತಿಯಾದರೆ ಪಟ್ಟಣ ಸೇರಿದಂತೆ ೬೦ಕ್ಕೂ ಹೆಚ್ಚಿನ ಹಳ್ಳಿಗಳ ಅಂತರ್ಜಲ ವೃದ್ಧಿಯಾಗುತ್ತದೆ. 600 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಪಕ್ಕದ ಶಿಕಾರಿಪುರ ತಾಲೂಕಿನ ಹಿರೇಜಂಬೂರು, ತಡಸನಹಳ್ಳಿ, ಕಡೇನಂದಿಹಳ್ಳಿ, ತಾಲೂಕಿನ ಕಾಲ್ವಿಹಳ್ಳಿ, ಹೊಲಬಿಕೊಂಡ, ಬಾಳಂಬೀಡ, ಹೊಸೂರು, ಹಾದ್ರಿಹಳ್ಳಿ, ಅಬಲೂರ, ನೂಲಗೇರಿ, ದೂಪದಹಳ್ಳಿ, ಸೋಮನಹಳ್ಳಿ, ಎಂ.ಕೆ. ಯತ್ತಿನಹಳ್ಳಿ ಹೀಗೆ ಅನೇಕ ಕೆರೆಗಳ ನೀರು ಹರಿದು ಬಂದರೆ ಮಾತ್ರ ದುರ್ಗಾದೇವಿ ಕೆರೆ ಭರ್ತಿಯಾಗುತ್ತದೆ. ಹೀಗೆ ಹರಿದು ಬರುವ ಸುಣ್ಣದ ಕಾಲುವೆ ಮಾರ್ಗದಲ್ಲಿ ಪಟ್ಟಣದ ಚರಂಡಿ ನೀರು ಕೂಡಾ ಸೇರ್ಪಡೆಯಾಗಿ, ಕೆರೆ ಮಲೀನಗೊಳ್ಳುತ್ತದೆ. ಈ ಕಾಲುವೆಯಲ್ಲಿ ಪ್ರತಿವರ್ಷ ಗಿಡ-ಗಂಟಿಗಳು ಬೆಳೆಯುತ್ತಿದ್ದು, ಇದರಿಂದ ನೀರು ಸರಾಗವಾಗಿ ಹರಿಯದೆ ನಿಂತಲ್ಲೆ ನಿಂತು ಗಬ್ಬು ನಾತ ಬೀರುತ್ತದೆ. ಅಲ್ಲದೆ ಸೊಳ್ಳೆಗಳ ಕಾಟ ವಿಪರಿತವಾಗಿ ರೋಗ-ರುಜಿನಗಳು ಹಬ್ಬತೊಡಗಿವೆ ಎಂಬುದು ಕಾಲುವೆಯ ಅಕ್ಕಪಕ್ಕದಲ್ಲಿ ವಾಸಿಸುವ ಜನರ ಗೋಳಾಟವಾಗಿದೆ.

ಮಳೆಗಾಲ ಆರಂಭಗೊಳ್ಳುವ ಮುಂಚಿತವಾಗಿ ಕಾಲುವೆಯಲ್ಲಿ ಬೆಳೆದ ಗಿಡ-ಗಂಟಿ, ಕಸ ಸ್ವಚ್ಛಗೊಳಿಸಿದರೆ ನೀರು ಸರಾಗವಾಗಿ ಹರಿದು ಕೆರೆಗೆ ಹೋಗುತ್ತದೆ. ಈ ಬಗ್ಗೆ ಪ್ರತಿವರ್ಷ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಮಿನಿವಿಧಾನಸೌಧದ ಪಕ್ಕದಿಂದ ದುರ್ಗಾದೇವಿ ದೇವಸ್ಥಾನಕ್ಕೆ ಹೋಗುವ ದಾರಿಯ ಮಧ್ಯದಲ್ಲಿ ಸೂರ್ಯ ಕಾನ್ವೆಂಟ್ ಶಾಲೆಯ ಎದುರು ಚಿಕ್ಕ ಸೇತುವೆ ನಿರ್ಮಿಸಲಾಗಿದ್ದು, ಪ್ರತಿ ವರ್ಷ ಇಲ್ಲಿ ಕಸ, ಗಿಡ-ಗಂಟಿಗಳು ಸಂಗ್ರಹಗೊಂಡು ನೀರು ಸರಾಗವಾಗಿ ಹರಿಯದೆ, ಅಕ್ಕಪಕ್ಕದ ಮನೆಗಳಿಗೆ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗುತ್ತಿದೆ. ಈ ರಸ್ತೆಯಲ್ಲಿ ಕ್ರೀಡಾಂಗಣ, ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿವೆ. ಸಾವಿರಾರು ವಿದ್ಯಾರ್ಥಿಗಳು ಹಾಗೂ ದೇವಸ್ಥಾನಕ್ಕೆ ಭಕ್ತರು ಈ ಮಾರ್ಗವಾಗಿ ಹೋಗಿಬರುತ್ತಾರೆ. ಕಾಲುವೆಯಲ್ಲಿ ಬೆಳೆದು ನಿಂತ ಗಿಡ-ಗಂಟಿಗಳನ್ನು ಸ್ವಚ್ಛಗೊಳಿಸಬೇಕು ಎಂಬುದು ಸಾರ್ವಜನಿಕ ಒತ್ತಾಯವಾಗಿದೆ.

ಕಾಲುವೆ ಸ್ವಚ್ಛತೆ ಅರ್ಧಕ್ಕೆ ನಿಲ್ಲಿಸಿದ ಕುರಿತಂತೆ ಮಾಹಿತಿ ಕೇಳಲು ಹಾನಗಲ್ಲನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.ಪ್ರತಿ ವರ್ಷ ಸುಣ್ಣದ ಕಾಲುವೆಯಲ್ಲಿ ಗಿಡ-ಗಂಟಿಗಳು ಬೆಳೆಯುತ್ತವೆ ಹಾಗೂ ಕಸ ಸಂಗ್ರಹಗೊಳ್ಳುತ್ತದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ನೀರು ನಿಂತಲ್ಲೆ ನಿಂತು ಗಬ್ಬುನಾತ ಬೀರತೊಡಗಿದೆ. ಅಕ್ಕಪಕ್ಕದಲ್ಲಿ ವಾಸಿಸುವ ಅಂಗಡಿ ಮಾಲೀಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಳೆಗಾಲ ಆರಂಭವಾಗುವ ಮುನ್ನವೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಇದನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಬಾರ್ಕಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ