ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡಗಮಿಜಾರು ಗ್ರಾಮದ ಸ.ನಂ.154/2 ಹಾಗೂ 154 ರಲ್ಲಿ ನಡೆಸುತ್ತಿರುವ ಈ ಬಾಕ್ಸೈಟ್ ಗಣಿಗಾರಿಕೆ ಈ ಭಾಗದ ಜನರನ್ನು ಕಂಗೆಡಿಸಿದೆ. ಪರಿಸರ ಹಾಳಾಗುತ್ತಿದೆ, ಜನರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. 20 ಚಕ್ರಗಳ ಘನವಾಹನಗಳು ದೊಡ್ಡ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆಗಳೂ ಮೂಲಸ್ವರೂಪವನ್ನು ಕಳೆದುಕೊಂಡಿದೆ. ಜನರ ಬದುಕುವ ಹಕ್ಕನ್ನು ಈ ಗಣಿಗಾರಿಕೆ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಗಣಿಗಾರಿಕೆಗೆ ಪಂಚಾಯಿತಿಯಿಂದ ಯಾವುದೇ ಪರವಾನಗಿ ಪಡೆದುಕೊಂಡಿಲ್ಲ. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ತಮ್ಮ ಸಂಕಷ್ಟವನ್ನು ದೂರಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದವರು ಹೇಳಿದರು.ಈ ಗಣಿಗಾರಿಕೆ ನಡೆಸುತ್ತಿರುವ ಭೂಮಿಯು ಹಿಂದೆ ನಿವೃತ್ತ ಸೈನಿಕರಿಗೆ ಮಂಜೂರಾತಿಯಾಗಿದ್ದು, ಮಂಜೂರಾತಿ ಷರತ್ತುಗಳನ್ನು ಮೀರಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಲ್ಲದೆ ಅದಿರು ಸಾಗಿಸುವ ಭೂಮಿಯು ಪರಿಶಿಷ್ಟ ಜಾತಿಯವರಿಗೆ ಸೇರಿದ್ದಾಗಿದ್ದು ಅವರ ಒಪ್ಪಿಗೆ ಪಡೆಯದೇ ದೌರ್ಜನ್ಯ ಎಸಗಲಾಗುತ್ತಿದೆ. ಇದರಲ್ಲಿ ಇಲಾಖಾಧಿಕಾರಿಗಳು ಶಾಮೀಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.
ಸಾಮಾಜಿಕ ಹೋರಾಟಗಾರ, ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಅಮೀನ್ ಕಲ್ಲಮುಂಡ್ಕೂರು, ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ ನಿಡ್ಡೋಡಿ, ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಸದಸ್ಯ ಜನಾರ್ದನ ಗೌಡ, ದಿವ್ಯೇಶ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.