ಎಇಗೆ ಸಸ್ಪೆಂಡ್ । ಎಇಇ ವರ್ಗಾವಣೆಗೆ ಸೂಚನೆ । ಚಿಕ್ಕಮಗಳೂರಿನ ಒಳಚರಂಡಿ- ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಅಸಮರ್ಪಕ ಮಾಹಿತಿ
ಜಿಪಂ ಸಭಾಂಗಣದಲ್ಲಿ ಬುಧವಾರ ನಗರ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸೂಕ್ತ ಮಾಹಿತಿ ನೀಡದೆ ಸಭೆಯಿಂದ ಹೊರಗಡೆ ನಿಂತ ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಸಸ್ಪಂಡ್ ಗೆ ಹಾಗೂ ಎಇಇ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದರು.
ಸಭೆ ಆರಂಭದಲ್ಲಿ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಶಾಸಕ ಎಚ್.ಡಿ. ತಮ್ಮಯ್ಯ ಅವರು, ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ಯಗಚಿ ಡ್ಯಾಮ್ ನಲ್ಲಿ ಅಳವಡಿಸಿರುವ ಎರಡು ಮೋಟಾರ್ ಗಳಲ್ಲಿ ಒಂದು ದುರಸ್ತಿಗೆ ಬಂದಿದೆ. ಇನ್ನು ಮುಗುಳವಳ್ಳಿಯಲ್ಲಿ ಅಳವಡಿಸಿರುವ ಮೋಟಾರ್ ಗಳು ಸಹ ಹಾಳಾಗಿವೆ ಎಂದು ಸಭೆ ಗಮನ ಸೆಳೆದರು.ಈ ವೇಳೆ ಸಭೆಗೆ ಮಾಹಿತಿ ನೀಡಿದ ನಗರ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಮೋಟಾರ್ ಗಳು ಪದೇ ಪದೇ ಕೈ ಕೊಡುತ್ತಿರುವುದರಿಂದಾಗಿ ಹೊಸ ಜಾಕ್ ವೆಲ್ ಹಾಗೂ ಹೊಸ ಮೋಟರ್ ಕೂಡ ಅಳವಡಿಕೆಗೆ ಪ್ರಸ್ತಾವನೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಭೈರತಿ ಸುರೇಶ್ ಒಟ್ಟು ಯೋಜನಾ ವೆಚ್ಚ ಎಷ್ಟು ಎಂದು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ವಿಫಲರಾದರು.
ಶಾಸಕ ತಮ್ಮಯ್ಯ ಮಾತನಾಡಿ, 2018 ರಲ್ಲಿ ಯಗಚಿ ಡ್ಯಾಮ್ ನಲ್ಲಿ ಹಾಗೂ ಮುಗುಳು ವಳಿಯಲ್ಲಿ ಅಳವಡಿಸಲು ಪಂಪುಗಳನ್ನು ಖರೀದಿ ಮಾಡಲಾಗಿತ್ತು. ಆದರೆ, 2019 ರಲ್ಲಿ ಪಂಪುಗಳ ವಾರಂಟಿ ಮುಗಿದಿದೆ. ವಾರಂಟಿ ಮುಗಿದ ಬಳಿಕ 2019-20 ರಲ್ಲಿ ಪಂಪುಗಳನ್ನು ಅಳವಡಿಕೆ ಮಾಡಲಾಗಿದೆ. ಹೀಗಾಗಿ ನಗರಕ್ಕೆ ನೀರು ಒದಗಿಸುವ ಪಂಪುಗಳು ದುರಸ್ತಿಗೆ ಬಂದಲ್ಲಿ ಸ್ಥಳೀಯ ಆಡಳಿತದಿಂದಲೇ ರಿಪೇರಿ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಪಂಪುಗಳು ಕೈಕೊಟ್ಟಲ್ಲಿ ನಗರಕ್ಕೆ ಕನಿಷ್ಠ ಒಂದು ತಿಂಗಳು ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಎಚ್. ಡಿ.ತಮ್ಮಯ್ಯ, 2012ರಲ್ಲಿ ನಗರದಲ್ಲಿ ಯುಜಿಡಿ ಕಾಮಗಾರಿ ಆರಂಭ ಮಾಡಲಾಗಿತ್ತು. 2019ರಲ್ಲಿ ಕಾಮಗಾರಿ ಮುಗಿಯಬೇಕಾಗಿತ್ತು. ಇದೀಗ ಯುಜಿಡಿ ಸಮಸ್ಯೆ ಕಾಣಿಸಿ ಕೊಂಡಿದೆ. ಆದರೆ ನಗರಸಭೆ ಬಳಿಯಾಗಲಿ ಅಥವಾ ಅಧಿಕಾರಿಗಳ ಬಳಿಯಾಗಲಿ, ಯುಜಿಡಿ ಕಾಮಗಾರಿ ಮಾಸ್ಟರ್ ಪ್ರಿಂಟ್ ಡ್ರಾಯಿಂಗ್ ಇಲ್ಲ. ಹೀಗಿರುವಾಗ ಸ್ಟ್ರೈಟ್ ಲೈನ್ ಎಲ್ಲಿ ಹಾದು ಹೋಗಿದೆ ಬೆಂಡ್ ಎಲ್ಲಿದೆ ಎಂಬುದು ನಗರ ಸಭೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಡೂರು, ತರೀಕೆರೆ, ಮೂಡಿಗೆರೆ, ಶೃಂಗೇರಿ, ಕೊಪ್ಪ ಪಟ್ಟಣಗಳಲ್ಲಿಯೂ ತುರ್ತಾಗಿ ಯುಜಿಡಿ ಕಾಮಗಾರಿ ಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.